‘ಕೆಡಿಪಿ ಸಭೆಯಲ್ಲಿ ಆರ್‌ಟಿಐ ವಿಷಯವಿರಲಿ’
‘ಪ್ರಗತಿ ಪರಿಶೀಲನಾ ಸಭೆಗಳಲ್ಲಿ (ಕೆಡಿಪಿ) ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಬಗ್ಗೆ ಚರ್ಚಿಸುವುದರಿಂದ ವಿಳಂಬ ಧೋರಣೆ ತಡೆಗಟ್ಟಬಹುದು ಮತ್ತು ಸಕಾಲದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊಡಿಸಬಹುದು’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ. ಬದ್ರುದ್ದೀನ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ ಅಧಿಕಾರಿಗಳು ಆರ್.ಟಿ.ಐ ಕಾಯ್ದೆಯ ಕುರಿತು ಮೊದಲು ಸಮರ್ಪಕವಾಗಿ ತಿಳಿದುಕೊಳ್ಳಿ. ಆಯೋಗವು ಸಮಾಜಘಾತುಕ ಶಕ್ತಿಗಳಿಗೆ ಮಣೆ ಹಾಕುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರನ್ನು ಸಹಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ದುರುದ್ದೇಶದಿಂದ ಪದೇ ಪದೇ ಅರ್ಜಿ ಸಲ್ಲಿಸುವವರನ್ನು ‘ಕಪ್ಪು ಪಟ್ಟಿಗೆ’ ಸೇರಿಸುತ್ತಿದ್ದೇವೆ ಎಂದರು. ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ 1135 ಮೇಲ್ಮನವಿ ಅರ್ಜಿಗಳು ಬಾಕಿ ಇವೆ. ಎಲ್ಲಾ ಜಿಲ್ಲೆಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯ ಶೇ 3.5ರಷ್ಟು ಮಾತ್ರ ಇದೆ. ಇದು ಶೂನ್ಯಕ್ಕೆ ಇಳಿಕೆಯಾಗಬೇಕು. ಪ್ರಥಮ ಮೇಲ್ಮನವಿ ಪ್ರಾಧಿಕಾರ ಸರಿಯಾಗಿ ಸ್ಪಂದಿಸಿದರೆ ಆಯೋಗಕ್ಕೆ ಬರುವ ಅರ್ಜಿಗಳನ್ನು ಕಡಿಮೆ ಮಾಡಬಹುದು ಎಂದರು.