ಶನಿವಾರ, ಸೆಪ್ಟೆಂಬರ್ 18, 2021
21 °C
ಚಲುವರಾಯಸ್ವಾಮಿ ವಿರುದ್ಧ ಸಿ.ಎಸ್‌.ಪುಟ್ಟರಾಜು ವಾಗ್ದಾಳಿ

ಹಗಲು ಸಿದ್ದರಾಮಯ್ಯ, ರಾತ್ರಿ ಯಡಿಯೂರಪ್ಪ ಜತೆ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ‘ಎನ್‌.ಚಲುವರಾಯಸ್ವಾಮಿ ಅವರು ಹಗಲು ಹೊತ್ತಿನಲ್ಲಿ ಸಿದ್ದರಾಮಯ್ಯ ಜತೆ, ರಾತ್ರಿ ವೇಳೆ ಯಡಿಯೂರಪ್ಪ ಜತೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಕೆಆರ್‌ಎಸ್‌ಗೆ ವಸತಿ ಸಚಿವ ವಿ.ಸೋಮಣ್ಣ ಅವರ ಜತೆ ಭೇಟಿ ನೀಡಿದ್ದ ಪುಟ್ಟರಾಜು, ಸುದ್ದಿಗಾರರ ಜತೆ ಮಾತನಾಡಿದರು.

‘ಅವರಿಗೆ ಡಿ.ಕೆ.ಶಿವಕುಮಾರ್‌ ಮತ್ತು ಕುಮಾರಸ್ವಾಮಿ ಅವರ ಬಾಂಧವ್ಯ ಗೊತ್ತಿಲ್ಲ. ಹಾಗಾಗಿ ಶಿವಕುಮಾರ್‌ ಅವರ ವಿಷಯದಲ್ಲಿ ಕುಮಾರಸ್ವಾಮಿ ಅವರನ್ನು ಎಳೆದು ತಂದಿದ್ದಾರೆ. ಶಿವಕುಮಾರ್‌ ಹೊರಬಂದ ಬಳಿಕ ಜನರಿಗೆ ಸತ್ಯ ತಿಳಿಯಲಿದೆ. ಚಲುವರಾಯಸ್ವಾಮಿ ಅವರು ಸಚಿವರಾಗಿ, ಸಂಸದರಾಗಿ ಕೆಲಸ ಮಾಡಿದವರು. ಜನರಿಗೆ ಸತ್ಯ ಹೇಳಬೇಕು. ಅವರು ಬಾಳೆಎಲೆ ಆಗಬೇಕೇ ಹೊರತು ಎಂಜಲು ಎಲೆ ಆಗಬಾರದು’ ಎಂದು ಸಲಹೆ ನೀಡಿದರು.

ರಾಜಕೀಯ ಆಶ್ರಯ ನೀಡಿದ ಎಚ್‌.ಡಿ.ದೇವೇಗೌಡರ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವ ಚಲುವರಾಯಸ್ವಾಮಿ, ತಾವು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು‌ ಎಂದು ಒತ್ತಾಯಿಸಿದರು.

‘ಲೋಕಸಭೆ ಚುನಾವಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ನಾನು, ನಿಖಿಲ್‌ ಸೋಲಿನ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದೆ. ಪಕ್ಷದ ವರಿಷ್ಠರು ತಡೆದರು. ಅಂಬರೀಷ್‌ ಅವರ ಮೇಲಿನ ಅಭಿಮಾನದಿಂದ ಮತದಾರರು ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಸುಮಲತಾ ಅವರ ಗೆಲುವಿನಲ್ಲಿ ಚಲುವರಾಯಸ್ವಾಮಿ ಪಾತ್ರ ಎಳ್ಳಷ್ಟೂ ಇಲ್ಲ. ಹಾಗಿದ್ದರೆ ನಾಗಮಂಗಲದಲ್ಲಿ ಸಮಲತಾಗೆ ಏಕೆ ಕಡಿಮೆ ಮತಗಳು ಬಿದ್ದವು ಎಂಬುದಕ್ಕೆ ಅವರು ಉತ್ತರಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು