ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಎಸ್‌ ಅಣೆಕಟ್ಟೆ ಹಿನ್ನೀರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ

Published 9 ಜುಲೈ 2024, 13:27 IST
Last Updated 9 ಜುಲೈ 2024, 13:27 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಣೆಕಟ್ಟೆಯ ಹಿನ್ನೀರಿನಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ಕಟ್ಟಲು ಸಿದ್ಧತೆ  ಆರಂಭಿಸಿದ್ದಾರೆ.

ಕೆಆರ್‌ಎಸ್‌ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೇರಕ್ಕೆ, ಜಲಾಶಯದ ಮಗ್ಗುಲಲ್ಲಿ ಕಟ್ಟಡ ಕಟ್ಟುವ ಉದ್ದೇಶದಿಂದ ಮಣ್ಣು ಸುರಿದು ಮಟ್ಟ ಮಾಡಿದ್ದಾರೆ. ಆ ಸ್ಥಳದಲ್ಲಿ ಕಲ್ಲುಗಳನ್ನೂ ತಂದು ಗುಡ್ಡೆ ಹಾಕಲಾಗಿದೆ. ಕಳೆದ ಒಂದು ವಾರದಿಂದ ಈ ಕೆಲಸ ನಡೆಯುತ್ತಿದೆ. ಜಲಾಶಯ ಭರ್ತಿಯಾದರೆ ಈ ಕಟ್ಟಡದತ್ತ ನೀರು ನುಗ್ಗದಂತೆ ಕಲ್ಲುಗಳಿಂದ ತಡೆ ಗೋಡೆ ನಿರ್ಮಿಸು ಕಾರ್ಯ ನಡೆಯುತ್ತಿದೆ.

‘ಕೆಆರ್‌ಎಸ್‌ ಬಳಿ ಮಾರಮ್ಮನ ದೇವಾಲಯ ಸಮೀಪದ, ರಾಯರಕೋಟೆ ಎಂಬ ಸ್ಥಳದಲ್ಲಿ ಅಣೆಕಟ್ಟೆಯ ನೀರು ನಿಲ್ಲುವ ಜಾಗದಲ್ಲೇ ಕಟ್ಟಡ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಹತ್ತಾರು ಲಾರಿಗಳಷ್ಟು ಮಣ್ಣು ಮತ್ತು ಕಲ್ಲುಗಳನ್ನು ತಂದು ಸುರಿಯಲಾಗಿದೆ. ಕಟ್ಟಡ ನಿರ್ಮಿಸಲು ಸಿದ್ದತೆ ನಡೆಸುತ್ತಿರುವುದು ಒಂದು ಕಿ.ಮೀ. ದೂರದ ವರೆಗೂ ಕಾಣುತ್ತದೆ. ಆದರೂ ಕಾವೇರಿ ನೀರಾವರಿ ನಿಗಮ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ’ ಎಂದು ಬೆಳಗೊಳ ಗ್ರಾಮದ ರೈತ ಮುಖಂಡ ವಿಷಕಂಠು ಆರೋಪಿಸಿದ್ದಾರೆ.

ಕೆಆರ್‌ಎಸ್‌ ಜಲಾಶಯದ ಹಿನ್ನೀರಿನಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಲು ಸಿದ್ದತೆ ನಡೆಯುತ್ತಿದೆ ಎಂಬ ಬಗ್ಗೆ ಮಂಗಳವಾರವಷ್ಟೇ ಮಾಹಿತಿ ಬಂದಿದೆ. ಆದರೆ ಯಾರು, ಯಾವ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ. ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವರದಿ ಬಂದ ಬಳಿಕ ಕೂಲಂಕಶವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಕಿಶೋರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT