ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ವಿತರಿಸಲು ಆಗ್ರಹ

Last Updated 10 ನವೆಂಬರ್ 2020, 12:47 IST
ಅಕ್ಷರ ಗಾತ್ರ

ಮಂಡ್ಯ: ರಜಾ ದಿನಗಳು ಸೇರಿದಂತೆ ಮಕ್ಕಳಿಗೆಬಿಸಿಯೂಟದ ಆಹಾರ ಧಾನ್ಯಗಳನ್ನು ಪೂರೈಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕೊರೊನಾ ಸೋಂಕಿನ ಕಾರಣದಿಂದ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಮುಚ್ಚಿದ ಪರಿಣಾಮ ಮಕ್ಕಳ ಮನೆ ಮನೆಗೆ ಪೂರೈಕೆ ಮಾಡಬೇಕಾದ ಆಹಾರ ಧಾನ್ಯಗಳನ್ನು ಪೂರೈಸದೆ ಗೋದಾಮುಗಳಲ್ಲಿ ಇಟ್ಟು ಹುಳು ಹಿಡಿಯುವಂತೆ ಮಾಡಲಾಗಿದೆ. 43 ಸಾವಿರ ಟನ್‌ ಅಕ್ಕಿ, 1,716 ಟನ್‌ ಗೋಧಿ, 12 ಸಾವಿರ ಟನ್‌ ಬೇಳೆ ಸೇರಿದಂತೆ ಅಡುಗೆ ಎಣ್ಣೆ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಗೋದಾಮುಗಳಲ್ಲಿ ಸಂಗ್ರಹ ಮಾಡಿರುವ ಆಹಾರ ಧಾನ್ಯಗಳನ್ನು ವಿತರಿಸದಂತೆ ತಡೆ ಹಿಡಿದ ಆರ್ಥಿಕ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಉಪಯೋಗಕ್ಕೆ ಯೋಗ್ಯವಾದ ಧಾನ್ಯಗಳನ್ನು ಅಗತ್ಯವಿರುವವರಿಗೆ ಹೆಚ್ಚುವರಿಯಾಗಿ ನೀಡಬೇಕು. ತಕ್ಷಣವೇ ಕೇರಳ ಮಾದರಿಯಲ್ಲಿ ಮಧ್ಯಾಹ್ನದ ಬಿಸಿಯೂಟದ ಎಲ್ಲಾ ಫಲಾನುಭವಿ ಮಕ್ಕಳಿಗೆ ತಾರತಮ್ಯವಿಲ್ಲದೆ ಹಂಚಬೇಕು’ ಎಂದು ಅವರು ಒತ್ತಾಯಿಸಿದರು.

‌‘ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ಜೀವನ ನಡೆಸಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿಸಿರುವ ವಿದ್ಯುತ್‌ ದರವನ್ನು ಕೂಡಲೇ ಇಳಿಸಬೇಕು. ಬಲೆ ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೌದೆಯಲ್ಲಿ ಅಡುಗೆ ಮಾಡುವ ಮೂಲಕ ಅಸಮಾಧಾನ ಹೊರಹಾಕಿದರು.

ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ, ಖಜಾಂಚಿ ಮಂಜುಳಾ, ಕಾರ್ಯದರ್ಶಿ ಸುಶೀಲಾ, ಉಪಾಧ್ಯಕ್ಷೆ ಲತಾ, ಪ್ರೇಮಾ, ಜಯಶೀಲಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT