ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಬೆಲೆ ಕುಸಿತ: ರೇಷ್ಮೆ ಬೆಳೆಗಾರರು ಕಂಗಾಲು

ಲಾಕ್‌ಡೌನ್ ನಂತರ ಕಂಗಾಲಾದ ಬೆಳೆಗಾರರು, ಖರೀದಿ ಮಾಡದ ರೀಲರ್ಸ್‌
Last Updated 1 ಜೂನ್ 2020, 20:15 IST
ಅಕ್ಷರ ಗಾತ್ರ

ಮಳವಳ್ಳಿ: ಕಳೆದ ಎರಡು ತಿಂಗಳಿಂದ ಹಂತ-ಹಂತವಾಗಿ ರೇಷ್ಮೆಗೂಡಿನ ಬೆಲೆ ಕುಸಿಯುತ್ತಾ ಬರುತ್ತಿದ್ದು, ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್ ಸಂಕಷ್ಟ ಸ್ಥಿತಿಯಲ್ಲಿದ್ದಾರೆ.

ತಾಲ್ಲೂಕಿನ ಬುಗತಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ರೇಷ್ಮೆ ಮಾರುಕಟ್ಟೆ ಇದ್ದು, ಮಳವಳ್ಳಿ, ಮದ್ದೂರು, ಮಂಡ್ಯ ಸೇರಿದಂತೆ ಸುತ್ತಮುತ್ತಲ ತಾಲ್ಲೂಕಿನ ರೈತರು ಈ ಮಾರುಕಟ್ಟೆ ಅವಲಂಬಿಸಿದ್ದಾರೆ. ಲಾಕ್‌ಡೌನ್ ನಡುವೆಯೂ ರೇಷ್ಮೆ ಗೂಡು ಹೆಚ್ಚು ಉತ್ಪಾದನೆಯಾಗಿರುವುದು ಒಂದೆಡೆಯಾದರೆ, ರೀಲರ್ಸ್‌ಗಳು ಗೂಡುಗಳನ್ನು ಖರೀದಿಸಲು ಹಿಂಜರಿಯುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿದ ಗೂಡನ್ನು ನೂಲನ್ನಾಗಿ ಪರಿವರ್ತಿಸಿ ರೀಲರ್ಸ್‌ಗಳು ಮಾರಾಟ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ರೇಷ್ಮೆ ನೂಲು ಖರೀದಿಸಲು ಬಾರದ ಕಾರಣ ರೈತರಿಂದ ಖರೀದಿಸುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ.

‘ಬೇರೆಯವರ ಜಮೀನು ಭೋಗ್ಯಕ್ಕೆ ಪಡೆದು ಅಪಾರ ಬಂಡವಾಳ ಹಾಕಿ ಬೆಳೆಯಲಾಗಿದ್ದು, ಹಿಂದೆಲ್ಲಾ ಹಾಕಿದ ಶ್ರಮ, ಹಣಕ್ಕೆ ಮೋಸವಾಗುತ್ತಿರಲಿಲ್ಲ. ಈ ಬಾರಿ ಲಾಕ್‌ಡೌನ್‌ನಿಂದ ಸಾಕಷ್ಟು ಸಮಸ್ಯೆಯಾಗಿದೆ. ಇದಕ್ಕೂ ಮುನ್ನ ಗೂಡು ಮಾರುವ ಸಂದರ್ಭದಲ್ಲೇ ಹಣ ನೀಡಿ ಗೂಡು ಖರೀದಿಸುತ್ತಿದ್ದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಗೂಡು ಖರೀದಿಸಿದ ರೀಲರ್ಸ್‌ಗಳು 15-20 ದಿನವಾದರೂ ಹಣ ನೀಡುತ್ತಿಲ್ಲ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಸಹಾಯಧನ ನೀಡಬೇಕು’ ಎಂದು ಕಾಗೇಪುರದ ರೇಷ್ಮೆ ಬೆಳೆಗಾರ ಮಹೇಂದ್ರ ಆಗ್ರಹಿಸಿದರು.

‘ಕೊರೊನಾ ರಾಜ್ಯಕ್ಕೆ ಕಾಲಿಡುವ ಮುನ್ನ ಸಾಕಷ್ಟು ಖುಷಿಯಲ್ಲಿ ಮಾರುಕಟ್ಟೆಗೆ ಬಂದು ರೇಷ್ಮೆಗೂಡು ಮಾರಾಟ ಮಾಡಿ ಕೈ ತುಂಬಾ ಹಣ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ರೈತರು ದರ ಕುಸಿತದ ನಷ್ಟದಿಂದ ಅವರ ಜೀವನಕ್ಕೆ ಬರಸಿಡಿಲು ಬಡಿದದಂತಾಗಿದೆ. ಕೊರೊನಾ ಸೋಂಕಿನ ಹೊಡೆತಕ್ಕೆ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ’ ಎಂದ ರೀಲರ್ಸ್ ಸಂಘದ ಅಧ್ಯಕ್ಷ ಮನ್ಸೂರ್ ಪಾಷ ಹೇಳಿದರು.

ಕೆ.ಜಿಗೆ ₹ 200 ಕುಸಿತ: ರೇಷ್ಮೆ ಮಾರುಕಟ್ಟೆಗೆ ಪ್ರತಿದಿನ ಸರಾಸರಿ 2-3 ಟನ್ ನಷ್ಟು ರೇಷ್ಮೆಗೂಡು ಬರುತ್ತಿದ್ದು, ಲಾಕ್‌ಡೌನ್‌ಗೆ ಮೊದಲು ಪ್ರತಿ ಕೆ.ಜಿ ₹ 350-450 ಬೆಲೆ ಇತ್ತು. ಲಾಕ್‌ಡೌನ್‌ ನಂತರ ಹಂತ-ಹಂತವಾಗಿ ದರ ಕುಸಿತಗೊಂಡಿದ್ದು, ಪ್ರಸ್ತುತ ಪ್ರತಿ ಕೆ.ಜಿ.ಗೆ ₹ 170-220 ಮಾರಾಟವಾಗುತ್ತಿದೆ. ಇದರಿಂದಾಗಿ ನೂರಾರು ಕೆ.ಜಿ ರೇಷ್ಮೆ ತಂದು ಅಲ್ಪ ಹಣ ಪಡೆದು ಪೆಚ್ಚು ಮೋರೆ ಹಾಕಿಕೊಂಡು ರೈತರು ಮನೆಗೆ ತೆರಳುವಂತಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಪ್ರತಿನಿತ್ಯ 1ರಿಂದ 2 ಟನ್ ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೀಗ ದಿನನಿತ್ಯ ಮಾರುಕಟ್ಟೆಗೆ 2ರಿಂದ 3 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದೆ. ಇನ್ನೂ ರೀಲರ್ಸ್ ಸ್ಥಿತಿಯೂ ಅಂತತ್ರವಾಗಿದ್ದು, ರೇಷ್ಮೆ ನೂಲಿನ ದರಕ್ಕೆ ಭಾರಿ ಇಳಿಕೆ ಕಂಡಿದೆ.

ಲಾಕ್‌ಡೌನ್ ಮೊದಲು 50 ಕೆ.ಜಿಯ ಬಂಡಲ್‌ಗೆ ₹ 3,500-4000 ಇತ್ತು. ಆದರೆ ಪ್ರಸ್ತುತ ₹ 1,800-2,000ಕ್ಕೆ ಇಳಿದ ಪರಿಣಾಮ ರೇಷ್ಮೆ ಖರೀದಿಗೆ ಮುಂಗಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT