ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ

ಪರಿವರ್ತನೆಗೊಂಡ ಕೊರೊನಾ ಸೋಂಕು; ಮಾಹಿತಿ ನೀಡಲು ಹಾಸ್ಟೆಲ್‌ ಸಿಬ್ಬಂದಿಗೆ ಸೂಚನೆ
Last Updated 22 ಫೆಬ್ರುವರಿ 2021, 12:47 IST
ಅಕ್ಷರ ಗಾತ್ರ

ಮಂಡ್ಯ: ವಿವಿಧೆಡೆ ಪರಿವರ್ತನೆಗೊಂಡ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕೇರಳ ವಿದ್ಯಾರ್ಥಿಗಳು, ವಲಸಿಗರು ಹಾಗೂ ಪ್ರವಾಸಿಗರ ಮೇಲೆ ನಿಗಾವಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ನರ್ಸಿಂಗ್‌, ಫಾರ್ಮಸಿ, ವೈದ್ಯಕೀಯ, ಅರೆ ವೈದ್ಯಕೀಯ ತರಬೇತಿ, ಎಂಜಿನಿಯರಿಂಗ್‌, ಕಾನೂನು ಮುಂತಾದ ಶಿಕ್ಷಣಕ್ಕಾಗಿ ಕೇರಳದಿಂದ ನೂರಾರು ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಬಂದಿದ್ದಾರೆ. ನಗರದಲ್ಲಿರುವ ನಾಲ್ಕೈದು ನರ್ಸಿಂಗ್‌ ಕಾಲೇಜುಗಳಿಗೆ ಕೇರಳ ವಿದ್ಯಾರ್ಥಿಗಳೇ ಆಧಾರವಾಗಿದ್ದಾರೆ. ಆಯಾ ಕಾಲೇಜುಗಳಲ್ಲೇ ವಸತಿ ನಿಲಯಗಳಿದ್ದು ಅಲ್ಲಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ.

ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ಇದ್ದಾರೆ. ಖಾಸಗಿ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳು ಒಟ್ಟಿಗೆ ಇದ್ದಾರೆ. ಈಗ ಎಲ್ಲೆಡೆ ಕಾಲೇಜುಗಳು ಆರಂಭಗೊಂಡಿದ್ದು ಕೇರಳ ವಿದ್ಯಾರ್ಥಿಗಳು ಮರಳಿದ್ದಾರೆ, ಈಗಲೂ ಕೆಲವರು ಬರುತ್ತಿದ್ದಾರೆ. ಕೇರಳದಲ್ಲಿ ಪರಿವರ್ತನೆಗೊಂಡ ಕೊರೊನಾ ಸೋಂಕು ತೀವ್ರವಾಗಿರುವ ಕಾರಣ ಅವರ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ.

ಆರೋಗ್ಯ ಸಚಿವ ಸುಧಾಕರ್‌ ಸೋಮವಾರ ಅಧಿಕಾರಿಗಳ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಹೊರರಾಜ್ಯದ ಜನರ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ಕೆಲವೆಡೆ ಆತಂಕ ಪರಿಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್‌ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿವರ್ತನೆಗೊಂಡ ಕೊರೊನಾ ಸೋಂಕಿತ ತಡೆಗಾಗಿ ಅಗತ್ಯ ಕ್ರಮ ವಹಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

‘ಹೊರರಾಜ್ಯಗಳಿಂದ ಬರುವ ಜನರು, ಅದರಲ್ಲೂ ಕೇರಳ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಹಾಸ್ಟೆಲ್‌ಗಳಲ್ಲಿ ಇರುವ ಹೊರರಾಜ್ಯದ ವಿದ್ಯಾರ್ಥಿಗಳ ಮಾಹಿತಿ ನೀಡಲು ಅಲ್ಲಿಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಆ ಮಾಹಿತಿ ಅನ್ವಯ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಮತ್ತೆ ‘ಮಹಾ’ ಪ್ರವಾಹ?: ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಕೋವಿಡ್‌ ಹಾವಳಿ ಹೆಚ್ಚಳವಾಗುತ್ತಿದ್ದಂತೆ ಅಲ್ಲಿ ನೆಲೆಸಿದ್ದ ನಮ್ಮ ರಾಜ್ಯದ ವಲಸಿಗರು ಕುಟುಂಬ ಸಮೇತರಾಗಿ ಊರಿಗೆ ಮರಳಿದ್ದರು. ವಲಸಿಗರ ಪ್ರವಾಹವನ್ನು ನಿರ್ವಹಣೆ ಮಾಡುವುದೇ ಜಿಲ್ಲಾಡಳಿತಕ್ಕೆ ಕಷ್ಟವಾಗಿತ್ತು. ಕೋವಿಡ್‌ ಲಾಕ್‌ಡೌನ್‌ ತೆರವುಗೊಂಡ ನಂತರ ಬಹುತೇಕ ಮಂದಿ ಮತ್ತೆ ಮುಂಬೈಗೆ ಮರಳಿದ್ದಾರೆ.

ಈಗ ಪರಿವರ್ತನೆಗೊಂಡ ಸೋಂಕು ತೀವ್ರಗೊಂಡರೆ ಮತ್ತೆ ಜನರು ಹರಿದು ಬರುವ ಸಾಧ್ಯತೆ ಇದೆ. ಮುಂದಿನ ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

‘ರಾಜ್ಯದ ಗಡಿಯಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಇದ್ದು ಕೋವಿಡ್‌ ಪರೀಕ್ಷೆ ಪರಿಶೀಲಿಸಿ ಜನರನ್ನು ಬಿಡುತ್ತಿದ್ದಾರೆ. 72 ಗಂಟೆಗಳಿಗೆ ಮೊದಲು ಪರೀಕ್ಷೆ ಮಾಡಿಸಿಕೊಂಡವನ್ನು ರಾಜ್ಯಕ್ಕೆ ಬಿಡುತ್ತಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಚೆಕ್‌ ಪೋಸ್ಟ್‌ ಇವುರುದಿಲ್ಲ. ನಾವು ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಹೇಳಿದರು.

********

ಲಸಿಕೆ: 2ನೇ ಹಂತ ಯಶಸ್ವಿ

ಮೊದಲನೇ ಹಂತದ ಲಿಸಿಕೆ ಅಭಿಯಾನದಲ್ಲಿ ಜಿಲ್ಲೆ ಶೇ 74ರಷ್ಟು ಪ್ರಗತಿ ಸಾಧಿಸಿದೆ. ಇಲ್ಲಿ ವೈದ್ಯರು, ಶುಷ್ರೂಷಕರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕಿದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ. ಆದರೂ ರಾಜ್ಯ ಮಟ್ಟದಲ್ಲಿ ಜಿಲ್ಲೆ 4ನೇ ಸ್ಥಾನ ಪಡೆದಿದೆ.

2ನೇ ಹಂತದ ಲಸಿಕೆ ಅಭಿಯಾನ ಸದ್ಯ ಪ್ರಗತಿಯಲ್ಲಿದ್ದು ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಈ ಹಂತದಲ್ಲಿ ಪೊಲೀಸರು ಸೇರಿದಂತೆ ಫ್ರಂಟ್‌ಲೈನ್‌ ಕೋವಿಡ್‌ ಸೇನಾನಿಗಳು ಲಸಿಕೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

*********

ಹೋಟೆಲ್‌ಗಳಲ್ಲಿ ಇಲ್ಲದ ಸುರಕ್ಷತೆ: ಅಪಾಯ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್‌ಗಳಲ್ಲಿ ಕೋವಿಡ್‌ ಕಾರ್ಯಸೂಚಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಮಾಸ್ಕ್‌ ಇಲ್ಲದಿದ್ದರೂ ಹೋಟೆಲ್‌ ಸಿಬ್ಬಂದಿ ಜನರಿಗೆ ಸ್ವಾಗತ ಕೋರುತ್ತಿದ್ದಾರೆ. ಸ್ಯಾನಿಟೈಸರ್‌ ವಿತರಣೆ ಇಲ್ಲವಾಗಿದ್ದು ಸುರಕ್ಷತೆ ಮರೀಚಿಕೆಯಾಗಿದೆ.

‘ಹೆದ್ದಾರಿಯ ಹೋಟೆಲ್‌ಗಳಿಗೆ ಹೊರರಾಜ್ಯದ ಪ್ರವಾಸಿಗರು ಬರುವ ಕಾರಣ ಹೆಚ್ಚು ಅಪಾಯ ಇದೆ. ಹೀಗಾಗಿ ಆರೋಗ್ಯ ಇಲಾಖೆಯ ತಂಡ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಡಿಎಚ್‌ಒ ಮಂಚೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT