ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಅರಕೇಶ್ವರಸ್ವಾಮಿ ದೇವಾಲಯದಲ್ಲಿ ಮೂವರು ಅರ್ಚಕರ ಬರ್ಬರ ಹತ್ಯೆ

ಮಂಡ್ಯ ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದಲ್ಲಿ ಘಟನೆ
Last Updated 11 ಸೆಪ್ಟೆಂಬರ್ 2020, 17:39 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿನ ಗುತ್ತಲು ಗ್ರಾಮದ ಅರಕೇಶ್ವರಸ್ವಾಮಿ ದೇವಾಲಯಕ್ಕೆ ಗುರುವಾರ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿಗಳಲ್ಲಿದ್ದ ಹಣ ದೋಚಿದ್ದಾರೆ.

ಗುತ್ತಲು ನಿವಾಸಿಗಳಾದ ಗಣೇಶ್‌ (45), ಪ್ರಕಾಶ್‌ (52), ಆನಂದ್‌ (38) ಹತ್ಯೆಯಾದವರು. ಶಿವಾರ್ಚಕ ಸಮುದಾಯಕ್ಕೆ ಸೇರಿದ್ದ ಕುಟುಂಬಗಳು ಸರದಿ ಆಧಾರದ ಮೇಲೆ ಅರಕೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದವು. ಈ ಅರ್ಚಕರು ದೇವರಿಗೆ ಪೂಜೆ ಸಲ್ಲಿಸುವ ಜೊತೆಗೆ ದೇವಾಲಯವನ್ನು ಕಾಯುವ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.

ದೇವಾಲಯದ ಆವರಣದಲ್ಲೇ ಹುಂಡಿ ಒಡೆದು ನೋಟುಗಳನ್ನು ದೋಚಿ, ಚಿಲ್ಲರೆ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿರುವುದು

‘ಮಧ್ಯರಾತ್ರಿ 12.50ರಲ್ಲಿ ಬೀಟ್‌ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಕಾವಲು ಕಾಯುತ್ತಿದ್ದ ಅರ್ಚಕರ ಬಳಿಯಿದ್ದ ಪುಸ್ತಕಕ್ಕೆ ಸಹಿ ಮಾಡಿ ತೆರಳಿದ್ದರು. ಇದಾದ ನಂತರ ನಸುಕಿನಲ್ಲಿ 2–3 ಗಂಟೆ ಹೊತ್ತಿಗೆ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು, ಹಜಾರದಲ್ಲಿ ಮಲಗಿದ್ದ ಅರ್ಚಕರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂರು ದೊಡ್ಡ ಹುಂಡಿಗಳನ್ನು ದೇವಾಲಯದ ಆವರಣದಲ್ಲೇ ಒಡೆದಿದ್ದಾರೆ. ಇದರಲ್ಲಿದ್ದ ನೋಟುಗಳನ್ನು ಮಾತ್ರ
ದೋಚಿದ್ದಾರೆ. ಶುಕ್ರವಾರ ಬೆಳಿಗ್ಗೆ ಪಾಳಿಯ ಅರ್ಚಕರು ಪೂಜೆಗೆ ತೆರಳಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಅತೀ ಹೆಚ್ಚು ಆದಾಯ ಸಂಗ್ರಹವಾಗುವ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿತ್ತು. ಕೋವಿಡ್‌–19 ಕಾರಣದಿಂದ ಕಳೆದ 10 ತಿಂಗಳಿಂದ ತೆರೆದಿರಲಿಲ್ಲ. ಈ ವಿಚಾರ ಪ್ರಚಾರಗೊಂಡಿತ್ತು. ಇದನ್ನು ತಿಳಿದವರೇ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ದೇವಾಲಯದ ಸುತ್ತಲೂ 8 ಸಿ.ಸಿ. ಟಿ.ವಿ ಕ್ಯಾಮೆರಾಗಳಿವೆ. ಆದರೆ, ನಿರ್ವಹಣೆಯಿಲ್ಲದ ಕಾರಣ ದೃಶ್ಯ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘ಕೊಲೆಗಾರರನ್ನು ಪತ್ತೆ ಮಾಡಲು ಎಸ್‌ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುವುದು’ ಎಂದು ದಕ್ಷಿಣ ವಲಯದ ಪೊಲೀಸ್‌ ಮಹಾ ನಿರ್ದೇಶಕ ವಿಪುಲ್‌ ಕುಮಾರ್‌ ಹೇಳಿದರು.

ತಲಾ ₹5 ಲಕ್ಷ ಪರಿಹಾರ

ಬೆಂಗಳೂರು: ಮೃತ ಅರ್ಚಕರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ್ದಾರೆ. ‘ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

***

ಅರ್ಚಕರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಅವರ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಳ್ಳಲಾಗುವುದು

-ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT