ಮಳವಳ್ಳಿ: ಕಳಂಕರಹಿತ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಸಲು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಹುನ್ನಾರ ಫಲಿಸುವುದಿಲ್ಲ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕಿಡಿ ಕಾರಿದರು.
ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯ ಅರ್ಜಿಗೆ ನೋಟಿಸ್ ಕೊಡುವ ರಾಜ್ಯಪಾಲರು, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೇಳಿ 8 ತಿಂಗಳು ಕಳೆದರೂ ಏಕೆ ನೀಡಿಲ್ಲ. ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಅವರ ವಿರುದ್ಧ ನೀಡದ ಆದೇಶ ಸಿದ್ದರಾಮಯ್ಯ ಅವರ ಮೇಲೇಕೆ? ವಿರೋದ ಪಕ್ಷದ ನಾಯಕ ಆರ್.ಆಶೋಕ ಕಂದಾಯ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ ಮಾಡಿರುವ ಹಗರಣಗಳ ದಾಖಲೆಗಳು ನನ್ನ ಬಳಿ ಇವೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 136 ಸೀಟು ಗೆದ್ದಿದ್ದಕ್ಕೆ ಕುಮಾರಸ್ವಾಮಿ ಅವರಿಗೆ ಹೊಟ್ಟೆ ಕಿಚ್ಚು ಬಂದು ಓಡಿ ಹೋಗಿ ಮೋದಿ ಕಾಲು ಕಟ್ಟಿಕೊಂಡು ಬಿಜೆಪಿ ಜೊತೆ ಸೇರಿದ್ದಾರೆ. ಸಿದ್ದರಾಮಯ್ಯ ಅವರನ್ನು ಏನು ಮಾಡಲು ಆಗುವುದಿಲ್ಲ. ಮೋದಿ, ಅಮಿತ್ ಶಾ ಹೇಡಿ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮದು ವಂಚನೆ, ದ್ರೋಹ, ಸ್ವಜನ ಪಕ್ಷಪಾತ ರಾಜಕಾರಣ’ ಎಂದು ಕಿಡಿ ಕಾರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ‘ವಾಮಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರಯತ್ನಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ‘ಅಹಿಂದ ನಾಯಕ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಂದಿಸುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ಬಿಜೆಪಿ –ಜೆಡಿಎಸ್ ನಾಯಕರ ಒತ್ತಾಯದಂತೆ ತನಿಖೆಗೆ ಆದೇಶ ನೀಡುವ ಮೂಲಕ ರಾಜ್ಯಪಾಲರು ಸಂವಿಧಾನದ ಆಶಯಗಳ ವಿರುದ್ಧವಾಗಿ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ ಅನಂತ್ ರಾಂ ವೃತ್ತದ ಬಳಿ ಜಮಾಯಿಸಿ ರಾಜ್ಯಪಾಲರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಗೆ ಶಾಸಕರ ನೇತೃತ್ವದಲ್ಲಿ ತೆರಳಿ ತಹಶೀಲ್ದಾರ್ ಕೆ.ಎನ್.ಲೋಕೇಶ್ ಅವರ ಮೂಲಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ಎಂ.ಆರ್. ರಾಜಶೇಖರ್, ಪ್ರಮುಖರಾದ ಎಂ.ಎಲ್. ಸುರೇಶ್, ಬಿ. ಪುಟ್ಟಬಸವಯ್ಯ, ಆರ್.ಎನ್. ವಿಶ್ವಾಸ್, ಸುಜಾತಾ ಕೆ.ಎಂ. ಪುಟ್ಟು, ಸುಷ್ಮಾ ರಾಜು, ಚಂದ್ರಕುಮಾರ್, ಸಿ. ಮಾಧು, ಕೆ.ಜೆ. ದೇವರಾಜು, ಎಚ್.ಬಿ. ಬಸವೇಶ್, ಮುಟ್ಟನಹಳ್ಳಿ ಅಂಬರೀಶ್, ಸವಿತಾ, ಎಚ್.ಕೆ. ಕೃಷ್ಣಮೂರ್ತಿ, ಶಿವಮೂರ್ತಿ, ಕಿರಣ್ ಶಂಕರ್, ಕೆ.ಶ್ರೀನಿವಾಸ್, ಬಂಕ್ ಮಹದೇವು, ದಿಲೀಪ್ ಕುಮಾರ್(ವಿಶ್ವ), ಟಿ.ಎಂ.ಪ್ರಕಾಶ್ ಇದ್ದರು.
ಎಚ್.ಡಿ. ಕುಮಾರಸ್ವಾಮಿಗೆ ಕಾಂಗ್ರೆಸ್ ಕಂಡರೆ ಹೊಟ್ಟೆಕಿಚ್ಚು ವಾಮಮಾರ್ಗದಿಂದ ಸರ್ಕಾರ ಅಸ್ಥಿರಗೊಳಿಸುವುದು ಅಸಾಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕರಹಿತ ರಾಜಕಾರಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.