ಮಂಗಳವಾರ, ಜುಲೈ 5, 2022
27 °C
ಕೋಟೆ, ಕಂದಕ, ಕಾರಾಗೃಹ, ಸ್ಮಾರಕಗ ವೀಕ್ಷಿಸಿದ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌

ಶ್ರೀರಂಗಪಟ್ಟಣ ಪ್ರವಾಸಿ ತಾಣ ಅಭಿವೃದ್ಧಿಗೆ ನೆರವು-ಆನಂದ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌ ಹೇಳಿದರು.

ಪಟ್ಟಣಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಕೋಟೆ, ಕಂದಕ, ಕಾರಾಗೃಹ ಮೊದಲಾದ ಸ್ಮಾರಕಗಳನ್ನು ವೀಕ್ಷಿಸಿ ಮಾತನಾಡಿದರು.

ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಪ್ರದಕ್ಷಿಣೆ: ಸಚಿವ ಆನಂದಸಿಂಗ್‌ ನಗರ ಪ್ರದಕ್ಷಿಣೆ ಮಾಡಿದರು. ಪೂರ್ವ ಕೋಟೆ ದ್ವಾರದಲ್ಲಿ ಕೋಟೆ ಮತ್ತು ಕಂದಕದ ಸ್ಥಿತಿಗತಿ ವೀಕ್ಷಿಸಿದರು. ಪುರಸಭೆ ವೃತ್ತದ ವರೆಗೆ ಕೋಟೆಯ ಒಳಗೆ ಸಾಗಿದರು. ಅಂಬೇಡ್ಕರ್‌ ಭವನದ ಬಳಿ ಕಾವೇರಿ ನದಿ ತೀರಕ್ಕೆ ತೆರಳಿ ದೋಣಿ ವಿಹಾರ ಆರಂಭಿಸುವ ಸಾಧಕ– ಬಾಧಕ ಪರಿಶೀಲಿಸಿದರು.

ರಾಜ ಸೋಪಾನಕಟ್ಟೆ ಬಳಿಗೆ ತೆರಳಿದ ಸಚಿವರು ಅಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು. ಕರ್ನಲ್‌ ಬೇಯ್ಲಿ ಡಂಜನ್‌ (ಕಾರಾಗೃಹ)ಗೆ ಭೇಟಿ ನೀಡಿದ್ದ ಸಚಿವರಿಗೆ ಅಧಿಕಾರಿಗಳು ವಿವರ ನೀಡಿದರು.

ವೆನಿಸ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿ: ಈ ಪಾರಂಪರಿಕ ಪಟ್ಟಣವನ್ನು ಇಟೆಲಿಯ ವೆನಿಸ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ಪಟ್ಟಣದ ಪೂರ್ವ ಕೋಟೆ ದ್ವಾರ (ಬೆಂಗಳೂರು ಗೇಟ್‌ ಫೋರ್ಟ್‌)ದಲ್ಲಿ ಕಂದಕ ಮತ್ತು ಕೋಟೆಯ ಬಗ್ಗೆ ಮಾಹಿತಿ ನೀಡಿದ ಶಾಸಕ, ಪಟ್ಟಣದ ಸುತ್ತಲೂ 6.5 ಕಿ.ಮೀ. ಕೋಟೆ ಮತ್ತು ಅದಕ್ಕೆ ಹೊಂದಿಕೊಂಡ ಕಂದಕ ಇದೆ. ಗಂಗ ಅರಸರ ಕಾಲದಿಂದ ಟಿಪ್ಪು ಸುಲ್ತಾನ್‌ ಕಾಲದವರೆಗೆ ಕೋಟೆ ನಿರ್ಮಾಣವಾಗಿದೆ. ಕೋಟೆಗೆ ಕಾಯಕಲ್ಪ ನೀಡಬೇಕು. ಕಂದಕದಲ್ಲಿ ಮತ್ತೆ ನೀರು ಹರಿಸಿ ದೋಣಿ ವಿಹಾರ ನಡೆಸಬೇಕು. ಕಂದಕಕ್ಕೆ ಹೊಂದಿಕೊಂಡಂತೆ ಪಾದಚಾರಿ ಮಾರ್ಗ, ಉದ್ಯಾನ ನಿರ್ಮಿಸಬೇಕು. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪಟ್ಟಣ ಪ್ರಸಿದ್ಧಿ ಪಡೆಯಲಿದೆ. ಸರ್ಕಾರಕ್ಕೆ ಆದಾಯವೂ ಬರಲಿದೆ ಎಂದರು.

ರವಿಂದ್ರ ಶ್ರೀಕಂಠಯ್ಯ ಅವರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಆನಂದಸಿಂಗ್‌, ಶ್ರೀರಂಗಪಟ್ಟಣದ ಕೋಟೆ, ಕಂದಕ ಅಭಿವೃದ್ಧಿ ಮತ್ತು ದೋಣಿ ವಿಹಾರ ಯೋಜನೆ ಸಂಬಂಧ ಉನ್ನತ ಅಧಿಕಾರಿಗಳ ಸಭೆ ನಡೆಸುತ್ತೇನೆ. ಈ ಪಟ್ಟಣದ ಗತ ವೈಭವ ಮರು ಸ್ಥಾಪಿಸಲು ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಪರಂಪರೆ ಮತ್ತು ವಸ್ತುಸಂಗ್ರ ಹಾಲಯ ಇಲಾಖೆ ಆಯುಕ್ತರಾದ ಪೂರ್ಣಿಮಾ, ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ, ಪುರಸಭೆ ಅಧ್ಯಕ್ಷೆ ಪಿ.ನಿರ್ಮಲಾ, ಮುಖ್ಯಾಧಿಕಾರಿ ಮಹದೇವಯ್ಯ ಹಾಗೂ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಇಲಾಖೆಗಳ ಅಧಿಕಾರಿಗಳು ಜತೆಗಿದ್ದರು.

ಇದಕ್ಕೂ ಮುನ್ನ ಬಿಜೆಪಿ ಮುಖಂಡರಾದ ಕೆ.ಎಸ್‌.ನಂಜುಂಡೇಗೌಡ, ಡಾ.ಎಸ್‌.ಸಿದ್ದರಾಮಯ್ಯ, ಪೀಹಳ್ಳಿ ಎಸ್‌. ರಮೇಶ್‌, ಸಂತೋಷ್‌ಕುಮಾರ್‌, ಬಿ.ಸಿ.ಕೃಷ್ಣೇಗೌಡ, ಉಮೇಶ್‌ಕುಮಾರ್‌, ಹೇಮಂತಕುಮಾರ್‌ ಪಟ್ಟಣದ ಕುವೆಂಪು ವೃತ್ತದಲ್ಲಿ ಸಚಿವ ಆನಂದ್‌ಸಿಂಗ್‌ ಅವರಿಗೆ ಸಂಭ್ರಮದ ಸ್ವಾಗತ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು