ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪ್ರಸಿದ್ಧಿ ಪಡೆದ ‘ಗಿಡ ನೆಡು–ಮರ ಮಾಡು’ ಸವಾಲು!

ಬೆಳಕವಾಡಿ ಯುವಜನರು ಸೃಷ್ಟಿಸಿದ ಆಂದೋಲನ, ಸಸಿ ನೆಟ್ಟ ಚಿತ್ರನಟರು, ರಾಜಕಾರಣಿಗಳು
Last Updated 14 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಇದು ಸವಾಲುಗಳ (ಚಾಲೆಂಜ್‌) ಯುಗ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವ ಜನರು ವಿವಿಧ ವಿಷಯಗಳ ಸವಾಲು ಸ್ವೀಕರಿಸುತ್ತಾರೆ. ಉಪಯೋಗವಿಲ್ಲದ ವಿಚಾರದ ಸವಾಲು ಸ್ವೀಕರಿಸುವುದೇ ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ರಾಜ್ಯದ ವಿವಿಧೆಡೆ ‘ಗಿಡ ನೆಡು–ಮರ ಮಾಡು’ಸವಾಲು ಸ್ವೀಕಾರ ಆರಂಭವಾಗಿದ್ದು ಪರಿಸರ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಸೀರೆ ಉಡುವುದು, ಪಂಚೆ ತೊಡುವುದು, ಫಿಟ್‌ನೆಟ್‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸವಾಲು ಸ್ವೀಕರಿಸುತ್ತಾರೆ. ಯುವಕರ ಗುಂಪೊಂದು ಪರಿಸರ ಸಂರಕ್ಷಣೆಗೆ ಸವಾಲು ಸೃಷ್ಟಿಸಬೇಕು ಎಂಬ ಉದ್ದೇಶದಿಂದ ‘ಗಿಡ ನೆಡು–ಮರ ಮಾಡು’ ಶೀರ್ಷಿಕೆಯಡಿ ಸವಾಲು ಸ್ವೀಕಾರ ಅಭಿಯಾನ ಆರಂಭಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದಿಂದ ಈ ಸವಾಲು ಆರಂಭವಾಗಿದೆ. ನೆಟ್ಟಿಗರು ಸಸಿ ನೆಟ್ಟು, ನೀರು ಹಾಕಿ ಅದನ್ನು ವಿಡಿಯೊ ಮಾಡಿ ಇತರರಿಗೂ ಸವಾಲು ಹಾಕುತ್ತಿದ್ದಾರೆ. ಸವಾಲು ಹಾಕುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೀಕ್ಷಣೆ, ಹಂಚಿಕೆಯ ರೂಪದಲ್ಲಿ ಹೊರ ಜಿಲ್ಲೆ, ರಾಜ್ಯ, ದೇಶದ ಗಡಿ ದಾಟಿದೆ.

ಗಣೇಶ ಉತ್ಸವ, ಮದುವೆ, ಜನ್ಮದಿನ, ತಿಥಿ, ಗೃಹ ಪ್ರವೇಶ, ಶಾಲಾ ಕಾಲೇಜು ಕ್ರಾರ್ಯಕ್ರಮಗಳಲ್ಲೂ ಸಸಿ ವಿತರಣೆ ಮಾಡುವುದು ಈಚೆಗೆ ಸಾಮಾನ್ಯವಾಗಿದೆ. ಸಸಿ ವಿತರಣೆ ಮಾಡಿದವರು ಕೂಡ ‘ಗಿಡ ನೆಟ್ಟು ಮರ ಮಾಡಿ’ ಎಂದು ಸವಾಲು ಹಾಕುತ್ತಿದ್ದಾರೆ. ಬೆಳಕವಾಡಿ ಗ್ರಾಮದ ಯುವಕರು ಪ್ರಾರಂಭಿಸಿದ ಈ ಸವಾಲು ಸಾಮಾಜಿಕ ಜಾಲತಾಣದಲ್ಲಿ ಜನಮನ್ನಣೆ ಗಳಿಸಿದೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲೇ ಸವಾಲು ಸ್ವೀಕರಿಸಿ ‌ಸಾವಿರಾರು ಗಿಡಗಳನ್ನು ನೆಡಲಾಗಿದೆ. ಇಂತಹ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆಗೆ ಸಾಕಷ್ಟು ಮೆಚ್ಚುಗೆ ಪಡೆದಿದೆ.

ಯಾರಾರು ಸ್ವೀಕರಿಸಿದ್ದಾರೆ?: ‘ಗಿಡ ನೆಡು ಮರ ಮಾಡು’ ಸವಾಲು ಸ್ವೀಕಾರು ಮಾಡಿರುವವರು ಸಾಮಾನ್ಯ ಜನರಷ್ಟೇ ಅಲ್ಲ, ಗಣ್ಯರು, ಚಿತ್ರ ನಟರು ಕೂಡ ಸವಾಲು ಸ್ವೀಕರಿಸಿದ್ದಾರೆ. ಇದು ಯುವ ಜನರಿಗೆ ಸ್ಫೂರ್ತಿಯಾಗಿದೆ. ಸಾಲು ಮರದ ತಿಮ್ಮಕ್ಕ ಅವರೂ ಸವಾಲು ಸ್ವೀಕರಿಸಿ ಗಿಡ ನೆಟ್ಟು ‘ನೀವೂ ಗಿಡ ನೆಟ್ಟು ಮರ ಮಾಡಿ’ ಎನ್ನುವ ಸವಾಲು ಹಾಕಿದ್ದಾರೆ. ಕುಂದನಿ ಬೆಟ್ಟದ ಮೇಲೆ ಕಟ್ಟೆ ನಿರ್ಮಿಸಿರುವ ಕಲ್ಮನೆ ಕಾಮೇಗೌಡ ಅವರೂ ‘ಗಿಡ ನೆಡಿ–ಮರ ಮಾಡಿ’ ಎಂದು ಸವಾಲು ಹಾಕಿದ್ದಾರೆ. ಮಿಮಿಕ್ರಿ ಗೋಪಿ ಕೂಡ ಇದೇ ಹಾದಿ ಅನುಸರಿಸಿದ್ದಾರೆ.

ಇದರ ಪರಿಣಾಮವಾಗಿ ದಲಿತ ಕವಿ ಡಾ.ಸಿದ್ದಲಿಂಗಯ್ಯ, ಸಾಹಿತಿ ಚಂದ್ರಶೇಖರ್‌ ಕಂಬಾರ, ಸಾಹಿತಿ ದೊಡ್ಡರಂಗೇಗೌಡ, ಮಳವಳ್ಳಿ ಹಿರಿಯ ಸಿವಿಲ್‌ ನ್ಯಾಯಾಧೀಶ ರಾಧಾಕೃಷ್ಣ, ತುಮಕೂರಿನ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಹಾಸನ ಜಿಲ್ಲಾಧಿಕಾರಿ ಗಿರೀಶ್‌, ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಪೊಲೀಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ, ನಟರಾದ ಥ್ರಿಲ್ಲರ್‌ ಮಂಜು, ಯೋಗರಾಜ್‌ ಭಟ್‌, ನೀನಾಸಂ ಸತೀಶ್‌, ಉಪೇಂದ್ರ, ರಮೇಶ್‌ ಭಟ್‌, ಶಾಸಕ ಡಾ.ಕೆ.ಅನ್ನದಾನಿ, ಮರಿತಿಬ್ಬೇಗೌಡ, ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮುಂತಾದವರು ಗಿಡ ನೆಟ್ಟಿದ್ದಾರೆ.

ಇಷ್ಟೇ ಅಲ್ಲದೇ ಜರ್ಮನಿಯ ಪ್ರಜೆ ಜೂರಿನಾ, ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್‌ ಸಸೆಕ್ಸ್‌ನ ಅಂಥ್ರೊಪಾಲಜಿ ವಿಭಾಗದ ಪ್ರಾಧ್ಯಾಪಕ ಗೀರ್ಟ್‌ ಡೆ ನೆವೆ ಕೂಡ ಗಿಡ ನೆಟ್ಟಿದ್ದಾರೆ.

‘ಗಿಡ ನೆಡಲು ಉತ್ಸುಕರಾಗಿರುವವರಿಗೆ ಅರಣ್ಯ ಇಲಾಖೆಯಿಂದ ಸಸಿ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 60 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ’ ಎಂದು ನೆಲದನಿ ಬಳಗದ ಅಧ್ಯಕ್ಷ ಮಂಗಲ ಲಂಕೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT