ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ

Last Updated 3 ಡಿಸೆಂಬರ್ 2013, 6:48 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: 30 ಹಾಸಿಗೆಗಳಿದ್ದ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ 6 ವರ್ಷ ಕಳೆದಿದೆ. ಆದರೆ, ಅದಕ್ಕೆ ಪೂರಕವಾದ ಸೌಲಭ್ಯಗಳು ಇಲ್ಲಿಲ್ಲ.

ದಂತ ವೈದ್ಯರು ಸೇರಿ 11 ಮಂದಿ ವೈದ್ಯರ ಅಗತ್ಯವಿದೆ. ಚರ್ಮರೋಗ ತಜ್ಞರು ಹಾಗೂ ಮುಖ್ಯ ವೈದ್ಯಕೀಯ ಅಧಿಕಾರಿಯ ಹುದ್ದೆ ಖಾಲಿ ಇದೆ. ಒಂದೂವರೆ ತಿಂಗಳ ಹಿಂದೆ ಇಲ್ಲಿಗೆ ವರ್ಗಾವಣೆಗೊಂಡಿರುವ ಅರಿವಳಿಕೆ ತಜ್ಞರು ವರದಿ ಮಾಡಿಕೊಂಡು ಹೋದವರು ಮತ್ತೆ ಇತ್ತ ತಿರುಗಿ ನೋಡಿಲ್ಲ. ತಾಲ್ಲೂಕಿನ ಕೊಡಿಯಾಲ, ಮಹದೇವಪುರ, ಬೆಳಗೊಳ ಹಾಗೂ ಕೆಆರ್‌ಎಸ್‌ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದ್ದ ಎರಡು ವೈದ್ಯ ಹುದ್ದೆಗಳ ಪೈಕಿ ಒಂದು ಹುದ್ದೆಯನ್ನು ಕಡಿತ ಮಾಡಲಾಗಿದೆ.   

ಈ ನಾಲ್ಕೂ ಆಸ್ಪತ್ರೆಗಳಲ್ಲಿನ ಒಬ್ಬೊಬ್ಬರು ವೈದ್ಯರು ವರ್ಗಾವಣೆಗೊಂಡು ಹಲವು ವರ್ಷ ಕಳೆದರೂ ಖಾಲಿ ಹುದ್ದೆ ಇದೆ ಎಂದು ತೋರಿಸಿಲ್ಲ. ಒಬ್ಬರು ದೀರ್ಘ ರಜೆ ಮೇಲೆ ತೆರಳಿದರೆ ಸಮಸ್ಯೆ ಉಂಟಾಗುತ್ತದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 30 ‘ಡಿ’ಗ್ರೂಪ್‌ ಹುದ್ದೆಗಳು ಮಂಜೂ ರಾಗಿವೆ. ಆದರೆ ಇಲ್ಲಿರುವುದು 6 ಮಂದಿ ಮಾತ್ರ.  

ಇಕ್ಕಟ್ಟಿನ ಸ್ಥಳದಲ್ಲಿ ಚಿಕಿತ್ಸೆ: ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಹಳೆಯ ಕಟ್ಟಡದ ಮೇಲೆ ಮತ್ತೊಂದು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯತ್ತಿರುವುದರಿಂದ ಟ್ರಾಮಾ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊರ ರೋಗಿಗಳು ಮಾತ್ರವಲ್ಲದೆ ಒಳ ರೋಗಿಗಳಿಗೂ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚು ಮಂದಿ ದಾಖಲಾದರೆ ಸಮಸ್ಯೆ ಬಿಗಡಾಯಿಸುತ್ತದೆ. ವೈದ್ಯರು ಕೂಡ ಸರಿಯಾಗಿ ಕುಳಿತು ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ವೈದ್ಯರ ನಿವಾಸಗಳನ್ನೇ ಆಸ್ಪತ್ರೆ ಮಾಡಿಕೊಂಡಿದ್ದೇವೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟಸ್ವಾಮಿಗೌಡ ಸಮಸ್ಯೆ ತೋಡಿಕೊಳ್ಳುತ್ತಾರೆ.

ಔಷಧಿ ಕೊರತೆ: ತಾಲ್ಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಮಧುಮೇಹ ರೋಗಿಗಳಿಗೆ ಅಗತ್ಯವಾದ ಮೆಟ್‌ಫಾರ್ಮಿನ್‌ ಹಾಗೂ ಜಿಬಿಎನ್‌ ಮಾತ್ರೆಗಳ ಸರಬರಾಜು ಸ್ಥಗಿತಗೊಂಡಿದೆ. ಯೂಸರ್‌ ಫಂಡ್‌ ಹಣದಿಂದ ಖಾಸಗಿ ಅಂಗಡಿಗಳಲ್ಲಿ ಈ ಮಾತ್ರೆಗಳನ್ನು ತರಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಸೊಳ್ಳೆಗಳ ಹಾವಳಿ ಮಿತಿ ಮೀರಿದ್ದು ನಿಯಂತ್ರಿಸಬೇಕು. ಸ್ನಾನದ ಮನೆ ಮತ್ತು ಶೌಚಾಲಯಗಳ ಸ್ವಚ್ಛತೆ ಕಡೆ ಗಮನ ಕೊಡುತ್ತಿಲ್ಲ ಎಂಬುದು ರೋಗಿಗಳ ದೂರು.

ಕಾಮಗಾರಿಗೆ ಹಣವೇ ಇಲ್ಲ: ಉನ್ನತೀಕರಿಸಿದ, ರೂ.3 ಕೋಟಿ ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭವಾಗಿ ಎರಡೂವರೆ ವರ್ಷ ಕಳೆದಿದೆ. ಡಿಸೆಂಬರ್‌ ವೇಳೆಗೆ ಕೆಲಸ ಮುಗಿಸುವುದಾಗಿ ಕಾಮಗಾರಿಯ ಹೊಣೆ ಹೊತ್ತಿರುವ ಕೆಎಚ್‌ಎಸ್‌ಡಿಆರ್‌ಪಿ ಸಂಸ್ಥೆ ಭರವಸೆ ನೀಡಿತ್ತು. ಆದರೆ ಇನ್ನೂ ಶೇ.25ರಷ್ಟು ಕಾಮಗಾರಿ ಬಾಕಿ ಇದೆ. ಮಂಜೂರಾದ ಅನುದಾನದಲ್ಲಿ ಇದುವರೆಗೆ ₨1.5 ಕೋಟಿ ಮಾತ್ರ ಬಿಡುಗಡೆಯಾಗಿದೆ. ಸರ್ಕಾರದಿಂದ ಇನ್ನೂ ಒಂದೂವರೆ ಕೋಟಿ ಹಣ ಬರಬೇಕು. ಆದ್ದರಿಂದ ಗುತ್ತಿಗೆ ಕಂಪೆನಿ ಸ್ಟಾರ್‌ ಬಿಲ್ಡರ್ಸ ಕೆಲಸ ಮುಗಿಸಲು ಹಿಂದೇಟು ಹಾಕುತ್ತಿದೆ ಎಂದು ಕೆಎಚ್‌ಎಸ್‌ಡಿಆರ್‌ಪಿ ಸಂಸ್ಥೆಯ ಎಂಜಿನಿಯರ್‌ ಪ್ರಭಾಕರ್‌ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT