ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಕಡಿಯುವವರು ಕ್ಷಮೆಗೆ ಅನರ್ಹ

ವಿಶ್ವ ಪರಿಸರ ದಿನಾಚರಣೆ; ನ್ಯಾಯಾಧೀಶ ಎಚ್.ಎಸ್.ಮಂಜುನಾಥ್ ಹೇಳಿಕೆ
Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ‘ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಗೊತ್ತಿದ್ದೂ ಪರಿಸರ ಹಾಳು ಮಾಡುವವರು, ಮರ ಕಡಿಯುವವರು ಕ್ಷಮೆಗೆ ಅನರ್ಹರಾಗಿರುತ್ತಾರೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಎಸ್.ಮಂಜುನಾಥ್ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ವತಿಯಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ 'ವಾಯು ಮಾಲಿನ್ಯ ಹಿಮ್ಮೆಟ್ಟಿಸಿ, ಭೂತಾಯಿಗೆ ಹಸಿರು ಹೊದಿಸಿ' ಘೋಷಣೆಯೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪರಿಸರ ಉಳಿಸುವ ನಿಟ್ಟಿನಲ್ಲಿ ಒಂದು ದಿನ ಗಿಡ ನೆಟ್ಟು ಸುಮ್ಮನಾಗಬಾರದು. ಪ್ರತಿ ದಿನ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ಪರಿಸರ ಉಳಿಸುವ ಮೂಲಕ ನಾವು ಭೂಮಿಗೆ ಉಪಕಾರ ಮಾಡುತ್ತಿಲ್ಲ, ನಮ್ಮ ಉಳಿವಿಗಾಗಿ ಪರಿಸರ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ 1 ಲಕ್ಷ ಸಸಿ ನೆಡಲು ಉದ್ದೇಶಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ’ ಎಂದು ಹೇಳಿದರು.

‘ಆಧುನಿಕ ಯುಗದಲ್ಲಿ ಕಡಿಮೆ ಬೆಲೆಯ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಸರ್ವಾಂತರ್ಯಾಮಿಯಾಗಿದ್ದು, ವಿನಾಶದ ಹಾದಿ ಸಮೀಪ ಸಾಗುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ಪ್ರತಿಷ್ಠೆ ಎಂದು ತಿಳಿದುಕೊಳ್ಳದೆ, ಎಲ್ಲರೂ ಬಟ್ಟೆ ಚೀಲ ಬಳಸಿ ಪ್ಲಾಸ್ಟಿಕ್ ತ್ಯಜಿಸಬೇಕು. ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಜಲ ಮೂಲ ರಕ್ಷಣೆ, ವಾಯು ಮಾಲಿನ್ಯ ತಗ್ಗಿಸುವ ಮೂಲಕ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕು’ಎಂದರು.

ಹಿರಿಯ ಪರಿಸರ ಅಧಿಕಾರಿ ಎ.ಉದಯಕುಮಾರ್ ಮಾತನಾಡಿ ‘ವಿಶ್ವದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ವಿಶ್ವಸಂಸ್ಥೆಯು 2019ನೇ ಪರಿಸರ ದಿನಾಚರಣೆಯ ಘೋಷವಾಕ್ಯವನ್ನು ವಾಯು ಮಾಲಿನ್ಯ ಹಿಮ್ಮೆಟ್ಟಿಸಿ ಎಂಬ ಸಂದೇಶ ಪ್ರಕಟಿಸಿದೆ. ಪರಿಸರ ಸಂರಕ್ಷಣೆ ಕಾಯ್ದೆ 1974 ಹಾಗೂ 1986 ಪರಿಸರ ಸಂರಕ್ಷಣೆ ಕಾಯ್ದೆ ನಿಯಮಗಳನ್ನು ಅನುಸರಣೆ ಮಾಡಿದರೆ ದೇಶದಾದ್ಯಂತ ಉತ್ತಮ ಪರಿಸರ ಬೆಳೆಸಲು ಸಾಧ್ಯವಾಗುತ್ತದೆ. ಆದರೆ ಪರಿಸರ ಹಾಳು ಮಾಡುವ ಮನೋಭಾವ ಹೆಚ್ಚಾಗಿದ್ದು, ಮನಸ್ಥಿತಿ ಬದಲಾಗಬೇಕಿದೆ’ ಎಂದರು.

‘ಪರಿಸರ ಹಾಳು ಮಾಡಿದರೆ ಎಲ್ಲರಿಗೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಭವಿಷ್ಯದ ಮಕ್ಕಳು ಪರಿಸರ ಸಂರಕ್ಷಣೆ ಹಾಗೂ ಪರಿಸರ ಕಾಳಜಿ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು. ಸಸಿ ನೆಡುವ ಕಾರ್ಯಕ್ರಮ ಆಂದೋಲನ ರೀತಿಯಲ್ಲಿ ನಡೆಯಬೇಕು. ಪರಿಸರ ದಿನಾಚರಣೆ ನಿತ್ಯೋತ್ಸವವಾಗಬೇಕು’ ಎಂದು ಹೇಳಿದರು.

ಕಾವೇರಿ ಉದ್ಯಾನದಿಂದ ಕಲಾ ಮಂದಿರದವರೆಗೆ ಪರಿಸರ ಜಾಗೃತಿ ಜಾಥಾಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ.ಎಲ್.ಸವಿತಾ ಚಾಲನೆ ನೀಡಿದರು. ವಿವಿಧ ಶಾಲಾ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.

ವಿಜ್ಞಾನ ಮತ್ತು ಪರಿಸರ ಅಕಾಡೆಮಿ ಅಧ್ಯಕ್ಷ ಡಾ.ಎಂ.ಜಯರಾಮು, ಗೌರವ ಅಧ್ಯಕ್ಷ ಡಾ.ಬಿ.ಕೆ.ಸುರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಜಿ.ಆರ್.ಗೀತಾ, ಶಿಕ್ಷಣ ಅಧಿಕಾರಿ ಚಂದ್ರಶೇಖರ್, ಪರಿಸರ ಅಧಿಕಾರಿ ಕೆ.ಎಲ್.ಸವಿತಾ, ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT