ಗುರುವಾರ , ಏಪ್ರಿಲ್ 22, 2021
29 °C
ಪ್ರಸ್ತಾವ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚನೆ;

‘ಕೈಗಾರಿಕೆ ಸ್ಥಾಪನೆಗೆ ಬಸ್ತವಾಡ ಬಳಿ 100 ಎಕರೆ ಜಮೀನು ಖರೀದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಉದ್ಯಮಬಾಗ್‌ ಸಮೀಪವಿರುವ ಬಸ್ತವಾಡದಲ್ಲಿ ಸಣ್ಣ ಕೈಗಾರಿಕೆಗಳ ಘಟಕಗಳನ್ನು ಸ್ಥಾಪಿಸಲು 100 ಎಕರೆ ಭೂಮಿ ಖರೀದಿಸಲು ತಕ್ಷಣ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಸ್ಥಳೀಯರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಸಣ್ಣ ಕೈಗಾರಿಕೆಗಳ ಅವಶ್ಯಕತೆ ಇದೆ. ಬಹಳಷ್ಟು ಉದ್ಯಮಿಗಳಿಗೆ ಘಟಕ ಸ್ಥಾಪಿಸಲು ಆಸಕ್ತಿ ಇದೆ. ಆದರೆ, ಅವರಿಗೆ ಸರಿಯಾದ ಭೂಮಿ ಸಿಗುತ್ತಿಲ್ಲ. ಅವರಿಗೆ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 20ರಿಂದ 30 ಎಕರೆ ಜಾಗವನ್ನು ಪಡೆದು, ಕೈಗಾರಿಕಾ ವಲಯ ಸ್ಥಾಪಿಸಲು ಕ್ರಮಕೈಗೊಳ್ಳಬೇಕು’ ಎಂದರು.

‘ಸರ್ಕಾರಿ ಜಾಗ ಇಲ್ಲದಿದ್ದರೆ, ಯಾರಾದರೂ ಖಾಸಗಿ ವ್ಯಕ್ತಿಗಳು ಮಾರಾಟ ಮಾಡಲು ಬಯಸಿದರೆ ಅಂತಹವರಿಂದಲೂ ಖರೀದಿಸಬಹುದು. ನನ್ನ ಯಮಕನಮರಡಿ ಕ್ಷೇತ್ರದಲ್ಲಿ ಜಾಗವೇ ಇಲ್ಲದಂತಾಗಿದೆ. ಇತರ ಪ್ರದೇಶಗಳಲ್ಲಿ ಎಲ್ಲೆಲ್ಲಿ ಜಾಗವಿದೆ?’ ಎಂದು ಕೈಗಾರಿಕಾ ಇಲಾಖೆಗಳ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ, ‘ಬಸ್ತವಾಡ ಬಳಿ 100 ಎಕರೆ ಜಮೀನು ಗುರುತಿಸಲಾಗಿದೆ. ಆ ಜಮೀನುಗಳ ರೈತರೂ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗನೇ ಇದನ್ನು ಖರೀದಿಸಿ, ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು.

ಸಿಸಿಟಿವಿ ಅಳವಡಿಸಿ;

ಎಂ– ಸ್ಯಾಂಡ್‌ (ಕೃತಕ ಮರಳು) ಅಕ್ರಮ ಸಾಗಾಟ ತಡೆಗಟ್ಟಲು ಉತ್ಪಾದನಾ ಘಟಕಗಳಲ್ಲಿ ಹಾಗೂ ಎಲ್ಲ ಮಾರ್ಗಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಸತೀಶ ಸಲಹೆ ನೀಡಿದರು.

ಜಿಲ್ಲೆಯಲ್ಲಿ 48 ಎಂ– ಸ್ಯಾಂಡ್‌ ಘಟಕಗಳು ಹಾಗೂ 10 ನೈಸರ್ಗಿಕ ಮರಳು ಬ್ಲಾಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ 20 ಮರಳು ಬ್ಲಾಕ್‌ಗಳ ಹರಾಜು ಮಾಡಲಾಗಿತ್ತು. ಇದರಲ್ಲಿ 12 ಬ್ಲಾಕ್‌ಗಳನ್ನು ಪಡೆದವರು ಇನ್ನೂ ಹಣ ಕಟ್ಟಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

‘ಅಂತಹ ಘಟಕಗಳ ಮರು ಹರಾಜು ಮಾಡಿ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಸೂಚಿಸಿದರು.

ನೋಟಿಸ್ ನೀಡಿ:

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಜಮೀನು ಪಡೆದುಕೊಂಡು ಇದುವರೆಗೂ ಕೈಗಾರಿಕೆ
ಆರಂಭಿಸದಿರುವವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ:
ವಿವಿಧ ಕಾರ್ಖಾನೆಗಳಿಂದ 6,640 ಮಾದರಿಗಳನ್ನು ಹಾಗೂ ನದಿ ನೀರು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೋಪಾಲಕೃಷ್ಣ ಹೇಳಿದರು.

ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಸಲಹೆ:
ಬೆಳಗಾವಿ ನಗರ ಬೆಳೆಯುತ್ತಿರುವುದರಿಂದ ಮತ್ತೊಂದು ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯ ಅಗತ್ಯವಿದ್ದು, ಈ ಬಗ್ಗೆ ಪ್ರಸ್ತಾವ ತಯಾರಿಸುವಂತೆ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಬೆಳಗಾವಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಸ್ಥಾಪನೆ ಮಾಡುವುದರಿಂದ ತ್ಯಾಜ್ಯ ಸಾಗಾಣಿಕೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ- ಮಾಸ್ಟರ್ ಪ್ಲ್ಯಾನ್ ರೂಪಿಸಿ:
ಬರೀ ದೇವಸ್ಥಾನಗಳ ಆವರಣದಲ್ಲಿ ಯಾತ್ರಿ ನಿವಾಸಗಳನ್ನು ಸ್ಥಾಪಿಸುವ ಬದಲು ಗೋಕಾಕ, ಗೊಡಚಿನಮಲ್ಕಿ, ಸೊಗಲ ಮತ್ತಿತರ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಸಚಿವರು ಸೂಚನೆ ನೀಡಿದರು. 

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಎಚ್.ಬಿ. ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು