ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹಸಿರು ಪ್ರೀತಿಯ ಜೊತೆಗೆ ವಿವೇಕದ ಪಾಠ

ರಾಮಕೃಷ್ಣ ಆಶ್ರಮದ ‘ಹಚ್ಚಹಸಿರ ಮೈಸೂರು’ ಅಭಿಯಾನಕ್ಕೆ ಉತ್ತಮ ಸ್ಪಂದನೆ
Last Updated 5 ಜೂನ್ 2021, 5:15 IST
ಅಕ್ಷರ ಗಾತ್ರ

ಮೈಸೂರು: ಗಿಡ– ಮರಗಳಿಂದ ನಮಗೆ ಆಮ್ಲಜನಕ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವುಗಳನ್ನು ಬೆಳೆಸಲು ಬಹುತೇಕರು ಕಾಳಜಿ ತೋರುತ್ತಿಲ್ಲ. ಹಸಿರಿನ ಮಹತ್ವ ಕೋವಿಡ್‌ನ ಈ ಕಠಿಣ ಸಂದರ್ಭದಲ್ಲಿ ಎಲ್ಲರಿಗೂ ತಿಳಿಯುತ್ತಿದೆ.

ನಗರದ ರಾಮಕೃಷ್ಣ ಆಶ್ರಮವು ‘ಮೈಸೂರು ಹಸಿರಾಗಲಿ, ವಿವೇಕ ನಮ್ಮ ಉಸಿರಾಗಲಿ’ ಎಂಬ ಧ್ಯೇಯ ಹಾಗೂ ‘ಹಚ್ಚಹಸಿರ ಮೈಸೂರು ವಿವೇಕಪ್ರಭೆಯ ಮೈಸೂರು’ ಎಂಬ ಯೋಜನೆಯೊಂದಿಗೆ ನಾಗರಿಕರಿಗೆ ಉಚಿತವಾಗಿ ಸಸಿಗಳನ್ನು ನೀಡುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಆಶ್ರಮ, ರಾಮಕೃಷ್ಣ ವಿದ್ಯಾಶಾಲೆ, ವಿವೇಕ ಸ್ಮಾರಕ, ರಾಮಕೃಷ್ಣ ವಿದ್ಯಾ ಕೇಂದ್ರಗಳಲ್ಲಿ ನಾಗರಿಕರಿಗೆ 48 ಸಾವಿರಕ್ಕೂ ಹೆಚ್ಚು ಸಸಿ ವಿತರಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಆಶ್ರಮದ ಹಿಂದಿನ ಅಧ್ಯಕ್ಷರಾದ ಸ್ವಾಮಿ ಸುರೇಶಾನಂದಜೀಯವರೇ ಪ್ರೇರಣೆ. ಸಸ್ಯಪ್ರೇಮಿಯಾಗಿದ್ದ ಅವರು ಬರಡು ಭೂಮಿಯಾಗಿದ್ದ ರಾಮಕೃಷ್ಣ ವಿದ್ಯಾಶಾಲೆಯ ಪರಿಸರ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದರು. ಅವರ ಸ್ಮರಣಾರ್ಥವೇ ಈ ಅಭಿಯಾನ ನಡೆದಿದೆ.

ಒಂದು ಕುಟುಂಬಕ್ಕೆ ಗರಿಷ್ಠ 5 ಸಸಿಗಳನ್ನು ಕೊಡುವ ಜೊತೆಗೆ ‘ವಿವೇಕಪ್ರಭ’ ಮಾಸ ಪತ್ರಿಕೆ ಮತ್ತು ದಿವ್ಯತ್ರಯರ ಸಂದೇಶದ ‘ಸ್ಫೂರ್ತಿ’ ಎಂಬ ಪುಸ್ತಕವನ್ನು ಉಚಿತವಾಗಿ ನೀಡಲಾಗಿದೆ. ‘ಹಸಿರು ತೋಟ ವಿವೇಕ ಪಾಠ’ ಕಾರ್ಯಕ್ರಮ ಮಾಡಲಾಗಿದೆ. ಇದರಲ್ಲಿ ನಾಗರಿಕರಿಗೆ ಮನೆಯಲ್ಲಿ ಬೇಕಾದ ಹೂವು– ಹಣ್ಣು, ಔಷಧಿಯ ಸಸಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ದೃಢೀಕರಣ ಪತ್ರ ನೀಡಿದ ನಾಗರಿಕರು ಸಸಿಗಳನ್ನು ಕೊಂಡೊಯ್ದು ಕಾಳಜಿಯಿಂದ ಬೆಳೆಸುತ್ತಿದ್ದಾರೆ. ಆಶ್ರಮದ ಸ್ವಯಂ ಸೇವಕರು ಮನೆಗಳಿಗೆ ಭೇಟಿ ನೀಡಿ ಸಸಿಗಳ ಪೋಷಣೆಯನ್ನೂ ಗಮನಿಸುತ್ತಾರೆ. ಇದುವರೆಗೆ ಮೂವರಿಗೆ ವಿಶೇಷ ಬಹುಮಾನ, ಹಲವರಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ.

‘ಎಲ್ಲ ಮನೆಯ ಮಕ್ಕಳು ಕುಟುಂಬಮುಖಿಯಾಗದೆ, ಸಮಾಜ ಮುಖಿಯಾಗಿ ಬೆಳೆಯಬೇಕು. ಈ ಅಭಿಯಾನದಿಂದ ಮನೆ– ಮನೆಗೂ ತಂಪು, ಮನ– ಮನಕ್ಕೆ ತಂಪು ಸಿಗಲಿದೆ’ ಎಂಬುದು ಮೈಸೂರು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT