ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪೀಡಿತರಿಂದ ಮಾಹಿತಿ ಸಂಗ್ರಹಣೆ: ಸೋಂಕಿತ ಸಂಪರ್ಕಿತರ ಪತ್ತೆಗಾಗಿಯೇ 5 ತಂಡ

ದಿನಚರಿ ಮಾಹಿತಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ರವಾನೆ
Last Updated 10 ಜುಲೈ 2020, 8:52 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಕೋವಿಡ್–19 ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಲಿಕ್ಕಾಗಿಯೇ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ಹಿರಿಯ ಕೆಎಎಸ್ ಅಧಿಕಾರಿ ಲೋಕನಾಥ್ ನೇತೃತ್ವದಲ್ಲಿ ಐವರು ಅಧಿಕಾರಿಗಳ ಐದು ತಂಡಗಳು ಕಾರ್ಯ ನಿರ್ವಹಿಸುತ್ತಿವೆ.

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಕೌಶಲಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ, ಸಹಾಯಕ ನಿರ್ದೇಶಕಿ ಗೀತಾ, ಮುಡಾ ತಹಶೀಲ್ದಾರ್ ನಿಶ್ಚಯ್ ಹಾಗೂ ಭೂಗರ್ಭಶಾಸ್ತ್ರ ಇಲಾಖೆಯ ಅಧಿಕಾರಿ ಜೀವನ್ ನೇತೃತ್ವದ ತಂಡಗಳು ಏ.15ರಿಂದಲೂ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದ ಶಿಕ್ಷಕರ ಭವನದಲ್ಲಿ ಕೆಲಸದಲ್ಲಿ ತಲ್ಲೀನವಾಗಿವೆ.

ಕಾರ್ಯವೈಖರಿ: ನಿತ್ಯವೂ ಕೋವಿಡ್ ಪೀಡಿತರಾದವರ ಪಟ್ಟಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಈ ತಂಡಕ್ಕೆ ಕಳುಹಿಸಿಕೊಡಲಿದ್ದಾರೆ.

ಐದು ತಂಡಗಳು ಪೀಡಿತರ ಪಟ್ಟಿಯನ್ನು ಹಂಚಿಕೊಂಡು ಬೆಳಿಗ್ಗೆ 10 ಗಂಟೆಗೆ ಕೆಲಸ ಆರಂಭಿಸಲಿವೆ. ಪ್ರತಿ ತಂಡದಲ್ಲಿನ ತಲಾ ನಾಲ್ವರು ಕೌನ್ಸಲರ್‌ಗಳು ಪ್ರತಿಯೊಬ್ಬ ಪೀಡಿತನಿಗೂ ಮೊಬೈಲ್ ಕರೆ ಮಾಡಿ, ಅವರ 16 ದಿನದ ದಿನಚರಿ ಸಂಗ್ರಹಿಸಲಿ ದ್ದಾರೆ. ಇದನ್ನು ಡಾಟಾ ಎಂಟ್ರಿ ಆಪರೇಟರ್‌ಗಳು ಕಂಪ್ಯೂಟರ್‌ನಲ್ಲಿ ದಾಖಲಿಸುತ್ತಾರೆ ಎಂದು ತಂಡ ವೊಂದರ ಮುಖ್ಯಸ್ಥೆಯಾಗಿರುವ ನಿರ್ಮಲಾ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸ. ಕೆಲವರು ಸತ್ಯ ಮರೆಮಾಚಲು ಯತ್ನಿಸುತ್ತಾರೆ. ಹಲವರಿಗೆ ಪಾಸಿಟಿವ್ ಬಂದಿದ್ದರಿಂದ ಗಾಬರಿಗೊಂಡು ಎಲ್ಲವನ್ನೂ ಮರೆತಿರುತ್ತಾರೆ. ಪತ್ತೆಗಾಗಿ ಪೊಲೀಸರ ಸಹಕಾರ ಪಡೆಯುವುದೂ ಉಂಟು’ ಎಂದು ಹೇಳಿದರು.

‘ಪ್ರತಿ ದಿನವೂ ಪೀಡಿತರಾದವರ ಸಂಪರ್ಕಿತರ ಪಟ್ಟಿ ತಯಾರಿಸಿ ಅದನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಕಳುಹಿಸಿಕೊಟ್ಟಾಗಲೇ ಕೆಲಸ ಪೂರ್ಣವಾಗಲಿದೆ. ಇದು ನಿತ್ಯವೂ ಎಷ್ಟೊತ್ತಿಗೆ ಮುಗಿಯಲಿದೆ ಎಂಬುದೇ ಗೊತ್ತಿರಲ್ಲ’ ಎಂದರು.

‘ಮನೆಯ ತಳಪಾಯವಿದ್ದಂತೆ’

‘ನಮ್ಮ ತಂಡ ತಯಾರಿಸುವ ಪಟ್ಟಿ ಮನೆಗೆ ತಳಪಾಯವಿದ್ದಂತೆ. ಕೊರೊನಾ ವೈರಸ್‌ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂಥದ್ದು’ ಎನ್ನುತ್ತಾರೆ ನಿರ್ಮಲಾ ಮಠಪತಿ.

‘ನಾವು ಕೊಡುವ ಪಟ್ಟಿಯಂತೆ ಸಂಪರ್ಕಿತರನ್ನು ಪತ್ತೆ ಹಚ್ಚುತ್ತಾರೆ. ಸಾಂಸ್ಥಿಕ ಹಾಗೂ ಮನೆ ಕ್ವಾರಂಟೈನ್‌ಗೆ ಒಳಪಡಿಸುತ್ತಾರೆ. ಅಗತ್ಯ ಇರುವವರ ಗಂಟಲು ದ್ರವದ ಮಾದರಿ ತೆಗೆಯುತ್ತಾರೆ. ಪೀಡಿತರು ಪತ್ತೆಯಾದರೆ ಕೋವಿಡ್–19 ಆಸ್ಪತ್ರೆಗೆ ದಾಖಲಿಸುತ್ತಾರೆ’ ಎಂದು ಹೇಳಿದರು.

‘ಕಂಟೈನ್‌ಮೆಂಟ್ ಜೋನ್‌ ಘೋಷಿಸುವುದು, ಸೀಲ್‌ಡೌನ್‌ ಮಾಡುವುದು ಇದೇ ಪಟ್ಟಿ ಆಧಾರದಲ್ಲಿ. ಪ್ರತಿಯೊಬ್ಬ ಸೋಂಕಿತನ 16 ದಿನದ ದಿನಚರಿ, ಸಂಪರ್ಕಿತರ ಮಾಹಿತಿ ಈ ಪಟ್ಟಿಯಲ್ಲಿರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT