ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗುವುದೇ ಮುಳುಗಡೆ ಸಂತ್ರಸ್ತರ ಬಾಕಿ ಭೂಮಿ!

ಜಟಿಲ ಸಮಸ್ಯೆ ಬಿಡಿಸಲು ಜಿಲ್ಲಾಡಳಿತ ಪ್ರಯತ್ನ, ಮತ್ತೊಂದು ಸುತ್ತಿನ ಸಭೆ
Last Updated 3 ಡಿಸೆಂಬರ್ 2018, 15:30 IST
ಅಕ್ಷರ ಗಾತ್ರ

ಶಿವಮೊಗ್ಗ:ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯಲ್ಲಿ 1,870 ಎಕರೆ ಡಿನೋಟಿಫಿಕೇಷನ್‌ಗೆ ಬಾಕಿ ಇದೆ. ಸಮಸ್ಯೆ ಅರ್ಥಮಾಡಿಕೊಂಡು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಶರಾವತಿ ಮುಳುಗಡೆ ಸಂತ್ರಸ್ತರ ಪುನರ್‌ವಸತಿ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಹಿಂದೆ ಸಂತ್ರಸ್ತರಿಗಾಗಿ 9,812 ಎಕರೆ ಭೂಮಿ ಮೀಸಲಿಟ್ಟಿತ್ತು. ಮೊದಲನೇ ಹಂತದಲ್ಲಿ 2,890 ಎಕರೆ, ಎರಡನೇ ಹಂತದಲ್ಲಿ 1,801 ಎಕರೆ, ಮೂರನೇ ಹಂತದಲ್ಲಿ 1,767 ಎಕರೆ ಸೇರಿ ಇದುವರೆಗೂ 6,459 ಎಕರೆ ಭೂಮಿ ವಿತರಿಸಲಾಗಿದೆ. ಆರ್‌ಟಿಸಿ ಬಂದಿದೆ. ಸಾಗುವಳಿ ಹಕ್ಕು ದೊರೆತಿದೆ. 2,893 ಎಕರೆ ಮೀಸಲು ಭೂಮಿಗೂ, ರೈತರು ಉಳುಮೆ ಮಾಡುವ ಜಮೀನುಗಳಿಗೆ ತಾಳೆಯಾಗುತ್ತಿಲ್ಲ. ಈ ಸಮಸ್ಯೆ ತುರ್ತಾಗಿ ಬಗೆಹರಿಸಬೇಕಿದೆ ಎಂದರು.

ಮಲೆನಾಡಿನ ಅರಣ್ಯ ಸಮಸ್ಯೆ ಇತರೆ ಜಿಲ್ಲೆಗಳ ಸಮಸ್ಯೆಗಳಿಗಿಂತ ಭಿನ್ನವಾಗಿದೆ. ಜಲ ವಿದ್ಯುತ್ ಯೋಜನೆಗಳಿಗಾಗಿ ನಿರ್ಮಾಣವಾದ ಹಲವು ಜಲಾಶಯಗಳ ಪರಿಣಾಮ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡಿವೆ. ರಾಜ್ಯಕ್ಕೇ ಬೆಳಕು ನೀಡಲು ತಮ್ಮ ಮನೆಮಠ ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ ಐದೂವರೆ ದಶಕಗಳು ಕಳೆದರೂ ನೆಲೆ ಕಲ್ಪಿಸಲು ಸಾಧ್ಯವಾಗಿಲ್ಲ ಎನ್ನುವುದೇ ಸೋಜಿಗದ ಸಂಗತಿ. ಎರಡು ವರ್ಷಗಳ ಹಿಂದೆ ಅರ್ಧದಷ್ಟು ಸಮಸ್ಯೆ ಬಗೆಹರಿಸಲಾಗಿದೆ. ಉಳಿದ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿಳಂಬ ಮಾಡಿದಷ್ಟೂ ಸಮಸ್ಯೆ ಜಟಿಲ:ಐದೂವರೆ ದಶಕದಲ್ಲಿ ಸಾಕಷ್ಟು ಸಂತ್ರಸ್ತರು ಮೃತಪಟ್ಟಿದ್ದಾರೆ. ಅವರ ಮಕ್ಕಳು, ಮೊಮ್ಮಕ್ಕಳು ಉತ್ತರಾಧಿಕಾರಿಗಳಾಗಿದ್ದಾರೆ. ಕುಟುಂಬಗಳು ಬೆಳದಂತೆ ಭೂಮಿಯ ಆವಶ್ಯಕತೆಯೂ ಬೆಳೆದಿದೆ. ಮೀಸಲಿಟ್ಟ ಭೂಮಿ ಅಂದೇ ಹಂಚಿಕೆ ಮಾಡದ ಪರಿಣಾಮ ತಮ್ಮ ಭೂಮಿ ಯಾವುದು ಎಂದು ತಿಳಿಯದ ಎರಡು, ಮೂರನೇ ತಲೆಮಾರು ಸಿಕ್ಕ ಜಾಗ ಉಳುಮೆ ಮಾಡಿಕೊಂಡು ಬದುಕು ನಡೆಸುತ್ತಿದೆ ಎಂದು ವಿವರಿಸಿದರು.

ಒಬ್ಬ ಸಂತ್ರಸ್ತನಿಗೆ ಸರ್ಕಾರ ಮೂರು ಎಕರೆ ನೀಡಿದರೆ, ಅವರ ಮಕ್ಕಳಲ್ಲಿ ಅದು ಯಾರಿಗೆ ಸೇರಬೇಕು ಎಂಬ ವ್ಯಾಜ್ಯ ಹಟ್ಟಿಕೊಂಡಿವೆ. ಹಾಗಾಗಿ, ಮೂಲ ಸಂತ್ರಸ್ತರನ್ನು ಗುರುತಿಸಬೇಕು. ಅವರ ವಂಶವೃಕ್ಷ ಹುಡುಕಿ, ನ್ಯಾಯಯುತವಾಗಿ ಸಿಗಬೇಕಾದವರಿಗೆ ಜಮೀನಿನ ಹಕ್ಕು ನೀಡಬೇಕು. ತಡಮಾಡಿದಷ್ಟೂ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ ಎಂದು ವಾಸ್ತವ ಬಿಚ್ಚಿಟ್ಟರು.

ಉದಾಸೀನ ಮಾಡಿದರೆ ವಜಾಕ್ಕೆ ಶಿಫಾರಸು:ಪುನರ್‌ವಸತಿ ಕಾರ್ಯದಲ್ಲಿ ತಹಶೀಲ್ದಾರ್, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗ ಸೇರಿದಂತೆ ಯಾರೇ ಉದಾಸೀನ ಮಾಡಿದರೂ ಅವರನ್ನು ಅಮಾನತು ಮಾಡುವ ಜತೆಗೆ, ಕೆಲಸದಿಂದ ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ:ಯಾವುದೇ ವಿಷಯ ಜನರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಬೇಕು. ಒಂದು ಕೆಲಸ ಏಕೆ ಆಗುವುದಿಲ್ಲ ಎಂದು ಹೇಳುವಾಗ, ಆ ಕೆಲಸ ಆಗಲು ಏನು ಮಾಡಬೇಕು ಎನ್ನುವ ಕುರಿತು ತಿಳಿವಳಿಕೆ ಮೂಡಿಸಬೇಕು. ಜನರು ಈಚೆಗೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಅದಕ್ಕೆ ಅವರ ನಡವಳಿಕೆ ಕಾರಣ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇರುವ ಅಡೆತಡೆ ಮನವರಿಕೆ ಮಾಡಿಕೊಟ್ಟರೆ ಜನರಲ್ಲೂ ವಿಶ್ವಾಸ ಮೂಡಿಸಬಹುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಅನುರಾಧ, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT