ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ನಿಂತಲ್ಲೇ ತುಕ್ಕು ಹಿಡಿಯುತ್ತಿರುವ ತ್ರಿಚಕ್ರ ವಾಹನಗಳು

ಮೂರು ತಿಂಗಳು ಕಳೆದರೂ ಫಲಾನುಭವಿಗಳಿಗೆ ವಿತರಣೆಯಾಗಿಲ್ಲ, ವಿಕಲಚೇತನರ ಪರದಾಟ
Last Updated 4 ನವೆಂಬರ್ 2020, 1:32 IST
ಅಕ್ಷರ ಗಾತ್ರ

ಮಂಡ್ಯ: ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗೆ ನೀಡಬೇಕಾದ ಹೊಸ ವಿಶೇಷ ತ್ರಿಚಕ್ರ ವಾಹನಗಳು ಗಾಳಿ, ಮಳೆಗೆ ತುಕ್ಕು ಹಿಡಿಯುತ್ತಿದ್ದು, ಉಪಯೋಗಕ್ಕೆ ಬರುವ ಮುನ್ನವೇ ಹಾಳಾಗುತ್ತಿದೆ.

ನಗರದ ಆಶಾ ಸದನ ವಿಶೇಷ ಶಾಲೆಯಲ್ಲಿ ವಿಕಲಚೇತನ ಫಲಾನುಭವಿಗಳಿಗೆ ನೀಡಬೇಕಾದ 27 ತ್ರಿಚಕ್ರ ವಾಹನಗಳನ್ನು ನಿಲ್ಲಿಸಲಾಗಿದ್ದು, ಮೂರು ತಿಂಗಳೇ ಕಳೆದಿದೆ. ಬಹುತೇಕ ವಾಹನಗಳು ಧೂಳು ಹಿಡಿದಿದ್ದು, ಹೊಸ ವಾಹನ ಎಂಬ ಗುರುತು ಮರೆಯಾಗುತ್ತಿದೆ. ಅಲ್ಲದೆ ಮಳೆಯಿಂದಾಗಿ ಚಕ್ರಗಳು ತುಕ್ಕು ಹಿಡಿಯುತ್ತಿದ್ದು, ಫಲಾನುಭವಿಗಳಿಗೆ ತಲುಪಿ ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಬಿಸಿಲಿನಲ್ಲಿ ನಿಂತು ಬಣ್ಣವೂ ಮಾಸುತ್ತಿದೆ.

ವಾಹನದ ಹಿಂಭಾಗದಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ಎರಡು ಸಣ್ಣ ಚಕ್ರಗಳನ್ನು ಅಳವಡಿಸಲಾಗಿದೆ. ಬಹುತೇಕ ವಾಹನಗಳಲ್ಲಿ ಅದು ಸೇರಿದಂತೆ ವಿವಿಧ ಪಾರ್ಟ್ಸ್‌ಗಳು ತುಕ್ಕು ಹಿಡಿಯುತ್ತಿದ್ದು, ಬಿಸಿಲಿಗೆ ಕಾದು ಕಾದು ಸೀಟುಗಳು ಹಾಳಾಗಿವೆ.

2018–19ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ವಾಹನಗಳನ್ನು ನೀಡಿಲ್ಲ. ಜಿಲ್ಲೆಯಲ್ಲಿ 2019–20ನೇ ಸಾಲಿನಲ್ಲಿ 68 ಮಂದಿ ಹಾಗೂ 2018–19ನೇ ಸಾಲಿನಲ್ಲಿ 206 ಮಂದಿ ಸೇರಿದಂತೆ ಒಟ್ಟಾರೆ 274 ಮಂದಿ ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೇವಲ 27 ಮಂದಿ ಅರ್ಹ ಫಲಾನುಭವಿಗಳಿಗೆ ಮಾತ್ರ ವಾಹನಗಳು ಮಂಜೂರಾಗಿದೆ. ವಾಹನಗಳು ಬಂದು ತಿಂಗಳುಗಳೇ ಕಳೆದರೂ ವಿತರಿಸದಿರುವುದಕ್ಕೆ ವಿಕಲಚೇತನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಮಾಡುತ್ತಿರುವವರು, ಶಿಕ್ಷಣ ಪಡೆಯುತ್ತಿರುವವರಿಗೆ ಈ ತ್ರಿಚಕ್ರ ವಾಹನಗಳು ಬಹಳ ಉಪಯುಕ್ತವಾಗಿದ್ದು, ಸರಿಯಾದ ಸಮಯದಲ್ಲಿ ನೀಡದೆ ಪರದಾಡುವಂತಾಗಿದೆ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳನ್ನೇ ಅವಲಂಬಿಸುವಂತಾಗಿದ್ದು, ಪ್ರಯಾಸ ಪಟ್ಟು ಸ್ಥಳ ಮುಟ್ಟಬೇಕಾದ ದುಸ್ಥಿತಿ ಎದುರಾಗಿದೆ. ಎಲ್ಲಾದರೂ ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ಬಸ್‌ ಹತ್ತಿ ಇಳಿದು ಸಾಕಾಗುತ್ತದೆ. ಸರ್ಕಾರ ನೀಡಿರುವ ವಾಹನವನ್ನು ನೀಡಿದರೆ ಎಷ್ಟೋ ಅನುಕೂಲವಾಗುತ್ತದೆ ಎಂದು ಹೆಸರನ್ನೇಳಲು ಇಚ್ಛಿಸದ ಫಲಾನುಭವಿಯೊಬ್ಬರು ತಿಳಿಸಿದರು.

ಶಿಕ್ಷಣ, ಉದ್ಯೋಗ, ವಸ್ತುಸ್ಥಿತಿಯನ್ನು ನೋಡಿ ಸಂದರ್ಶನ ನಡೆಸಿ ಶೇ 75ಕ್ಕಿಂತ ಅಂಗ ವೈಕಲ್ಯ ಹೊಂದಿರುವವರಿಗೆ ವಾಹನಗಳನ್ನು ನೀಡಲು ಅನುಮತಿ ನೀಡಲಾಗುತ್ತದೆ. ವಾಹನ ಓಡಿಸಲು ಎರಡೂ ಕೈ ಚೆನ್ನಾಗಿರಬೇಕು ಎಂಬ ನಿಯಮವಿದೆ. ಶಾಸಕರು, ಸಂಸದರ ನಿಧಿಯಿಂದ ₹10 ಲಕ್ಷ ಮೀಸಲಿಡಬೇಕು ಎಂಬ ನಿಯಮ ಇದೆ. ಆದರೆ ಯಾರೂ ಸರಿಯಾಗಿ ನೀಡುತ್ತಿಲ್ಲ. ಸರ್ಕಾರದಿಂದ ಬಂದಿರುವ ವಾಹನಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಬಂದಿರುವ ವಾಹನವನ್ನು ಕೂಡಲೇ ನೀಡಬೇಕು ಎಂದು ವಿಕಲಚೇತನರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಲುವರಾಜು ಒತ್ತಾಯಿಸಿದರು.

ತ್ರಿಚಕ್ರ ವಾಹನಕ್ಕೆ ಅರ್ಜಿ ಸಲ್ಲಿಸಬೇಕಾದರೆ ವಾಹನಾ ಕಲಿಕಾ ಪರವಾನಗಿ ಸಲ್ಲಿಸಬೇಕು ಎಂಬ ನಿಯಮ ಇದ್ದು, ವಾಹನ ಸಿಗುತ್ತದೆ ಎಂಬ ಖುಷಿಯಲ್ಲಿ ಎಲ್‌ಎಲ್‌ಆರ್‌ ಮಾಡಿಸಿ ಅರ್ಜಿ ಸಲ್ಲಿಸಿದ್ದವರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಎಲ್‌ಎಲ್‌ಆರ್‌ ವಾಯಿದೆ ಕೇವಲ ಆರು ತಿಂಗಳು ಮಾತ್ರ ಇದ್ದು, ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿರುವುದರಿಂದ ಅವಧಿ ಮುಗಿದುಹೋಗಿದೆ. ಆಯ್ಕೆಯಾಗಿರುವ ಫಲಾನುಭವಿಗಳ ಎಲ್‌ಎಲ್‌ಆರ್‌ ಮತ್ತೆ ಎಲ್‌ಎಲ್‌ಆರ್‌ ಮಾಡಿಸುವ ಅನಿವಾರ್ಯತೆ ಎದುರಾಗಿದೆ.

ವಿತರಣೆ ಶೀಘ್ರ

ಕೇಂದ್ರ ಕಚೇರಿಯಿಂದ ಬೆಂಗಳೂರಿನಲ್ಲೇ ವಾಹನ ನೋಂದಣಿ ಮಾಡಿಸಿದ ಕಾರಣ ವಾಹನಗಳನ್ನು ನೀಡುವುದು ತಡವಾಯಿತು. ಈಗ ವಾಹನಗಳ ನೋಂದಣಿ ಸಂಖ್ಯೆ ಬಂದಿದ್ದು, ಶೀಘ್ರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.

-ಆರ್‌.ರೋಹಿತ್‌,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT