ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಬದುಕಿನ ಕುರಿತ ಪ್ರಜಾವಾಣಿ ವರದಿಗಳನ್ನು ಪ್ರದರ್ಶಿಸಿದ ಸಿದ್ದರಾಮಯ್ಯ

Last Updated 31 ಅಕ್ಟೋಬರ್ 2019, 12:07 IST
ಅಕ್ಷರ ಗಾತ್ರ

ಮಂಡ್ಯ: ‘ಸರ್ಕಾರದ ನೆರವಿಗಾಗಿ ಕಾಯುತ್ತಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸಂಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಪ್ರಜಾವಾಣಿ ಹಾಗೂ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ನಿರಂತರವಾಗಿ ವರದಿ ಮಾಡುತ್ತಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಹೇಳಿದರು.

ಸಂತ್ರಸ್ತರ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ 10ಕ್ಕೂ ಹೆಚ್ಚು ವಿಶೇಷ ವರದಿಗಳ ಜೆರಾಕ್ಸ್‌ ಪ್ರತಿಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

‘ಸಂತ್ರಸ್ತರ ವಿಚಾರದಲ್ಲಿ ವಿರೋಧ ಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆರೋಪಿಸುತ್ತಾರೆ. ಆದರೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಸುಳ್ಳಾ’ ಎಂದು ಪ್ರಶ್ನಿಸಿದರು.

‘ಸಂತ್ರಸ್ತರು ರಸ್ತೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾರೆ, ದೇವಾಲಯಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರು ಯಾರಿಗೆ ಪರಿಹಾರ ಕೊಟ್ಟಿದ್ದಾರೆ ಎಂಬ ಬಗ್ಗೆ ವಿವರ ಕೊಡಬೇಕು. ₹ 35,160 ಕೋಟಿ ನಷ್ಟವಾಗಿದೆ ಎಂದು ಬಿಜೆಪಿಯವರೇ ಸಮೀಕ್ಷೆ ನಡೆಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಶೇ 10ರಷ್ಟು ಹಣವನ್ನೂ ಕೊಟ್ಟಿಲ್ಲ. ಬಾದಾಮಿ ಕ್ಷೇತ್ರವೊಂದರಲ್ಲೇ 43 ಸಾವಿರ ಮನೆಗಳಿಗೆ ಹಾನಿಯಾಗಿದೆ. ನನ್ನ ಬಳಿ ಮಾಹಿತಿ ಇದೆ, ಬಹುತೇಕ ಮಂದಿಗೆ ಪರಿಹಾರ ಸಿಕ್ಕಿಲ್ಲ’ ಎಂದು ಆರೋಪಿಸಿದರು.

‘ಒಬ್ಬನೇ ಒಬ್ಬ ರೈತನಿಗೂ ಬೆಳೆ ಪರಿಹಾರ ಕೊಟ್ಟಿಲ್ಲ. ಹಾನಿಯಾದ ಅಂಗಡಿ, ಮುಂಗಟ್ಟುಗಳಿಗೆ, ನೇಕಾರರ ಮಗ್ಗಗಳಿಗೂ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರಾದ ತಾಲ್ಲೂಕುಗಳಲ್ಲಿ ನನ್ನ ಕ್ಷೇತ್ರವೂ ಒಂದು. ಹೀಗಾಗಿ ನಾನು ಪ್ರಶ್ನೆ ಮಾಡದೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

₹ 800 ಕೋಟಿ ಹಾಲಿನ ಸಬ್ಸಿಡಿ ಬಾಕಿ: ‘ನನ್ನ ಅಧಿಕಾರಾವಧಿಯಲ್ಲಿ ರೈತರ ಪ್ರತಿ ಲೀಟರ್‌ ಹಾಲಿಗೆ ₹ 5 ಸಹಾಯಧನ ನೀಡಿದ್ದೆ. ಕಳೆದ ಆರು ತಿಂಗಳಿಂದ ರೈತರ ಖಾತೆಗೆ ಸಬ್ಸಿಡಿ ಹಣ ಬಂದಿಲ್ಲ. ₹ 800 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಹೈನುಗಾರಿಕೆ ಮೂಲಕ ಜೀವನ ಮಾಡುತ್ತಿರುವ ರೈತರಿಗೆ ಯಡಿಯೂರಪ್ಪ ಅವರು ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಅತಿಯಾದ ಉತ್ಸಾಹ ತೋರುತ್ತಿದೆ. ಇದರ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದರು.

ಟಿಪ್ಪು: ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಟಿಪ್ಪು ಸುಲ್ತಾನ್‌ ಕುರಿತು ಇತಿಹಾಸ ಹೇಗಿದೆಯೋ ಹಾಗೆಯೇ ಉಳಿಯಬೇಕು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ರಾಜಕೀಯ ದ್ವೇಷ ಮಾಡುತ್ತಿದೆ. ಪಠ್ಯ ಬೇಕೋ, ಬೇಡವೋ ಎಂದು ನಿರ್ಧರಿಸಲು ಸಮಿತಿ ರಚಿಸಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಇತಿಹಾಸದಿಂದ ಭವಿಷ್ಯ ನಿರ್ಧಾರವಾಗುತ್ತದೆ. ಚರಿತ್ರೆಯನ್ನು ತಿರುಚಿದರೆ ಅದಕ್ಕೆ ಅಪಚಾರ ಮಾಡಿದಂತಾಗುತ್ತದೆ. ಹೈದರಾಲಿ, ಟಿಪ್ಪು ಇಲ್ಲದೆ ಮೈಸೂರು ರಾಜ್ಯ ಅಪೂರ್ಣವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT