ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ದೊಡ್ಡಮ್ಮನನ್ನೇ ಕೊಲೆ ಮಾಡಿದ ಯುವಕ

Published 22 ಜೂನ್ 2024, 15:49 IST
Last Updated 22 ಜೂನ್ 2024, 15:49 IST
ಅಕ್ಷರ ಗಾತ್ರ

ಮಂಡ್ಯ: ಯುವಕನೊಬ್ಬ ತನ್ನ ದೊಡ್ಡಮ್ಮನನ್ನು ಕತ್ತು ಕೊಯ್ದು ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ನಗರದ ಆನೆಕೆರೆ ಬೀದಿಯಲ್ಲಿ ಶನಿವಾರ ನಡೆದಿದೆ.

ಕೆಂಪಮ್ಮ (80) ಹತ್ಯೆಯಾದ ಮಹಿಳೆ. ಮೃತಳ ಮೈದುನನ ಮಗ ಹರೀಶ್ ಎಂಬಾತ ಕೊಲೆ ಮಾಡಿ ನಗರದ ಸೆಂಟ್ರಲ್ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

ಗಂಡನನ್ನು ಕಳೆದುಕೊಂಡಿದ್ದ ಮಹಿಳೆ ಮೈದುನ ರಾಮಕೃಷ್ಣ ಹಾಗೂ ಆತನ ಮಗನಾದ ಹರೀಶನ ಜೊತೆ ವಾಸವಾಗಿದ್ದರು. ಕುಡಿದ ಮತ್ತಿನಲ್ಲಿ ನಿತ್ಯ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ ಆರೋಪಿ ಶನಿವಾರ ಮಹಿಳೆಯ ಕೊಲೆ ಮಾಡಿದ್ದಾನೆ‌ ಎನ್ನಲಾಗಿದೆ. 

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್, ಎಎಸ್ಪಿ ತಿಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸೆಂಟ್ರಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತ ಮರದಿಂದ ಬಿದ್ದು ಸಾವು

ಮಂಡ್ಯ: ತಾಲ್ಲೂಕಿನ ಶಿವಪುರ ಗ್ರಾಮದ ರೈತ ಬೋರೇಗೌಡ ಮರದ‌ ಮೇಲಿಂದ ಬಿದ್ದು ಶನಿವಾರ ಮೃತಪಟ್ಟಿದ್ದಾರೆ. 

ಶನಿವಾರ ಮಧ್ಯಾಹ್ನ ಗದ್ದೆಯ ಬಳಿ ತೆರಳಿ ಬೇವಿನ‌ಮರದ ರೆಂಬೆ ಕಡಿಯುವಾಗ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿತ್ತು. 

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಪಿ.ರವಿಕುಮಾರ್‌ಗೌಡ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಈ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೈಲಿಗೆ ಸಿಲುಕಿ ಮಹಿಳೆ ಸಾವು

ಮಂಡ್ಯ: ತಾಲ್ಲೂಕಿನ ಹನಕೆರೆ ಬಳಿ ಹಳಿ ದಾಟುವಾಗ ರೈಲ್ವೆ ಹಳಿಗೆ ಸಿಲುಕಿದ ಚಪ್ಪಲಿ ತೆಗೆದುಕೊಳ್ಳಲು ಹೋಗಿ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಹೊನಗಳ್ಳಿಮಠ ಬೋರಮ್ಮ(70) ಮೃತಪಟ್ಟವರು. ಮಂಡ್ಯಕ್ಕೆ ತೆರಳಲು ಹನಕೆರೆ ಗೇಟ್‌ ಬಳಿ ತೆರಳುವಾಗ ತಿರುಪತಿ ಎಕ್ಸ್‌ಪ್ರೆಸ್‌ ರೈಲು ಬರುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೇ ಗೇಟ್ ಬಂದ್ ಮಾಡಲಾಗಿತ್ತು. ಆದರೂ ನುಸುಳಿ ಹಳಿ ದಾಟಲು ಮುಂದಾಗಿದ್ದಾರೆ.

ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ದೇಹ 100 ಮೀಟರ್ ದೂರ ಎಸೆಯಲ್ಪಟ್ಟಿತು ಎಂದು ಪತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಸ್ಥಳಕ್ಕೆ ಮಂಡ್ಯ ರೈಲ್ವೆ ಹೊರಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT