ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ವೈರಲ್‌ ಮಾಡಿದವರನ್ನೂ ಶಿಕ್ಷಿಸಿ: ದಲಿತ ಸಂಘರ್ಷ ಸಮಿತಿ

Published 6 ಮೇ 2024, 14:41 IST
Last Updated 6 ಮೇ 2024, 14:41 IST
ಅಕ್ಷರ ಗಾತ್ರ

ಮಂಡ್ಯ: ‘ಮಹಿಳೆಯರ ರಕ್ಷಣೆ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಸಂಸದ ಪ್ರಜ್ವಲ್‌ ರೇವಣ್ಣ ಸೇರಿದಂತೆ ಅವರ ವಿಡಿಯೊವೈರಲ್‌ ಮಾಡಿದವರಿಗೂ ಕಠಿಣ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಸರ್‌ಎಂವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.

‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಬಹುದೊಡ್ಡ ಲೈಂಗಿಕ ಹಗರಣ ಕುರಿತು ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಯುವ ಬಗ್ಗೆ ಅನುಮಾನವಿದ್ದು, ಹೈಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ಸಮಗ್ರ ತನಿಖೆ ನಡೆಸಬೇಕು. ರಾಜಕಾರಣಿಗಳ ಹೆಣ್ಣುಬಾಕತನದಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು, ಅಧಿಕಾರ ಹಣ ಬಲದಿಂದ ಕಾನೂನು, ಸಂವಿಧಾನಕ್ಕೆ ಕಿಮ್ಮತ್ತು ನೀಡದ ಜನ ಪ್ರತಿನಿಧಿಗಳಿಗೆ ಕಾರ್ಯಾಂಗ, ಶಾಸಕಾಂಗವೂ ಸಹಕಾರ ನೀಡುತ್ತಿದೆ’ ಎಂದು ಆರೋಪಿಸಿದರು.

‘ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ರಾಜಕೀಯ ತೇಜೋವಧೆ ಮಾಡಲಾಗುತ್ತಿದೆ. ಸಂತ್ರಸ್ತ ಮಹಿಳೆಯರ ಮಾನ ಉಳಿಸುವ ಮತ್ತು ನ್ಯಾಯ ದೊರಕಿಸಿ ಕೊಡುವ ಕೆಲಸ ನಡೆಯುತ್ತಿಲ್ಲ, ಇದುವರೆಗೆ ನಡೆದಿರುವ ಲೈಂಗಿಕ ಹಗರಣದಲ್ಲಿ ಯಾವುದೇ ಒಬ್ಬ ಜನಪ್ರತಿನಿಧಿಗೆ ಶಿಕ್ಷೆಯಾದ ನಿದರ್ಶನವಿಲ್ಲ, ಬದಲಾಗಿ ಕಾನೂನು ವ್ಯವಸ್ಥೆ ಜನಸಾಮಾನ್ಯರನ್ನು ಮಾತ್ರ ಶಿಕ್ಷಿಸುವಂತಾಗಿದೆ’ ಎಂದು ಕಿಡಿಕಾರಿದರು.

ರಾಜ್ಯದ ಮಹಿಳೆಯರ ಮಾನ ಪ್ರಾಣ ಸಂರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ, ಪೆನ್‌ಡ್ರೈವ್ ಬಿಡುಗಡೆ ಮಾಡಿದ ಎಲ್ಲರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

‘ಇಡೀ ಪ್ರಕರಣವನ್ನು ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಲು ನಿರ್ದೇಶಸಬೇಕು. ಸಂತ್ರಸ್ತ ಮಹಿಳೆಯರ ಖಾಸಗಿ ಜೀವನದ ಗೌಪ್ಯತೆ ಕಾಪಾಡಲು ತನಿಖಾ ತಂಡಕ್ಕೆ ಸೂಚಿಸಬೇಕು. ಹಗರಣದ ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹ ಪಡಿಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಅನಿಲ್‌ಕುಮಾರ್, ಕೆ.ಎಂ.ಶ್ರೀನಿವಾಸ್, ಮರಂಕಯ್ಯ, ಎಸ್.ಕುಮಾರ್, ಭಾಗ್ಯಮ್ಮ, ಗೀತಾ ಮೇಲಕೋಟೆ, ಸುಕನ್ಯಾ ದುದ್ದ, ಸೋಮಶೇಖರ್, ಸುರೇಶ್ ಕುಮಾರ್, ಬಿ.ಆನಂದ, ಚನ್ನಕೇಶವ, ರವಿ, ಸುರೇಶ್‌, ದೇವರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT