ಹಲವರಿಗೆ ಜೀವನ ನೀಡಿದ ರಂಗಕಲೆ; ಸಚಿವ ಕೆ.ಸಿ.ನಾರಾಯಣ ಗೌಡ

ಭಾರತೀನಗರ: ಬಹು ಮಾಧ್ಯಮಗಳ ಪ್ರಭಾವದಿಂದಾಗಿ ಯುವಜನರಲ್ಲಿ ಕಲಾಸಕ್ತಿ ಬೆಳೆದು ಅಭಿನಯ ಕಲೆ ಉಳಿಯಲು ಸಹಕಾರಿಯಾಗಿದೆ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.
ಪಟ್ಟಣದ ಕೇಂಬ್ರಿಡ್ಜ್ ಶಾಲೆ ಆವರಣದಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಾಜ್ಯೋತ್ಸವದ ಅಂಗವಾಗಿ 8 ದಿನ ಆಯೋಜಿಸಿರುವ ‘ಗ್ರಾಮೀಣ ನಾಟಕೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕಲೆ ಇನ್ನೂ ಜೀವಂತವಾಗಿರುವುದಕ್ಕೆ ನಾಟಕೋತ್ಸವವೇ ಸಾಕ್ಷಿಯಾಗಿದೆ. ಮಾಧ್ಯಮಗಳ ಪ್ರಭಾವದಿಂದಾಗಿ ಕಲಾಸಕ್ತಿ ಇರುವ ಯುವಜನರಿಗೆ ಬೇಡಿಕೆಯೂ ಇದೆ. ನಾನು ಎರಡು ಮೂರು ನಾಟಕಗಳಲ್ಲಿ ಪ್ರದರ್ಶನ ನೀಡಿದ್ದೇನೆ. ರಂಗಕಲೆ ಅನೇಕ ಕಲಾವಿದರಿಗೆ ಜೀವನ ಕೊಟ್ಟಿದೆ. ರಂಗಕಲೆಯಲ್ಲೇ ಅನೇಕರು ಹೆಸರು ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನಾಟಕೋತ್ಸವ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನಾಟಕೋತ್ಸವಕ್ಕೆ ₹25 ಸಾವಿರ ಸಹಾಯ ಧನ ನೀಡುವುದಾಗಿ ಹಾಗೂ ಸರ್ಕಾರದಿಂದ ಪ್ರೋತ್ಸಾಹ ಧನ ಕೊಡಿಸುವುದಾಗಿ ತಿಳಿಸಿದರು. ರಂಗ ಕಲಾವಿದ ತೊರೆಚಾಕನಹಳ್ಳಿ ಶಂಕರೇಗೌಡ ಹಾಗೂ ಪತ್ನಿಗೆ ಬಂಗಾರದ ಕಡಗ ತೊಡಿಸಿ ಅಭಿನಂದಿಸಿದರು.
ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ತಿಪ್ಪೂರು ಅಂದಾನಿ, ಕೆ.ಟಿ.ಸುರೇಶ್, ಜಿ.ಪಂ.ಮಾಜಿ ಸದಸ್ಯರಾದ ಬೋರಯ್ಯ, ಮರಿಹೆಗ್ಡೆ, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಮಹೇಂದ್ರ ಕುಮಾರ್, ಕೆ.ಟಿ.ಸುರೇಶ, ಗೆಜ್ಜಲಗೆರೆ ಕಿಟ್ಟಿ, ತೈಲೂರು ಸಿದ್ದರಾಜು, ಗೊಲ್ಲರದೊಡ್ಡಿ ಶಿವಲಿಂಗಯ್ಯ, ಪವಿತ್ರಾ, ಅಣ್ಣೂರು ಸತೀಶ್, ನೀಲಕಂಠನಹಳ್ಳಿ ಪ್ರಕಾಶ್ ಇದ್ದರು.
ನಾಟಕಗಳ ವಿವರ: ನ.8ರಂದು ಕಾಳಿಕಾಂಬ ಕೃಪಾ ಪೋಷಿತ ನಾಟಕ ಮಂಡಳಿ ಕಲಾವಿದರಿಂದ ‘ಶನಿ ಪ್ರಭಾವ’ ಪೌರಾಣಿಕ ನಾಟಕ, 9ರಂದು ಜೈಭುವನೇಶ್ವರಿ ಹವ್ಯಾಸಿ ಮಹಿಳಾ ರಂಗಭೂಮಿ ಕಲಾ ಸಂಘದ ಕಲಾವಿದರಿಂದ ‘ಶ್ರೀಕೃಷ್ಣ ಸಂಧಾನ ವಿಫಲ’ ಪೌರಾಣಿಕ ನಾಟಕ, ನ.10ರಂದು ಆಸರೆ ಸೇವಾ ಟ್ರಸ್ಟ್ ಹಾಗೂ ಪ್ರಜಾಪ್ರಿಯ ಸೇವಾ ಟ್ರಸ್ಟ್ ಕಲಾವಿದರಿಂದ ‘ಭಕ್ತ ಭಗೀರಥ’ ಪೌರಾಣಿಕ ನಾಟಕ, 11ರಂದು ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಕಲಾವಿದರಿಂದ ‘ದಕ್ಷಯಜ್ಞ’ ಪೌರಾಣಿಕ ನಾಟಕ, 12ರಂದು ತೈಲೂರು ಕನ್ನಡ ಜ್ಯೋತಿ ಯುವಕರ ಸಂಘದ ಕಲಾವಿದರಿಂದ ‘ಬಾಳಿನ ದಾರಿ’ ಸಾಮಾಜಿಕ ನಾಟಕ, 13ರಂದು ಚನ್ನಪಟ್ಟಣ ನಾಡಪ್ರಭು ಕೆಂಪೇಗೌಡ ರಂಗಭೂಮಿ ಕಲಾ ಸಂಘದ ಕಲಾವಿದರಿಂದ ‘ಸತಿಸಂಸಾರದ ಜ್ಯೋತಿ’ ಸಾಮಾಜಿಕ ನಾಟಕ, 14ರಂದು ವಿಶ್ವ ಮಾನವ ರಂಗಭೂಮಿ ಕಲಾವಿದರ ಸಂಘದ ಕಲಾವಿದರಿಂದ ‘ರತ್ನಮಾಂಗಲ್ಯ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.