ಸೋಮವಾರ, ನವೆಂಬರ್ 30, 2020
21 °C
ಪರಿಶಿಷ್ಟ ಜಾತಿಯವರಿಗೆ ಕ್ಷೌರ ಮಾಡಿದ್ದಕ್ಕೆ ಶಿಕ್ಷೆ: ಆರೋಪ

ಸವಿತಾ ಸಮಾಜದ ಕುಟುಂಬಕ್ಕೆ ಬಹಿಷ್ಕಾರ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಪರಿಶಿಷ್ಟ ಜಾತಿಯವರ ಕ್ಷೌರ ಮಾಡಿದ್ದಕ್ಕಾಗಿ, ಸವಿತಾ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಪ್ರಕರಣ ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ನಿವಾಸಿ, ಸವಿತಾ ಸಮುದಾಯದ ಮಲ್ಲಿಕಾರ್ಜುನ ಶೆಟ್ಟಿ ಅವರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

‘ಗ್ರಾಮದಲ್ಲಿ ವಿವಿಧ ಸಮುದಾಯಗಳ ಜನ ವಾಸವಿದ್ದಾರೆ. ಅದರಲ್ಲಿ ನಾಯಕ ಸಮುದಾಯದ ಕೆಲವರು ಪರಿಶಿಷ್ಟ ಜಾತಿಯವರಿಗೆ ಕ್ಷೌರ ಮತ್ತು ಶೇವಿಂಗ್ ಮಾಡದಂತೆ ಕೆಲ ದಿನಗಳಿಂದ ಒತ್ತಡ ಹೇರುತ್ತಿದ್ದರು. ಹೀಗಾಗಿ, ಪೊಲೀಸರ ಬಳಿ ಹೋದೆ. ಅವರು ಹೇಳಿದಂತೆ, ಪರಿಶಿಷ್ಟರೂ ಸೇರಿದಂತೆ ಗ್ರಾಮದ ಎಲ್ಲಾ ಸಮುದಾಯದವರಿಗೂ ಕ್ಷೌರ ಮಾಡುವ ಕಾಯಕ ಮುಂದುವರಿಸಿದೆ. ಹೀಗಾಗಿ, ನಾಯಕ ಸಮುದಾಯದ ಕೆಲವರು ಸಭೆ ಸೇರಿ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಲ್ಲದೇ ದಂಡವನ್ನೂ ವಿಧಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ನಮ್ಮ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಈ ದೂರು ಸ್ವೀಕರಿಸಿ ಗ್ರಾಮಸ್ಥರೊಡನೆ ಮಾತುಕತೆ ನಡೆಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ದೂರು ದಾಖಲಾಗಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಈ ಪ್ರಕರಣ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಸಹಬಾಳ್ವೆಯಿಂದ ಬದುಕುವಂತೆ ಸಲಹೆ ನೀಡಿದ್ದೇವೆ’ ಎಂದು ನಂಜನಗೂಡು ಸಿಪಿಐ ಲಕ್ಷ್ಮಿಕಾಂತ್‌ ತಲವಾರ್‌ ಹೇಳಿದರು.

ತಹಶೀಲ್ದಾರ್‌ ಮಹೇಶ್‌ ಕುಮಾರ್‌ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.