ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ ಹಬ್ಬ, ಜಾತ್ರೆ: ತವರು ಮರೆಯದ ವಲಸಿಗರು

ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಸಂಪ್ರದಾಯದ ಆಚರಣೆಗಳು, ನಾಟಕ, ಜಾನಪದ ಚಟುವಟಿಕೆಗಳಲ್ಲಿ ಭಾಗಿ
Last Updated 5 ಏಪ್ರಿಲ್ 2022, 22:30 IST
ಅಕ್ಷರ ಗಾತ್ರ

ನಾಗಮಂಗಲ: ಬದುಕಿಗಾಗಿ ಉದ್ಯೋಗ, ಶಿಕ್ಷಣವನ್ನರಸಿ ಹುಟ್ಟೂರಿನಿಂದ ನಗರಗಳಿಗೆ ವಲಸೆ ಹೋದವರನ್ನು ಸಾಲುಸಾಲು ಹಬ್ಬಗಳು, ಜಾತ್ರೆಗಳು ಕೈಬೀಸಿ ಕರೆಯುತ್ತಿವೆ. ಮಾನವೀಯ ಸಂಬಂಧ, ಬಾಂಧವ್ಯ ಬೆಸೆಯುತ್ತಿರುವ ಸಂಸ್ಕೃತಿ, ಸಂಪ್ರದಾಯದ ಆಚರಣೆಗಳು ಈ ಆಧುನಿಕ ಕಾಲಘಟ್ಟದಲ್ಲೂ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿವೆ.

ತಾಲ್ಲೂಕಿನಲ್ಲಿ ಬರಗಾಲ ಸೇರಿದಂತೆ ಯಾವುದೇ ಸಂದರ್ಭದಲ್ಲೂ ಹಬ್ಬ, ಸಂಸ್ಕೃತಿ, ಸಂಪ್ರದಾಯಗಳನ್ನು ಬಿಡದೇ ಜನರು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಅಲ್ಲದೇ ತಾಲ್ಲೂಕಿನಲ್ಲಿ ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಪ್ರಾರಂಭದಲ್ಲಿ ಪ್ರತಿ ಗ್ರಾಮಗಳಲ್ಲೂ ಊರಹಬ್ಬಗಳು ನಡೆಯುತ್ತವೆ. ನೇರಲೆಕೆರಮ್ಮ ಜಾತ್ರೆ, ಮಾರಮ್ಮದೇವಿ ಹಬ್ಬ, ಮಾಯಮ್ಮ ದೇವಿಹಬ್ಬ, ಬಡಗುಡಮ್ಮ ಜಾತ್ರೆ, ಸೋಮನಹಳ್ಳಿ ಅಮ್ಮನ ಜಾತ್ರೆ, ಪಾಲಕೆರೆಮ್ಮಹಬ್ಬ, ಪಟದಲದಮ್ಮ ಹಬ್ಬ, ಹುಲಿಕೆರಮ್ಮ ಜಾತ್ರೆ, ಮುಳಕಟ್ಟಮ್ಮನ ಹಬ್ಬಗಳು ಸೇರಿದಂತೆ ತಾಲ್ಲೂಕಿನ 200 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಊರಹಬ್ಬಗಳು ಜರುಗುತ್ತವೆ‌.

ಈ ಹಬ್ಬಗಳ ಹಿನ್ನೆಲೆಯಲ್ಲಿ ಹಲವು ದಿನಗಳು ಮತ್ತು ವರ್ಷಗಳಿಂದ ಕಾರಣಾಂತರಗಳಿಂದ ದೂರವಿದ್ದ ಸಂಬಂಧಿಗಳನ್ನು ಎಲ್ಲವನ್ನೂ ಮರೆತು ಮತ್ತೆ ತರವರಿಗೆ ಮರಳುತ್ತಾರೆ. ಸಂಬಂಧಿಕರನ್ನು ಆಹ್ವಾನಿಸಿ, ಊಟ ಹಾಕಿಸಿ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ.

ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರು ಊರಹಬ್ಬಕ್ಕಾಗಿ ಉದ್ಯೋಗಕ್ಕೆ ಬಿಡುವು ನೀಡಿ ಕುಟುಂಬ ಸಮೇತ ಗ್ರಾಮಗಳಿಗೆ ಬರುತ್ತಾರೆ. ತಮ್ಮ ಕುಟುಂಬಗಳೊಂದಿಗೆ ಕೂಡಿಕೊಳ್ಳವುದು ವಾಡಿಕೆಯಾಗಿದೆ. ಅಲ್ಲದೇ ವರ್ಷ ಪೂರ್ತಿ ವೃದ್ಧರ ನೆಲೆಬೀಡಾಗಿದ್ದ ಹಲವು ಗ್ರಾಮಗಳು ಊರಹಬ್ಬಗಳು ಬಂತೆಂದರೆ ತುಂಬಿ ತುಳುಕುತ್ತವೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜರುಗುವ ಊರಹಬ್ಬಗಳಲ್ಲಿ ಜನಪದ ಕಲೆಗಳ ಅನಾವರಣವಾಗುವ ಮೂಲಕ ಹಿರಿಯರು, ಕಿರಿಯರು ಮತ್ತು ಮಕ್ಕಳೆಲ್ಲರೂ ಸಹ ಒಟ್ಟಾಗಿ ಸೇರಿ ರಂಗ ಕುಣಿತ, ಪೂಜಾ ಕುಣಿತ, ವೀರಗಾಸೆ, ಸೋಬಾನೆ ಪದಗಳು, ಬಾಗವತಿಕೆ ಪದಗಳು ಸೇರಿದಂತೆ ಜನಪದ ಕಲೆಗಳು ಎಲ್ಲರ ನಡುವೆ ಬಾಂಧವ್ಯಗಳನ್ನು ಬೆಸೆಯುತ್ತವೆ.

ಅಲ್ಲದೇ ಊರಹಬ್ಬಕ್ಕೆ ವಾರದ ಮುಂಚಿತವಾಗಿಯೇ ಈ ಎಲ್ಲಾ ಕಲೆಗಳು ತೆರದುಕೊಳ್ಳುವುದರೊಂದಿಗೆ ಗ್ರಾಮಕ್ಕೆ ಹೊರಗಿನಿಂದ ಬಂದ ಸಂಬಂಧಿಕರನ್ನು ಮೋಜು ಮಸ್ತಿಯಲ್ಲಿ ತೇಲುಸುವ ಜೊತೆಗೆ ಸಂಸ್ಕೃತಿಯನ್ನು ಬಿತ್ತರಿಸುತ್ತವೆ. ಈಗಾಗಲೇ ತಾಲ್ಲೂಕಿನಾದ್ಯಂತ ವಲಸಿಗರು ಊರಿಗೆ ಮರಳಿದ್ದು ಹಬ್ಬಗಳ ಸಂಭ್ರಮದಲ್ಲಿ ತೊಡಗಿದ್ದಾರೆ. ಕಲಾ ಚಟುವಟಿಕೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.

‘ಊರ ಹಬ್ಬಗಳು ಸಮೀಪಿಸುತ್ತಲೇ ಬಂಧುಗಳ ಆಗಮನವು ಸಂತಸ ತರುತ್ತದೆ. ಜೊತೆಗೆ ವರ್ಷಗಳಿಂದ ದೂರವಿದ್ದ ಸ್ನೇಹಿತರು, ಕುಟುಂಸ್ಥರನ್ನು ಒಂದೆಡೆಗೆ ನೋಡುವುದೇ ಒಂದು ಸೊಬಗು. ಅಲ್ಲದೇ ಊರಹಬ್ಬಗಳು ಗ್ರಾಮೀಣ ಜನರನ್ನು ಆರ್ಥಿಕವಾಗಿ ಬರಿದು ಮಾಡುತ್ತವೆ ಎಂದುದು ಹಲವರ ಅಭಿಪ್ರಾಯವಾಗಿದ್ದರೂ ಸಹ ಎಲ್ಲರಿಡಗೂಡಿ ಸಂಭ್ರಮಿಸುವುದು, ಭಾಗವಹಿಸುವುದು ಸಂಭ್ರಮವೇ ಸರಿ’ ಎಂದು ದೊಡ್ಡಯಗಟಿ ಗ್ರಾಮದ ಯುವಕ ಕಿರಣ್ ಹೇಳುತ್ತಾರೆ.

‘ನಮ್ಮೂರು ಪಿ.ನೇರಲೆಕೆರೆ ಗ್ರಾಮ. ವಿದ್ಯಾಭ್ಯಾಸಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದು, ಊರ ಹಬ್ಬ ಬರುವುದನ್ನೇ ಕಾತುರದಿಂದ ಕಾಯುತ್ತಿರುತ್ತೇನೆ. ಏಕೆಂದರೆ ಹಬ್ಬಕ್ಕೆ ನಮ್ಮ ಕುಟುಂಬದ ಸದಸ್ಯರು ಸೇರಿದಂತೆ ಸ್ನೇಹಿತರೆಲ್ಲರೂ ಬರುವುದರಿಂದ ಅವರೊಂದಿಗೆ ಸಂಭ್ರಮದಿಂದ ಕಾಲ ಕಳೆಯುವುದೇ ಖುಷಿಯ ವಿಚಾರ. ಜೊತೆಗೆ ಅವರೆಲ್ಲರೂ ಒಟ್ಟಾಗಿ ಮೋಜುಮಸ್ತಿಯಲ್ಲಿ ತೊಡುವುದನ್ನು ವರ್ಷ ಪೂರ್ತಿ ನೆನಪಿಸಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿ ಚೇತನ್ ಹೇಳುತ್ತಾರೆ.

ಆಚರಣೆಗಳಿಂದ ಮನಸ್ಸಿಗೆ ನೆಮ್ಮದಿ

‘ಊರಹಬ್ಬಗಳಲ್ಲಿ ಪೂಜೆ– ಪುನಸ್ಕಾರ, ಸಾಂಪ್ರದಾಯಿಕ ಆಚರಣೆಗಳು, ಉತ್ಸವಗಳು, ರೂಢಿಪದ್ಧತಿಗಳು ನಿರಂತರವಾಗಿ ಮುಂದುವರಿದುಕೊಂಡು ಬರುವ ಮೂಲಕ ಮುಂದಿ‌ನ ಪೀಳಿಗೆಗೆ ಜಾಗೃತಿ ಮೂಡಿಸುತ್ತವೆ. ಅಂತಹ ವಿಶೇಷ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಭಾಗವಹಿಸುದರಿಂದ ನೆಮ್ಮದಿ ಲಭಿಸುತ್ತದೆ’ ಎಂದು ತವರಿಗೆ ಬಂದ ಗ್ರಾಮಸ್ಥರು ತಿಳಿಸುತ್ತಾರೆ.

‘ಕೌಟುಂಬಿಕ ಸಂಬಂಧದ ಮಹತ್ವವನ್ನು ಅರಿತಯುವಂತೆ ಈ ಸಾಲು ಸಾಲು ಹಬ್ಬಗಳು‌ ಮಾಡುತ್ತವೆ.ಎಷ್ಟೋ ಮಕ್ಕಳಿಗೆ ತಮ್ಮ ಸಂಬಂಧಗಳು ಮತ್ತು ಸಂಬಂಧಿಕರ ಬಗ್ಗೆ ಅರಿವಿಲ್ಲದಿರುವಾಗ ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡಿ ಅವುಗಳ ಅರಿವನ್ನು ಮೂಡಿಸುತ್ತವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT