ಬುಧವಾರ, ಆಗಸ್ಟ್ 10, 2022
23 °C
ಏಪ್ರಿಲ್‌ನಲ್ಲೂ 372 ಕೋವಿಡ್‌ ರೋಗಿಗಳ ಅಂತ್ಯ ಸಂಸ್ಕಾರ

ಮೈಸೂರು: ಸೋಂಕಿತರ ಮರಣದಲ್ಲಿ ದಾಖಲೆ; ಮೇನಲ್ಲೇ 1,003 ಕೋವಿಡ್‌ ಸಾವು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆ ಉಲ್ಬಣಿಸಿದ್ದ ಮೇ ತಿಂಗಳಲ್ಲಿ; ಮೈಸೂರು ನಗರದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಒಂದು ಸಾವಿರಕ್ಕೂ ಹೆಚ್ಚು ಕೋವಿಡ್‌ ಸೋಂಕಿತರ ಅಂತ್ಯಸಂಸ್ಕಾರ ನಡೆದಿದೆ ಎಂಬುದು ಗೊತ್ತಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಜನನ–ಮರಣ ವಿಭಾಗದ ದಾಖಲಾತಿಯ ಪ್ರಕಾರ ಮೇ ತಿಂಗಳಲ್ಲಿ ಕೋವಿಡ್‌ನಿಂದ ಮೃತಪಟ್ಟ 1003 ಜನರ ಅಂತ್ಯಕ್ರಿಯೆ ನಡೆದಿದ್ದರೆ; ಏಪ್ರಿಲ್‌ ತಿಂಗಳಿನಲ್ಲಿ 372 ಸೋಂಕಿತರ ಶವ ಸಂಸ್ಕಾರ ನಡೆದಿದೆ. ಜೂನ್‌ 6ರವರೆಗೂ 129 ಮಂದಿಯ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೇ ಪಾಲಿಕೆ ಆಡಳಿತ ಒಂಬತ್ತು (ಹಿಂದೂಗಳಿಗೆ ಮೂರು, ಮುಸ್ಲಿಮರಿಗೆ ಎರಡು, ಕ್ರಿಶ್ಚಿಯನ್ನರಿಗೆ ನಾಲ್ಕು) ಸ್ಮಶಾನಗಳನ್ನು ಮೀಸಲಿಟ್ಟಿದೆ. ಇಲ್ಲಿ ನಡೆದಿರುವ ಅಂತ್ಯ ಸಂಸ್ಕಾರಗಳ ಲೆಕ್ಕವೇ ಮೇ ತಿಂಗಳಲ್ಲಿ ಸಾವಿರ ದಾಟಿದೆ.

ಕೋವಿಡ್‌ನಿಂದ ಮೃತಪಟ್ಟರೂ ಪಾಲಿಕೆ ವ್ಯಾಪ್ತಿಯ ಯಾವೊಂದು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸದೆ, ತಮ್ಮ ಜಮೀನು, ಊರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದವರ ಲೆಕ್ಕ ಇದರಲ್ಲಿ ಸೇರ್ಪಡೆಯಾಗಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಪಾಲಿಕೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದ ಜಿಲ್ಲೆಯ ಗ್ರಾಮೀಣ ಪ್ರದೇಶದವರು ಹಾಗೂ ಹೊರ ಜಿಲ್ಲೆಯ ಕೆಲವು ಕೋವಿಡ್‌ ಪೀಡಿತರು ಮೃತಪಟ್ಟ ಬಳಿಕ ಪಾಲಿಕೆಯ ಸ್ಮಶಾನಗಳಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಈ ಸಂಖ್ಯೆ ತುಂಬಾ ಕಡಿಮೆಯಿದೆ ಎಂದು ಅವರು ಹೇಳಿದರು.

‘ಮೇ ತಿಂಗಳಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಸಾಕಷ್ಟು ಸಾವಾಗಿವೆ. ನಿತ್ಯ ನೂರಾರು ಅಂತ್ಯ ಸಂಸ್ಕಾರ ನಡೆಸಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಬಾರದು ಹಾಗೂ ನನ್ನ ಯಾವೊಂದು ಮಾತುಗಳನ್ನು ರೆಕಾರ್ಡ್‌ ಮಾಡಿಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ರಚಿಸಿದ್ದ ಟಾಸ್ಕ್‌ಫೋರ್ಸ್‌ನ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದರು.

‘ಜೂನ್‌ 1ರಿಂದ 17ರವೆರಗೂ 260 ಜನರ ಅಂತ್ಯಸಂಸ್ಕಾರ ನಡೆಸಿದ್ದೇವೆ. ಇವರೆಲ್ಲರೂ ಕೋವಿಡ್‌ನಿಂದ ಚೇತರಿಸಿಕೊಳ್ಳದೆ ಮೃತಪಟ್ಟವರು. ಮೇ ತಿಂಗಳಲ್ಲಿ ಕೋವಿಡ್‌ನಿಂದ ಹೆಚ್ಚಿನ ಸಂಖ್ಯೆಯ ಜನರು ನಿಧನರಾಗಿದ್ದಾರೆ’ ಎಂದು ಮೈಸೂರು ಮಹಾನಗರ ಪಾಲಿಕೆಯೊಟ್ಟಿಗೆ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ಕೈಂಕರ್ಯ ನಡೆಸುತ್ತಿರುವ ಸ್ವಯಂ ಸೇವಕ ಅಯೂಬ್‌ ಅಹಮದ್‌ ತಿಳಿಸಿದರು.

ಸೋಂಕಿಗೆ ಮೃತಪಟ್ಟ 389 ಜನರು
‘ಏಪ್ರಿಲ್‌ 1ರಿಂದ ಜೂನ್‌ 16ರವರೆಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ನಿಂದ 389 ಜನರು ಮೃತಪಟ್ಟಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿಯ ಮೂಲಗಳಿಂದ ಖಚಿತ ಪಟ್ಟಿದೆ.

‘ಪ್ರಸ್ತುತ ಸಾವಿನ ಪ್ರಮಾಣ ತಗ್ಗಿದೆ. ಮೇ ತಿಂಗಳಲ್ಲಿ ಮೃತಪಟ್ಟಿದ್ದ ಕೆಲವೊಬ್ಬರ ವಿವರವನ್ನು ಕೆಲ ತಾಂತ್ರಿಕ ಕಾರಣಗಳಿಂದ ಇದೀಗ ಸೇರಿಸಲಾಗುತ್ತಿದೆಯಷ್ಟೇ. ಎರಡ್ಮೂರು ದಿನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೃತರ ಸಂಖ್ಯೆ ಒಂದಂಕಿಗೆ ಇಳಿಯಲಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್‌ ತಿಳಿಸಿದರು.

‘ಮೈಸೂರು ಜಿಲ್ಲೆಯಲ್ಲಿ 1 ಪಾಲಿಕೆ, 2 ನಗರಸಭೆ, 4 ಪುರಸಭೆ, 2 ಪಟ್ಟಣ ಪಂಚಾಯಿತಿಗಳಿವೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಾತ್ರ ಕೋವಿಡ್‌ನಿಂದ ಮೃತಪಟ್ಟವರ ದಾಖಲಾತಿ ನಿರ್ವಹಣೆ ಮಾಡಲಾಗಿದೆ. ಉಳಿದ ಯಾವೊಂದು ನಗರಸಭೆ, ಪುರಸಭೆಯಲ್ಲಿ ಇದನ್ನು ಪಾಲಿಸಿಲ್ಲ. ಆಯಾ ತಾಲ್ಲೂಕು ಆಡಳಿತ ಪ್ರಕಟಿಸುವ ಪಟ್ಟಿಯಲ್ಲೇ ತಮ್ಮ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಹೆಸರನ್ನು ಸೇರಿಸಲಾಗಿದೆ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಷರೀಫ್ ಹೇಳಿದರು.

ಜಿಲ್ಲಾಡಳಿತದ ಘೋಷಣೆ 1979 ಸಾವು
‘ಜಿಲ್ಲೆಯಲ್ಲಿ ಕೋವಿಡ್‌ನಿಂದ 2020ರ ಮಾರ್ಚ್‌ನಿಂದ ಇದೇ ಜೂನ್‌ 18ರವರೆಗೂ ಒಟ್ಟು 1979 ಜನರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

2021ರ ಏಪ್ರಿಲ್‌ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 151 ಜನರು ಕೋವಿಡ್‌ಗೆ ಬಲಿಯಾಗಿದ್ದರೆ; ಮೇ ತಿಂಗಳಲ್ಲಿ 420 ಜನರು ಮೃತಪಟ್ಟಿದ್ದಾರೆ ಎಂದಿದೆ.

ಆದರೆ ಪಾಲಿಕೆಯ ವ್ಯಾಪ್ತಿಯಲ್ಲೇ ಏಪ್ರಿಲ್‌ನಲ್ಲಿ 372, ಮೇ ತಿಂಗಳಲ್ಲಿ 1003 ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಏ.1ರಿಂದ ಜೂನ್‌ 16ರವರೆಗೂ 389 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿಯ ಮೂಲಗಳು ತಿಳಿಸಿವೆ.

‘ಮೈಸೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ; ಮರಣ ಪ್ರಮಾಣ ಕಡಿಮೆಯಿದೆ ಎಂಬುದನ್ನೇ ತಮ್ಮ ಸಾಧನೆ ಎಂಬುದಾಗಿ ಬಿಂಬಿಸಿಕೊಳ್ಳಲಿಕ್ಕಾಗಿಯೇ ಈ ಹಿಂದಿನ ಜಿಲ್ಲಾಧಿಕಾರಿ ಸುಳ್ಳು ಲೆಕ್ಕ ನೀಡಿದ್ದರು. ಇದೀಗ ಅದನ್ನು ಸರಿಪಡಿಸುವ ಕೆಲಸ ನಡೆದಿದೆ’ ಎಂದು ರಾಜ್ಯ ಸರ್ಕಾರದ ಭಾಗವಾಗಿರುವ, ಜಿಲ್ಲಾ ಉಸ್ತುವಾರಿ ಸಚಿವರು ರಚಿಸಿದ್ದ ಟಾಸ್ಕ್‌ಫೋರ್ಸ್‌ವೊಂದರ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು