ಶ್ರೀರಂಗಪಟ್ಟಣ: ರಂಗನತಿಟ್ಟಿನಲ್ಲಿ ಮತ್ತೆ ಪ್ರವಾಸಿಗರ ಕಲರವ

ಶ್ರೀರಂಗಪಟ್ಟಣ: ಕೋವಿಡ್ ಎರಡನೇ ಅಲೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದ್ದರಿಂದ ಬಿಕೋ ಎನ್ನುತ್ತಿದ್ದ ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಜುಲೈ 6ರಂದು ಪ್ರವೇಶ ಆರಂಭವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಪಕ್ಷಿಪ್ರಿಯರ ಸಂಖ್ಯೆ ಹೆಚ್ಚುತ್ತಿದೆ.
ಶನಿವಾರ, ಭಾನುವಾರ ಸಾವಿರಾರು ಪ್ರವಾಸಿಗರು ಪಕ್ಷಿಧಾಮಕ್ಕೆ ಬರುತ್ತಿದ್ದಾರೆ. ರಾಜ್ಯ, ಹೊರ ರಾಜ್ಯಗಳ
ಪ್ರವಾಸಿಗರ ಭೇಟಿಯಿಂದಾಗಿ ಮತ್ತೆ ಕಳೆಗಟ್ಟಿದೆ. ಪಕ್ಷಿಧಾಮದ ಪ್ರವೇಶ ದ್ವಾರದಿಂದ ಸ್ವಾಲೋ ಹಕ್ಕಿಯ ತಾಣದ ಆಚೆ ತುದಿಯವರೆಗೂ ಪ್ರವಾಸಿಗರ ಕಲರವ ಕಂಡು ಬರುತ್ತಿದೆ.
ಪಕ್ಷಿಧಾಮ ಮತ್ತೆ ಸಹಜ ಸ್ಥಿತಿಗೆ ಮರಳಿದ್ದು, ದೋಣಿ ವಿಹಾರವೂ ಆರಂಭವಾಗಿದೆ. ಪ್ರವಾಸಿಗರು ಪಕ್ಷಿ ವೀಕ್ಷಣೆ, ಛಾಯಾಗ್ರಹಣ ಮಾಡುವ ಜತೆಗೆ ವುಡ್‌ಲಾಟ್ ಉದ್ಯಾನದ ಸೌಂದರ್ಯ ಸವಿಯುತ್ತಿದ್ದಾರೆ.
ಪಕ್ಷಿಧಾಮದಲ್ಲಿ ಸದ್ಯ ಐಬಿಸ್, ಸ್ಟೋನ್ ಫ್ಲವರ್, ಇಗ್ರೆಟ್, ಡಾಟರ್, ಪರ್ಪಲ್ ಹೆರೋನ್, ಗ್ರೇ ಹೆರೋನ್, ಕಾರ್ಮೊರೆಂಟ್ ಸೇರಿದಂತೆ ಹಲವು ಪ್ರಭೇದದ ಪಕ್ಷಿಗಳು ಕಾಣ ಸಿಗುತ್ತವೆ. ಸಂಜೆ ವೇಳೆ ಬರುವವರು ನೀರು ನಾಯಿಗಳನ್ನೂ (ಡಾಟರ್) ನೋಡಬಹುದು. ಬಂಡೆಗಳ ಮೇಲೆ ಮಲಗುವ ಮಾರ್ಷ್ ಜಾತಿಯ ಮೊಸಳೆಗಳು ಕೂಡ ಪ್ರವಾಸಿಗರಿಗೆ ಮುದ ನೀಡುತ್ತಿವೆ.
ಮರಳಿದ ಬಂದ ಪಕ್ಷಿಗಳು: ಚಳಿಗಾಲದಲ್ಲಿ ಬಂದು ವಂಶಾಭಿವೃದ್ಧಿ ಕಾರ್ಯ ಮುಗಿಸಿ ತೆರಳುತ್ತಿದ್ದ ಪಕ್ಷಿಗಳ ಪೈಕಿ ಕೆಲವು ಪೇಂಟೆಡ್ ಸ್ಟೋರ್ಕ್ ಮತ್ತು ಸ್ಪಾಟ್ ಬಿಲ್ ಪೆಲಿಕಾನ್ ಪಕ್ಷಿಗಳು ಮತ್ತೆ ಪಕ್ಷಿಧಾಮಕ್ಕೆ ಮರಳಿವೆ. ಡಿಸೆಂಬರ್ ಕೊನೆಗೆ ಬರಬೇಕಿದ್ದ ಈ ಪಕ್ಷಿಗಳು 5 ತಿಂಗಳು ಮೊದಲೇ ಇಲ್ಲಿಗೆ ಬಂದಿಳಿದಿವೆ. ಪಕ್ಷಿಧಾಮದಲ್ಲಿ ಸತತ ಎರಡು ತಿಂಗಳು ಪ್ರವಾಸಿಗರ ಜಂಗುಳಿ ಇಲ್ಲದ ಕಾರಣ ಹೊಸ ವಾತಾವರಣ ಸೃಷ್ಟಿಯಾಗಿದ್ದು, ಪಕ್ಷಿಗಳು ಮರಳಿ ಬರಲು ಕಾರಣ ಇರಬಹುದು ಎಂದು ಪಕ್ಷಿಧಾಮದ ಅಧಿಕಾರಿಗಳು ಊಹಿಸಿದ್ದಾರೆ.
‘ಒಂದು ವಾರದಿಂದ ವಾಡಿಕೆಯಷ್ಟು ಪ್ರವಾಸಿಗರು ಪಕ್ಷಿಧಾಮಕ್ಕೆ ಭೇಟಿ ನೀಡುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ವಯಸ್ಕರಿಗೆ ₹ 75, ಮಕ್ಕಳಿಗೆ ₹ 25; ವಿದೇಶಿ ವಯಸ್ಕರಿಗೆ ₹ 400 ಮತ್ತು ಮಕ್ಕಳಿಗೆ ₹ 200 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ದೋಣಿ ವಿಹಾರ ಮಾಡುವ ವಯಸ್ಕರಿಗೆ ₹ 100 ಹಾಗೂ ಮಕ್ಕಳಿಗೆ ₹ 35 ಶುಲ್ಕವಿದೆ. ಪಕ್ಷಿಧಾಮಕ್ಕೆ ಶುಕ್ರವಾರ 400ಕ್ಕೂ ಅಧಿ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ₹ 61,675 ಆದಾಯ ಬಂದಿದೆ’ ಎಂದು ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.