ಶನಿವಾರ, ಮೇ 28, 2022
31 °C
1 ದಿನಕ್ಕೆ ಮಾತ್ರ ಮಾತ್ರೆ ವಿತರಣೆ, ಪೂರೈಕೆ ಕೊರತೆ ಎನ್ನುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ

ಔಷಧಿ ಕೊರತೆ: ಅಲೆದಾಡುತ್ತಿರುವ ಸೋಂಕಿತರು

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮನೆಯಲ್ಲೇ ಪ್ರತ್ಯೇಕವಾಗಿರುವ (ಹೋಂ ಐಸೊಲೇಷನ್‌) ಕೋವಿಡ್‌ ರೋಗಿಗಳಿಗೆ ನಿಯಮಾನುಸಾರ 7 ದಿನಗಳವರೆಗೆ ಔಷಧಿ ಕೊಡಬೇಕು. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಕೇವಲ 1 ದಿನಕ್ಕೆ ಮಾತ್ರೆ ನೀಡುತ್ತಿದ್ದು ರೋಗಿಗಳು ಮಾತ್ರೆ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ರೋಗದ ನಡುವೆಯೇ ಹೊರಗೆ ಓಡಾಡುತ್ತಿರುವ ಕಾರಣ ಸೋಂಕು ಮತ್ತಷ್ಟು ಹೆಚ್ಚಳವಾಗುತ್ತಿದೆ.

ಜಿಲ್ಲೆಯಾದ್ಯಂತ 3 ಸಾವಿರಕ್ಕೂ ಹೆಚ್ಚು ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿದ್ದಾರೆ. ಕೋವಿಡ್‌ ಪರೀಕ್ಷೆ ನಡೆಸಿದ ನಂತರ ಅವರಿಗೆ ಪಾಸಿಟಿವ್‌ ಬಂದಿದೆ ಎಂದು ತಿಳಿಸಲು ಮಾತ್ರ ಆರೋಗ್ಯ ಇಲಾಖೆ ಸಿಬ್ಬಂದಿ ಕರೆ ಮಾಡುತ್ತಾರೆ. ಉಳಿದಂತೆ ಚಿಕಿತ್ಸೆ, ಮಾತ್ರೆ ಸಂಬಂಧ ಯಾವುದೇ ಮಾರ್ಗದರ್ಶನ ಇಲ್ಲ. ಸೋಂಕಿತರು ಔಷಧಿ ಪಡೆಯಬೇಕಾದರೆ ಸಮೀಪದ ಕೋವಿಡ್‌ ಕೇರ್‌ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿ ಪಡೆಯಬೇಕು.

ಕೋವಿಡ್ ಕೇರ್‌ ಕೇಂದ್ರದಲ್ಲಿ ಒಂದು ದಿನಕ್ಕೆ ಅವಶ್ಯವಾಗಿರುವ ಮಾತ್ರೆ ಕೊಡುತ್ತಿದ್ದಾರೆ. ಸೋಂಕಿನಿಂದ ಗುಣಮುಖರಾಗಲು 7 ದಿನ ಔಷಧಿ ಪಡೆಯಬೇಕು. 1 ದಿನಕ್ಕೆ ಮಾತ್ರೆ ಕೊಟ್ಟು ಉಳಿದ ದಿನಗಳಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಡೆಯಿರಿ ಎಂದು ತಿಳಿಸುತ್ತಿದ್ದಾರೆ. ಸೋಂಕಿತರು ಅನಿವಾರ್ಯವಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಇದ್ದು ಸೋಂಕು ದಿನದಿಂದ ದಿನಕ್ಕೆ ಹಲವು ಪಟ್ಟು ಹೆಚ್ಚಾಗುತ್ತಿದೆ. ಔಷಧಿ ಪೂರೈಕೆ ಕೊರತೆ ಕಾರಣ ಹೇಳುತ್ತಿರುವ ಕೋವಿಡ್‌ ಕೇರ್‌ ಕೇಂದ್ರಗಳ ಸಿಬ್ಬಂದಿ ಸೋಂಕಿತರು ಹೊರಗೆ ಓಡಾಡಲು ಕಾರಣವಾಗಿದ್ದಾರೆ.

‘ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ಗೊತ್ತಾದ ನಂತರ ನಾನು ಮಂಡ್ಯದ ಒಕ್ಕಲಿಗರ ಭವನಕ್ಕೆ ತೆರಳಿದೆ. ಮನೆಯಲ್ಲೇ ಪ್ರತ್ಯೇಕ ಇರುವುದಾಗಿ ಪತ್ರ ಬರೆದುಕೊಟ್ಟೆ. ನಂತರ 1 ದಿನಕ್ಕೆ ಮಾತ್ರ ಔಷಧಿ ಕೊಟ್ಟರು. ಪ್ರತಿದಿನ ಗುತ್ತಲಿನ ಪ್ರಾಥಮಿಕ ಕೇಂದ್ರಕ್ಕೆ ತೆರಳಿ ಔಷಧಿ ಪಡೆಯುತ್ತಿದ್ದೇನೆ. ನಮ್ಮ ಮನೆಯಲ್ಲಿ ಎಲ್ಲರಿಗೂ ಪಾಸಿಟಿವ್‌ ಇರುವ ಕಾರಣ ಸೋಂಕು ಇದ್ದರೂ ನಾನು ಅನಿವಾರ್ಯವಾಗಿ ಹೊರಗೆ ಓಡಾಡಬೇಕಾಗಿದೆ’ ಎಂದು ಅಶೋಕ್‌ ನಗರದ ಸೋಂಕಿತರೊಬ್ಬರು ತಿಳಿಸಿದರು.

ಗೊಂದಲ: ಮನೆಯಲ್ಲೇ ಇರುವ ರೋಗಿಗಳು ಕೋವಿಡ್‌ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 1, 2ನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ರೋಗಿಗಳ ಮನೆಗೆ ಭೇಟಿ ನೀಡಿ ಆರೋಗ್ಯ ಮಾಹಿತಿ ನೀಡುತ್ತಿದ್ದರು. ಆದರೆ ಈ ಬಾರಿ ಸೋಂಕಿತರ ಮನೆಗಳಿಗೆ ಯಾರೂ ಭೇಟಿ ನೀಡುತ್ತಿಲ್ಲ, ಹೀಗಾಗಿ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಭಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

‘ಕೋವಿಡ್‌ ಪಾಸಿಟಿವ್‌ ಆದ ಮೊದಲ ದಿನ ಯಾವುದೇ ಸಮಸ್ಯೆ ಇರಲಿಲ್ಲ. 2ನೇ ದಿನಕ್ಕೆ ವಿಪರೀತ ಕೆಮ್ಮು ಆರಂಭವಾಯಿತು. ವೀಜಿಂಗ್‌ ಕೂಡ ಹೆಚ್ಚಾಯಿತು. ಭಯದಿಂದ ನಾನು ಮಂಡ್ಯದ ಸ್ಯಾಂಜೊ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಸೋಂಕಿತರೊಬ್ಬರು ತಿಳಿಸಿದರು.

ಆ್ಯಂಟಿಬಯೋಟಿಕ್ಸ್‌: ಕೃತಕ ಕೊರತೆ?

ಮನೆಯಲ್ಲೇ ಪ್ರತ್ಯೇಕವಾಗಿರುವ ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ (ಆ್ಯಂಟಿಬಯೋಟಿಕ್ಸ್‌) ಮಾತ್ರೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡುತ್ತಿಲ್ಲ. ಕೆಮ್ಮು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳು ಕಡ್ಡಾಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ತೆಗೆದುಕೊಳ್ಳಬೇಕು. ಪೂರೈಕೆ ಇಲ್ಲ ಎಂಬ ಕಾರಣ ನೀಡುತ್ತಿರುವ ವೈದ್ಯರು ಆ್ಯಂಟಿಬಯೋಟಿಕ್ಸ್‌ ನೀಡುತ್ತಿಲ್ಲ. ಹೀಗಾಗಿ ರೋಗಿಗಳು ಖಾಸಗಿ ಮೆಡಿಕಲ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಖಾಸಗಿ ಮೆಡಿಕಲ್‌ ಸ್ಟೋರ್‌ಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿಬಯೋಟಿಕ್ಸ್‌ ಕೃತಕ ಕೊರತೆ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲಾಗಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ’ ಎಂದು ಆರೋಗ್ಯ ಇಲಾಖೆ ಕಾರ್ಯಕರ್ತರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು