ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸ್ಥಾನದಲ್ಲಿ ಪುರುಷರ ತಂಡ

ಚೆಸ್‌: ಮಹಿಳಾ ತಂಡಕ್ಕೆ ಸುಲಭ ಜಯ
Published 4 ಅಕ್ಟೋಬರ್ 2023, 15:50 IST
Last Updated 4 ಅಕ್ಟೋಬರ್ 2023, 15:50 IST
ಅಕ್ಷರ ಗಾತ್ರ

ಹಾಂಗ್‌ಝೌ: ಎರಡನೇ ಶ್ರೇಯಾಂಕದ ಭಾರತ ಮಹಿಳಾ ತಂಡ ಏಷ್ಯನ್ ಗೇಮ್ಸ್‌ ಚೆಸ್‌ನಲ್ಲಿ ಬುಧವಾರವೂ ಉತ್ತಮ ಪ್ರದರ್ಶನ ಮುಂದುವರಿಸಿ ಆರನೇ ಸುತ್ತಿನಲ್ಲಿ ಉಜ್ಬೇಕಿಸ್ತಾನ ತಂಡವನ್ನು 4–0 ಯಿಂದ ಸುಲಭವಾಗಿ ಸೋಲಿಸಿತು. ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಭಾರತ, ಆತಿಥೇಯ ಚೀನಾ ಎದುರು 2–2 ‘ಡ್ರಾ’ ಮಾಡಿಕೊಂಡಿತು.

ಚೀನಾ– ಭಾರತ ಪಂದ್ಯದ ನಾಲ್ಕೂ ಬೋರ್ಡ್‌ ಪಂದ್ಯಗಳು ಡ್ರಾ ಆದವು. ಡಿ.ಗುಕೇಶ್ (2758) ಮತ್ತು ಚೀನಾದ ವೀ ಯಿ (2726) ‘ಡ್ರಾ’ ಮೊದಲ ಬೋರ್ಡ್‌ನಲ್ಲಿ ಡ್ರಾ ಮಾಡಿಕೊಂಡರೆ, ಪ್ರಜ್ಞಾನಂದ (2727) ಎರಡನೇ ಬೋರ್ಡ್‌ನಲ್ಲಿ ಷಿಯಾಂಗ್‌ಜಿ ಬು (2690) ವಿರುದ್ಧ ಪಾಯಿಂಟ್‌ ಹಂಚಿಕೊಂಡರು.

ವಿದಿತ್ ಗುಜರಾತಿ (2716) ಮತ್ತು ಪಿ.ಹರಿಕೃಷ್ಣ (2711) ಕೂಡ ನಿರ್ಣಾಯಕ ಫಲಿತಾಂಶ ಪಡೆಯಲಿಲ್ಲ.

ಭಾರತ 9 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿಸಿದೆ. ಇರಾನ್ 10 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನದಲ್ಲಿದೆ. ತಂಡ ಗೆದ್ದರೆ ಎರಡು ಪಾಯಿಂಟ್‌, ‘ಡ್ರಾ’ಕ್ಕೆ ಒಂದು ಪಾಯಿಂಟ್‌ ನೀಡಲಾಗುತ್ತದೆ.

ಮೂರನೇ ಶ್ರೇಯಾಂಕದ ಇರಾನ್ 2–2ರಲ್ಲಿ ವಿಯೆಟ್ನಾಂ ವಿರುದ್ಧ ಡ್ರಾ ಮಾಡಿಕೊಂಡರೆ, ನಾಲ್ಕನೇ ಶ್ರೇಯಾಂಕದ ಉಜ್ಬೇಕಿಸ್ತಾನ 3–1 ರಿಂದ ಮಂಗೋಲಿಯಾ ಎದುರು ಗೆಲುವು ದಾಖಲಿಸಿತು.

ಮಹಿಳಾ ವಿಭಾಗದಲ್ಲಿ ಅಗ್ರಶ್ರೇಯಾಂಕದ ಚೀನಾ ಎದುರು ಮಂಗಳವಾರ ಸೋಲನುಭವಿಸಿದ್ದ ಭಾರತ ಆರನೇ ಸುತ್ತಿನಲ್ಲಿ ಉಜ್ಬೇಕಿಸ್ತಾನ ಎದುರು ಸುಲಭ ಜಯ ಸಾಧಿಸಿತು. ಹಂಪಿ, ವೈಶಾಲಿ, ವಂತಿಕಾ ಮತ್ತು ಸವಿತಾ ಶ್ರೀ ತಮ್ಮ ಪಂದ್ಯಗಳಲ್ಲಿ ಜಯಗಳಿಸಿದರು. ಹಾರಿಕಾ ಆಡಲಿಲ್ಲ.

ಭಾರತ ಮಹಿಳಾ ತಂಡ ಎಂಟು ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ. ಚೀನಾ 9 ಪಾಯಿಂಟ್ಸ್‌ ಕಲೆಹಾಕಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT