ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ಸಬ್ಸಿಡಿ ಯಂತ್ರಗಳಿಗೆ ದುಪ್ಪಟ್ಟು ಬೆಲೆ ಆರೋಪ

ತನಿಖೆಗೆ ಒತ್ತಾಯಿಸಿ ರೈತರ ಪ್ರತಿಭಟನೆ
Published 23 ಫೆಬ್ರುವರಿ 2024, 13:14 IST
Last Updated 23 ಫೆಬ್ರುವರಿ 2024, 13:14 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಕೃಷಿ ಇಲಾಖೆ ಕಚೇರಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಕೃಷಿ ಯಂತ್ರೋಪಕರಣಗಳಿಗೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರ ನಿಗದಿ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೃಷಿ ಇಲಾಖೆ ಕಚೇರಿ ಎದುರು ಸುಮಾರು ಅರ್ಧ ತಾಸು ಪ್ರತಿಭಟನೆ ನಡೆಸಿ ಕೃಷಿ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.ಒಂದು ಎಚ್‌.ಪಿ ಸಾಮರ್ಥ್ಯದ ಕಳೆ ಕತ್ತರಿಸುವ ಯಂತ್ರಕ್ಕೆ ರೂ.17 ಸಾವಿ ಬೆಲೆ ನಿಗದಿ ಮಾಡಲಾಗಿದೆ. ರೈತರಿಗೆ ರೂ.8 ಸಾವಿರ ಸರ್ಕಾರದ ಸಹಾಯ ಧನ ನೀಡುತ್ತಿದ್ದು, ವಂತಿಕೆಯಾಗಿ ರೈತರಿಂದ ರೂ.9 ಸಾವಿರ ಪಡೆಯಲಾಗುತ್ತಿದೆ. ಇದಕ್ಕಿಂತಲೂ ಉತ್ತಮವಾದ ಅಂದರೆ, 1.95 ಎಚ್‌.ಪಿ. ಸಾಮರ್ಥ್ಯದ ಕಳೆ ಕತ್ತರಿಸುವ ಯಂತ್ರ ಮುಕ್ತ ಮಾರುಕಟ್ಟೆಯಲ್ಲಿ ರೂ.7550ಕ್ಕೆ ಸಿಗುತ್ತಿದೆ. ಇತರ ಕೃಷಿ ಯಂತ್ರಗಳಿಗೂ ಇದೇ ರೀತಿ ದುಪ್ಪಟ್ಟು ದರ ನಿಗದಿಪಡಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖಂಡ ಚಂದನ್‌ ಒತ್ತಾಯಿಸಿದರು.

ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಕೃಷಿ ಯಂತ್ರೋಪಕರಣಗಳ ಗುಣಮಟ್ಟ ಕೂಡ ಸರಿಯಾಗಿಲ್ಲ. ಯಂತ್ರಗಳ ಮೇಲಿರುವ ದರ ಪಟ್ಟಿಯ ಲೇಬಲ್‌ ಹರಿದು ಹಾಕಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಬೂಬು ಹೇಳುತ್ತಿದ್ದಾರೆ ಎಂದು ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಕೃಷಿ ಅಧಿಕಾರಿ ರಾಮೇಗೌಡ, ರೈತರು ಸಲ್ಲಿಸಿರುವ ದೂರನ್ನು ಮೇಲಧಿಕಾರಿಗಳಿಗೆ ರವಾನಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ರೈತರಾದ ಸಬ್ಬನಕುಪ್ಪೆ ಶಿವಣ್ಣ, ಶಿವು ದರ್ಶನ್‌, ಧನಂಜಯ, ರವಿ. ಬಾಲರಾಜ್, ಜಯಚಂದ್ರ, ಅಶೋಕ್‌, ಚಿನ್ನೇನಹಳ್ಳಿ ಹರ್ಷ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT