ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ್ಣು ಕೃಷಿಯಲ್ಲಿ ಸಿಹಿ ಕಂಡ ಯುವ ರೈತ: ವಾರ್ಷಿಕ ₹15 ಲಕ್ಷದವರೆಗೂ ಆದಾಯ

ನೀರಿನ ಮಿತ ಬಳಕೆ, ಸಾವಯವ ಪದ್ಧತಿ ಅಳವಡಿಕೆ
Published : 26 ಆಗಸ್ಟ್ 2024, 7:27 IST
Last Updated : 26 ಆಗಸ್ಟ್ 2024, 7:27 IST
ಫಾಲೋ ಮಾಡಿ
Comments

ನಾಗಮಂಗಲ: ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದು, ತೋಟಗಾರಿಕಾ ಬೇಸಾಯದಲ್ಲಿ ವಾರ್ಷಿಕವಾಗಿ ₹10 ಲಕ್ಷದಿಂದ ₹15 ಲಕ್ಷದವರೆಗೆ ಸಂಪಾದನೆ ಮಾಡುವ ಮೂಲಕ ತಾಲ್ಲೂಕಿನ ಹರಳಕೆರೆ ಗ್ರಾಮದ ಯುವ ರೈತ ಎಚ್.ಎಸ್. ಚನ್ನೇಗೌಡ ಇತರರಿಗೆ ಮಾದರಿಯಾಗಿದ್ದಾರೆ. 

ಇವರು ಹಣ್ಣಿನ ಬೇಸಾಯಕ್ಕಾಗಿ ಪ್ರಾರಂಭದಲ್ಲಿ ₹6 ಲಕ್ಷ ವೆಚ್ಚ ಮಾಡಿದ್ದು, ನಂತರದ ವರ್ಷಗಳಲ್ಲಿ ನಿರ್ವಹಣೆಗಾಗಿ ಅಲ್ಪಸ್ವಲ್ಪ ಹಣ ಖರ್ಚು ಮಾಡುತ್ತಿದ್ದಾರೆ. ಹಣ್ಣಿನ ಬೇಸಾಯ ಲಾಭದಾಯಕ ಎಂದು ತೋರಿಸಿಕೊಟ್ಟಿದ್ದಾರೆ.

ತರಹೇವಾರಿ ಹಣ್ಣಿನ ಗಿಡ: ಎರಡು ಎಕರೆ ಜಮೀನಿನಲ್ಲಿ ಒಂದು ಕೊಳವೆಬಾವಿ ನೆರವಿನಿಂದ ಬಿಳಿಸೀಬೆ, ಕಪ್ಪು ಸೀಬೆ, ತೈವಾನ್ ಪಿಂಕ್ ಸೀಬೆಗಳ ಒಂದು ಸಾವಿರ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ 50 ಬಿಳಿ ನೇರಳೆ, ಕಪ್ಪು ನೇರಳೆ, ಜಂಬೂನೇರಳೆ ಗಿಡಗಳು, 50 ತೈವಾನ್ ನಿಂಬೆಯ ಗಿಡಗಳು, 40 ಮೂಸಂಬಿ ಗಿಡಗಳು, 20 ಲೀಚಿ ಗಿಡಗಳು, 20 ಬಿಳಿ ಮತ್ತು ಕೆಂಪು ವಾಟರ್ ಆ್ಯಪಲ್‌ ಗಿಡಗಳು, 80 ಬೆಣ್ಣೆ ಹಣ್ಣಿನ ಗಿಡಗಳನ್ನು, 30 ಎರಳೆಕಾಯಿ ಗಿಡಗಳು, 25 ಲಕ್ಷ್ಮಣಫಲ ಗಿಡಗಳು ಸೇರಿದಂತೆ ಚೆರ್ರಿ, ಊಟಿ ಆ್ಯಪಲ್‌, ಸ್ಟಾರ್ ಫ್ರೂಟ್‌, ಬೆಟ್ಟದ ನೆಲ್ಲಿ, ಮರಸೇಬು, ವಾಲ್‌ನೆಟ್‌, ಆಲ್ ಸ್ಪೈಸ್ ಗಿಡ, ಡ್ರ್ಯಾಗನ್ ಫ್ರೂಟ್, ಸೀತಾಫಲ, ರಾಮಫಲ, ಚಕ್ಕೆ, ಸ್ಟ್ರಾಬೆರಿ, ಜ್ಯೂಸ್ ಹಣ್ಣು, ದಾಳಿಂಬೆ ಸೇರಿದಂತೆ 25 ಹೆಚ್ಚು ಬಗೆಯ ಹಣ್ಣುಗಳ ಬೇಸಾಯವನ್ನು ಮಾಡಿ ಲಾಭಗಳಿಸುತ್ತಿದ್ದಾರೆ.

ಹನಿ ನೀರಾವರಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಿ ಕೊಂಡಿದ್ದಾರೆ. ತೋಟ ದಲ್ಲಿ ಕಳೆ ನಿಯಂತ್ರಿಸಲು ಮಲ್ಚಿಂಗ್ ಮಾದರಿಯ ಉಳುಮೆ ಮಾಡುತ್ತಾರೆ. ಗಿಡಗಳಿಗೆ ಉಂಟಾಗುವ ಕೀಟಬಾಧೆಯನ್ನು ತಪ್ಪಿಸಲು ಕ್ರಿಮಿನಾಶಕಗಳನ್ನು ಬಳಸದೇ ಬೇವಿನಎಣ್ಣೆ, ಉಳಿ ಮಜ್ಜಿಗೆ, ನಾಟಿ ಹಸುವಿನ ಗಂಜಲವನ್ನು ಸಿಂಪಡಣೆ ಮಾಡುತ್ತಾರೆ.

ಎರೆಹುಳು ಗೊಬ್ಬರ ತಯಾರಿಕೆ: ಎಚ್.ಎಸ್. ಚನ್ನೇಗೌಡ ಅವರು ಹಣ್ಣಿನ ಬೇಸಾಯಕ್ಕೆ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು, ಅದಕ್ಕಾಗಿ ಎರೆಹುಳುಗಳನ್ನು ಖರೀದಿಸಿ ಸ್ವತಃ ಜಮೀನಿನಲ್ಲಿ ಉತ್ಪತ್ತಿಯಾಗುವ ಹಸಿರು ಮತ್ತು ಒಣ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರು ಮಾಡುತ್ತಿದ್ದಾರೆ. 

ಅಲ್ಲದೇ ಎರೆಜಲ ತಯಾರಿಗಾಗಿ ಆಫ್ರಿಕನ್ ತಳಿ ಮತ್ತು ನಾಟಿ ತಳಿಯ ಎರೆಹುಳುಗಳನ್ನು ಬಳಸಿ ಜಮೀನಿನಲ್ಲಿ ಸಿಗುವ ಕಕ್ಕೆ, ತುಂಬೆ, ಅವರ್ಕೆ ಗಿಡ, ಬಾಳೆದಿಂಡು, ಒಣತ್ಯಾಜ್ಯಗಳಿಂದ ಎರೆ ಜಲ ದ್ರವರೂಪದ ಗೊಬ್ಬರ ತಯಾರಿಕೆ ಮಾಡಿ ಸಿಂಪಡಣೆ ಮಾಡುವ ಜೊತೆಗೆ ಹೆಚ್ಚಿನ ಪ್ರಮಾಣದ ಎರೆಜಲವನ್ನು ಸಂಗ್ರಹಿಸಿ ಇಡುತ್ತಾರೆ. ಅಲ್ಲದೇ ಹೈನು ಗಾರಿಕೆಯನ್ನೂ ಮಾಡಿದ್ದು ಎಮ್ಮೆ, ಹಸು, ಆಡು, ಕುರಿಗಳ ತ್ಯಾಜ್ಯವನ್ನು ಗೊಬ್ಬ ರವಾಗಿ ಮಾರ್ಪಾಡು ಮಾಡಿಕೊಳ್ಳು ತ್ತಾರೆ. ಜೊತೆಗೆ ಸ್ಥಳೀಯ ಪರಿಚಯದ ರೈತರಿಗೆ ಎರೆಜಲವನ್ನು ರೈತರಿಗೆ ಉಚಿತವಾಗಿ ನೀಡುತ್ತಾರೆ. 

‘ಹರಳಕೆರೆಯು ಯುವ ರೈತ ಎಚ್.ಎಸ್. ಚನ್ನೇಗೌಡ 25ಕ್ಕೂ ಹೆಚ್ಚು ಬಗೆಯ ಹಣ್ಣುಗಳ ಬೇಸಾಯವನ್ನು ಮಾಡುವ ಮೂಲಕ ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ವಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ನೀಡುವ ಮೂಲಕ ಇತರ ರೈತರಿಗೂ ಸಹ ಪ್ರೇರಣೆಯಾಗುವಂತೆ ಮಾಡಲು ಕ್ರಮವಹಿಸುತ್ತೇವೆ’ ಎಂದು ತೋಟ ಗಾರಿಕೆ ಇಲಾಖೆಯ ಸಹಾಯಕ ನಿರ್ದೇ ಶಕ ಟಿ.ಎಸ್.ರಮೇಶ್ ಹೇಳಿದರು.

ಸಾವಯವ ಹಣ್ಣುಗಳಿಗೆ ಬೇಡಿಕೆ

ಸಾವಯವ ರೀತಿ ಬೆಳೆದ ಹಣ್ಣುಗಳಿಗೆ ರೈತ ಚನ್ನೇಗೌಡ ಸ್ಥಳೀಯವಾಗಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಆನ್‌ಲೈನ್‌ ಮೂಲಕವೂ ವಹಿವಾಟು ನಡೆಸುತ್ತಾರೆ. ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

‘ತರಕಾರಿ ಬೆಳೆಯಲ್ಲಿ ನಷ್ಟ ಅನುಭವಿಸಿದ ನಂತರ ಹಣ್ಣಿನ ಬೇಸಾಯ ಮಾಡುವ ಚಿಂತನೆ ಬಂತು. ತರಬೇತಿ ಪಡೆಯದೇ ಯುಟ್ಯೂಬ್‌ನಲ್ಲಿ ಬೇಸಾಯದ ವಿಡಿಯೊಗಳನ್ನು ನೋಡಿ ಹಣ್ಣಿನ ಬೇಸಾಯ ಮಾಡಲು ಶುರು ಮಾಡಿದೆ. ಈಗ ದಿನಕ್ಕೆ ನೂರಾರು ಕೆ.ಜಿ. ಸೀಬೆ ಬೆಳೆಯುತ್ತಿದ್ದು ಫಸಲನ್ನು ಮಾರುಕಟ್ಟೆಗೆ ಒಯ್ಯುತ್ತೇವೆ. ಗರಿಷ್ಠ ಕೆ.ಜಿಗೆ ₹160ರವರೆಗೂ ಮಾರಾಟ ಮಾಡಿ ಲಾಭ ಗಳಿಸಿದ್ದೇನೆ’ ಎಂದು ಯುವ ಚನ್ನೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT