ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕೀರ್ತನಾ ಯಾತ್ರೆ | ಪೊಲೀಸ್‌ ಸರ್ಪಗಾವಲು: ಡ್ರೋನ್ ಕಣ್ಗಾವಲು

ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ
Published 23 ಡಿಸೆಂಬರ್ 2023, 14:17 IST
Last Updated 23 ಡಿಸೆಂಬರ್ 2023, 14:17 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ಭಾನುವಾರ ಆಯೋಜಿಸಿರುವ ಮೂಡಲ ಬಾಗಿಲು ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಅಂಗವಾಗಿ ಯಾತ್ರೆ ಸಾಗುವ ಮಾರ್ಗದ ಉದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಳೆದ ವರ್ಷ ನಡೆದ ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಗಂಜಾಂನಲ್ಲಿ ಅಲ್ಪಸಂಖ್ಯಾತರ ಮನೆಯ ಮೇಲೆ ಹಾರಾಡುತ್ತಿದ್ದ ಭಗವಾಧ್ವಜವನ್ನು ಕಿತ್ತುಹಾಕಲಾಗಿತ್ತು. ಟಿಪ್ಪು ಮಸೀದಿ ಬಳಿ ಘರ್ಷಣೆ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಗಂಜಾಂನ ಆಂಜನೇಯಸ್ವಾಮಿ ದೇವಾಲಯ, ಟಿಪ್ಪು ಬೇಸಿಗೆ ಅರಮನೆ, ಬೆಂಗಳೂರು ಮೈಸೂರು ಹೆದ್ದಾರಿ ಬಳಿಯ ಕುವೆಂಪು ವೃತ್ತ, ಟಿಪ್ಪು (ಜಾಮಿಯಾ) ಮಸೀದಿ ಆಸುಪಾಸಿನಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಸಾವಿರ ಪೊಲೀಸರು:

ಗಂಜಾಂ ಮತ್ತು ಪಟ್ಟಣದಲ್ಲಿ 10 ಕೆಎಸ್‌ಆರ್‌ಪಿ ತುಕಡಿ, 10 ಡಿಎಆರ್‌ ತುಕಡಿ, 1500 ಸಿವಿಲ್‌ ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್ಪಿ, ಇಬ್ಬರು ಹೆಚ್ಚುವರಿ ಎಸ್ಪಿ ಜತೆಗೆ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐಗಳು ಸೇರಿ 200 ಮಂದಿ ಅಧಿಕಾರಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಒಂದು ತುಕಡಿ ಕ್ಷಿಪ್ರ ಕಾರ್ಯಪಡೆ ಹಾಗೂ ಡ್ರೋನ್‌ ಕ್ಯಾಮೆರಾಗಳನ್ನೂ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಶ್ರೀರಂಗಪಟ್ಟಣದ ಕೆಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಹಿಂದೂ ಜಾಗರಣಾ ನಿರ್ಮಿಸಿರುವ ಮೂಡಲ ಬಾಗಿಲು ಹನುಮಾನ್‌ ದ್ವಾರ
ಶ್ರೀರಂಗಪಟ್ಟಣದ ಕೆಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಹಿಂದೂ ಜಾಗರಣಾ ನಿರ್ಮಿಸಿರುವ ಮೂಡಲ ಬಾಗಿಲು ಹನುಮಾನ್‌ ದ್ವಾರ

ಪಥ ಸಂಚಲನ:

ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಜಾಗೃತಿ ಮೂಡಿಸಲು ಶನಿವಾರ ಸಂಜೆ ಪೊಲೀಸರು ಪಥ ಸಂಚಲನ ನಡೆಸಿದರು. ಗಂಜಾಂನಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ ಸಿವಿಲ್‌ ಪೊಲೀಸರು, ಡಿಎಆರ್‌ ತುಕಡಿ, ಕೆಎಸ್‌ಆರ್‌ಪಿ ತುಕಡಿ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಪಥ ಸಂಚಲನ ನಡೆಸಿತು.

ಶ್ರೀರಂಗಪಟ್ಟಣದಲ್ಲಿ ಕ್ಷಿಪ್ರ ಕಾರ್ಯಪಡೆ ಮತ್ತು ಸಿವಿಲ್‌ ಪೊಲೀಸರು ಶನಿವಾರ ಪಥ ಸಂಚಲನ ನಡೆಸಿದರು
ಶ್ರೀರಂಗಪಟ್ಟಣದಲ್ಲಿ ಕ್ಷಿಪ್ರ ಕಾರ್ಯಪಡೆ ಮತ್ತು ಸಿವಿಲ್‌ ಪೊಲೀಸರು ಶನಿವಾರ ಪಥ ಸಂಚಲನ ನಡೆಸಿದರು

10 ಸಾವಿರ ಮಂದಿ ನಿರೀಕ್ಷೆ:

ಹನುಮಾನ್‌ ಮಾಲಾಧಾರಿಗಳು ಮತ್ತು ಶ್ರೀರಾಮ ಮತ್ತು ಹನುಮ ಭಕ್ತರು ಸೇರಿ 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಿಂದ ಹನುಮಾನ್‌ ಭಕ್ತರು ಆಗಮಿಸಲಿದ್ದಾರೆ. ಭಾನುವಾರ ಬೆಳಿಗ್ಗೆ 10.30ಕ್ಕೆ ಗಂಜಾಂ ನಿಮಿಷಾಂಬಾ ದೇವಾಲಯ ಬಳಿ ಬಹಿರಂಗ ಸಭೆ ನಡೆಯಲಿದ್ದು, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಳವಳ್ಳಿ ರಾಮರೂಢ ಮಠದ ಪುಂಡಲೀಕಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಕೆ. ಚಂದನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT