ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದೆಯಲ್ಲೇ ಉಳಿದ ಫಸಲು: ರೈತ ಕಂಗಾಲು!

ಲಕ್ಷ ಖರ್ಚು ಮಾಡಿ ಬೆಳೆದ ಪುಷ್ಪ, ಸಿಹಿಕುಂಬಳಕ್ಕೆ ಬೇಡಿಕೆ ಇಲ್ಲ
Last Updated 17 ಮೇ 2021, 3:32 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಗಂಜಾಂ ಗ್ರಾಮದ ರೈತ ನಂದೀಶ್‌ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಚೆಂಡು ಹೂ ಮತ್ತು ಕುಂಬಳ ಫಸಲಿಗೆ ಬೇಡಿಕೆ ಇಲ್ಲದೆ ಗದ್ದೆಯಲ್ಲೇ ಉಳಿದಿವೆ.

ನಂದೀಶ್‌ ಒಂದೂವರೆ ಎಕರೆಯಲ್ಲಿ ಚೆಂಡು ಹೂ ಹಾಗೂ ಒಂದು ಎಕರೆ ಜಮೀನಿನಲ್ಲಿ ಸಿಹಿ ಗುಂಬಳ ಬೆಳೆದಿದ್ದಾರೆ. ಎರಡೂ ಬೆಳೆಗಳು ಕಟಾವಿಗೆ ಬಂದು ಎರಡು ವಾರ ಕಳೆದಿದೆ. ಆದರೆ ಕೇಳುವವರೇ ಇಲ್ಲದ ಕಾರಣ ಕೊಯ್ಲು ಮಾಡಿಲ್ಲ. ಚೆಂಡು ಹೂ ಅವಧಿ ಮೀರುತ್ತಿದ್ದು ಈಗಾಗಲೇ ಶೇ 10ರಷ್ಟು ಹೂಗಳು ನೆಲಕ್ಕೆ ಉದುರಿದೆ. ಹೂವಿನ ಗೊಂಚಲು ಹೆಚ್ಚುತ್ತಿರುವುದರಿಂದ ಭಾರಕ್ಕೆ ಗಿಡಗಳು ಮುರಿದು ಬೀಳುತ್ತಿವೆ. ನೆಲ ಕಚ್ಚಿರುವ ಹೂಗಳಿಗೆ ಮಣ್ಣು ಅಂಟಿಕೊಂಡು ಕೊಳೆಯುತ್ತಿವೆ. ಹಣ ಖರ್ಚು ಮಾಡಿ ಬಹಳ ಜತನದಿಂದ ಬೆಳೆಸಿದ ಹೂದೋಟ ರೈತನನ್ನು ನಷ್ಟಕ್ಕೆ ನೂಕಿದೆ.

ಒಂದು ಎಕರೆಯಲ್ಲಿ ನಂದೀಶ್‌ ಸಿಹಿಗುಂಬಳ ಬೆಳೆದಿದ್ದು, ಅದೂ ಕೂಡಾ ಕೊಯ್ಲಿಗೆ ಬಂದಿದೆ. ಇದುವರೆಗೆ ಒಂದೂ ಕುಂಬಳ ಕೀಳಲು ಆಗಿಲ್ಲ. ಮಾರುಕಟ್ಟೆಯಲ್ಲಿ ವಿಚಾರಿಸಿದರೆ ಸದ್ಯಕ್ಕೆ ಕುಂಬಳ ತರಬೇಡಿ ಎನ್ನುತ್ತಾರೆ. ಸ್ಥಳೀಯವಾಗಿ ಕೂಡ ಕುಂಬಳ ಕೇಳುತ್ತಿಲ್ಲ. ಹಾಗಾಗಿ ಟನ್‌ಗಟ್ಟಲೆ ಕುಂಬಳ ಗಿಡದಲ್ಲೇ ಉಳಿದಿದೆ. ಕೊಯ್ಲು ಮಾಡದೆ ಗಿಡದಲ್ಲೇ ಬಿಟ್ಟಿರುವುದರಿಂದ ಕಾಡು ಹಂದಿ, ಇಲಿಗಳು ಕುಂಬಳವನ್ನು ತಿಂದು ನಾಶ ಮಾಡುತ್ತಿವೆ.

‘ಕಷ್ಟಪಟ್ಟು ಚೆಂಡು ಹೂ ಮತ್ತು ಕುಂಬಳ ಬೆಳೆದಿದ್ದೇನೆ. ಭೂಮಿ ಉಳುಮೆ, ಪೈರು, ಕೊಟ್ಟಿಗೆ ಗೊಬ್ಬರ, ಸೀಮೆ ಗೊಬ್ಬರ, ಕೂಲಿ ಸೇರಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದೇನೆ. ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಚೆಂಡು ಹೂ ಇಷ್ಟೊತ್ತಿಗೆ ಮೂರು ಕೊಯ್ಲು ಮುಗೀಬೇಕಿತ್ತು. ಕುಂಬಳ ಎರಡು ಬಾರಿ ಕಟಾವು ಆಗಬೇಕಿತ್ತು. ಆದರೆ ಎರಡೂ ಫಸಲನ್ನು ಕೇಳುವವರಿಲ್ಲ. ಚೆಂಡು ಹೂ ಉದುರುತ್ತಿವೆ; ಕುಂಬಳ ಕೊಳೆಯುತ್ತಿವೆ. ಬೆಳೆಗೆ ಮಾಡಿದ ಸಾಲ ಹೇಗೆ ತೀರಿಸಲಿ ಎಂಬ ಚಿಂತೆಯಾಗಿದೆ’ ಎಂದು ನಂದೀಶ್‌ ಕಣ್ಣೀರು ಹಾಕುತ್ತಾರೆ.

‘ಕೋವಿಡ್‌ ಕಾರಣದಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು. ಹೂ, ಹಣ್ಣು, ತರಕಾರಿ ಬೆಳೆಗೆ ನಷ್ಟಕ್ಕೆ ತಕ್ಕಂತೆ ಪ್ಯಾಕೇಜ್‌ ಪ್ರಕಟಿಸಬೇಕು. ಸರ್ಕಾರ ರೈತರ ನೆರವಿಗೆ ಶೀಘ್ರ ಧಾವಿಸಬೇಕು. ನಿರ್ಲಕ್ಷ್ಯ ಮಾಡಿದರೆ ಹಗ್ಗದ ಕುಣಿಕೆ, ವಿಷಯ ಬಾಟಲಿಗಳು ಚಾಲ್ತಿಗೆ ಬರುವ ಅಪಾಯವಿದೆ. ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಬಿ.ಎಸ್‌. ರಮೇಶ್‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT