ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಸಾರ್ವಭೌಮ ಸ್ಥಾನ ಇನ್ನೂ ಸಿಕ್ಕಿಲ್ಲ: ಟಿ.ಎಸ್‌.ನಾಗಾಭರಣ ವಿಷಾದ

ವಿಚಾರ ಸಂಕಿರಣ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ವಿಷಾದ
Last Updated 2 ಜುಲೈ 2022, 13:04 IST
ಅಕ್ಷರ ಗಾತ್ರ

ಮಂಡ್ಯ: ‘ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಬೇಕು. ಆದರೆ ಅದಕ್ಕೆ ಅವಶ್ಯವಿರುವ ಕಾನೂನು ತಿದ್ದುಪಡಿ ಇದೂವರೆಗೂ ಸಾಧ್ಯವಾಗದಿರುವುದು ದುರದೃಷ್ಟಕರ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ವಿಷಾದಿಸಿದರು.

ನಗರದ ಗಾಂಧಿ ಭವನದಲ್ಲಿ ಕನ್ನಡಸೇನೆ ಸಂಘಟನೆಯ ವತಿಯಿಂದ ಶನಿವಾರ ನಡೆದ ‘ಕನ್ನಡ ಭಾಷೆಯ ಇಂದಿನ ಸವಾಲುಗಳು; ಒಂದು ಚಿಂತನೆ’ ವಿಚಾರ ಸಂಕಿರಣ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲದಕ್ಕೂ ಸಂವಿಧಾನ ತಿದ್ದುಪಡಿ ತರುತ್ತಾರೆ. ಸಂಸದರಿಗೆ, ಶಾಸಕರ ವೇತನ ಹೆಚ್ಚಳ ಮಾಡಲು ಕಾನೂನುಗಳನ್ನು ತಿದ್ದುಪಡಿ ಮಾಡುತ್ತಾರೆ. ಆದರೆ ಭಾಷೆಗೆ ಸ್ಥಾನ ನೀಡಲು, ಅವಕಾಶ ನೀಡಲು ಸಂವಿಧಾನ ತಿದ್ದುಪಡಿಯಾಗಬಾರದಾ? ಇದೂವರೆಗೂ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಮತ್ತು ಗೌರವ ದೊರಕಿಲ್ಲ. ಹೀಗಾಗಿ ಜನಪ್ರತಿನಿಧಿಗಳು ಭಾಷೆಗೆ ಸಲ್ಲಬೇಕಾದ ಗೌರವ ನೀಡಲು ಶ್ರಮಿಸಬೇಕು’ ಎಂದು ಒತ್ತಾಯಿಸಿದರು.

‘ಭಾಷೆ ಮೇಲೆ ಕೇವಲ ಪ್ರೀತಿ ಇದ್ದರೆ ಸಾಲದು, ಇಂಗ್ಲಿಷ್‌ ಭಾಷೆ ಎಲ್ಲರಿಗೂ ಚೆನ್ನಾಗಿ ಕಾಣಿಸುತ್ತದೆ, ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನೇ ನಂಬಿರುವವರ ಗತಿಯೇನು? ಪ್ರೀತಿ ತೋರ್ಪಡಿಕೆ ಆಗದೇ ನಿಜವಾದ ಭಾಷಾ ಪ್ರೀತಿ ಆಗಬೇಕು. ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿರುವ ನಮ್ಮ ಕನ್ನಡ ಭಾಷೆಯೇ ನಮಗೆ ಶ್ರೇಷ್ಠವಾಗಬೇಕು’ ಎಂದರು.

‘ಇಡೀ ಜಗತ್ತಿನಲ್ಲಿ ವೈಜ್ಞಾನಿಕವಾಗಿ ಬರೆಯಲು ಹಾಗೂ ಓದಲು ಬರುವ ಭಾಷೆ ಎಂದರೆ ಅದು ಕನ್ನಡ. ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿ ಕೇವಲ ವರದಿಯಾಗಿಯೇ ಉಳಿದಿರುವುದು ನಮ್ಮ ನಾಡಿನ ದುರಂತ. ಸರ್ಕಾರ ಈ ವರದಿಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಮಾದರಿಯಾಗಿ ನಿಂತಿರುವ ಮಂಡ್ಯ ಜಿಲ್ಲೆಯಲ್ಲಿ ಯಾರ ಹೆಸರನ್ನು ಹೇಳಿದರೂ ಅವರು ಒಂದಲ್ಲ ಒಂದು ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಸಾಧನೆ ಮಾಡಿದವರು ಸಾಕಷ್ಟು ಜನರಿದ್ದಾರೆ. ಕನ್ನಡ ಒಂದು ಭಾಷೆ ಮಾತ್ರವೇ ಅಲ್ಲ, ಸಂಭಾಷಣೆಗೆ ಸೀಮಿತವಾಗಿಲ್ಲ, ಈ ಭಾಷೆ ಒಂದು ಸಂಸ್ಕೃತಿ, ಬದುಕು ಹಾಗೂ ಜೀವನದ ಕ್ರಮವಾಗಿದೆ’ ಎಂದರು.

‘ಎಲ್ಲರೂ ಕೃಷಿ ಮಾಡುತ್ತಾರೆ, ಮಂಡ್ಯದಲ್ಲಿಯೂ ಕಬ್ಬು ಬೆಳೆಯುತ್ತಾರೆ, ಬೆಳಗಾವಿಯಲ್ಲಿಯೂ ಕಬ್ಬು ಬೆಳೆಯುತ್ತಾರೆ, ಆದರೆ, ಇಲ್ಲಿ ಕೃಷಿಕ ವಿಧಾನಗಳಲ್ಲಿ ಸಾಕಷ್ಟು ವೈಶಿಷ್ಟ್ಯಗಳಿರುತ್ತವೆ. ಜನಪದ ಎಂದರೆ ಕೇವಲ ಹಾಡುವುದಲ್ಲ, ಬದುಕೇ ಜನಪದವಾಗಿರುತ್ತದೆ. ರಾಗಿ ಬೀಸುವುದರಿಂದ ಹಿಡಿದು ಹೊಲದಲ್ಲಿ ಕೆಲಸ ಮಾಡುವ, ಎತ್ತುಗಳ ಜೊತೆ ಒಡನಾಡುವ ಪದ್ಧತಿಯಲ್ಲಿ ಜನಪದ ಇದೆ’ ಎಂದರು.

ಇದೇ ಸಂದರ್ಭದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಕಾಗೆಹಳ್ಳದದೊಡ್ಡಿ ಜಯಮ್ಮ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಸೌಭಾಗ್ಯಮ್ಮ, ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್‌.ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್‌ ಇದ್ದರು.

‘ಮಾತೃಭಾಷಾ ಶಿಕ್ಷಣ ಅವಶ್ಯ’

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ ‘ಕನ್ನಡ ಶಾಲೆಯು ಯಾವ ಭಾಷೆಗೂ ಕಮ್ಮಿಯಿಲ್ಲ, ಹೊರ ರಾಜ್ಯದಿಂದ ಕನ್ನಡ ಕಲಿಯಲು ಬರುತ್ತಿದ್ದಾರೆ. ಕನ್ನಡ ಶಾಲೆಗೆ ಹೋಗುವುದಕ್ಕೆ ಹಿಂಜರಿಯುವ ನಾವು, ಸರ್ಕಾರಿ ಕೆಲಸವೇ ಬೇಕು ಎಂದು ಕೇಳುತ್ತೇವೆ. ನಮ್ಮಲ್ಲಿರುವ ಅಂಕುಡೊಂಕುಗಳನ್ನು ತಿದ್ದುಕೊಳ್ಳಬೇಕು. 1 ರಿಂದ 10ನೇ ತರಗತಿವರೆಗೆ ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT