ಸೋಮವಾರ, ಮೇ 23, 2022
30 °C
ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಮಿಳಿಂದ ಶಾಲೆ ಆಡಳಿತ ಮಂಡಳಿ ರದ್ದು ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ: ‘ತಾಲ್ಲೂಕಿನ ಗಿರುಗೂರು ಗ್ರಾಮದ ಮಿಳಿಂದ ವಿದ್ಯಾ ಸಂಸ್ಥೆಗೆ ವಿದ್ಯಾರ್ಥಿಯನ್ನು ಶೀಘ್ರವಾಗಿ ದಾಖಲು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಪಾಲಿಸದ ವಿದ್ಯಾ ಸಂಸ್ಥೆ ಉದ್ಧಟತವನ್ನು ಗಂಭೀರವಾಗಿ ಪರಿಗಣಿಸಿ ಶಾಲೆ ಆಡಳಿತ ಮಂಡಳಿಯನ್ನು ರದ್ದುಗೊಳಿಸಲು ಸಭೆ ನಿರ್ಣಯ ಕೈಗೊಳ್ಳುವಂತೆ’ ತಾ.ಪಂ. ಸದಸ್ಯ ಎಸ್. ರಾಮು ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಿದ ಬಿಇಒ ವೈ.ಕೆ.ತಿಮ್ಮೇಗೌಡ ಅವರು, ‘ಮಿಳಿಂದ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಯನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ಆಡಳಿತ ಮಂಡಳಿಯು ಒಪ್ಪಿಗೆ ನೀಡದ ಕಾರಣ ಸಮಸ್ಯೆಯಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸದಸ್ಯ ಎಸ್.ರಾಮು, ‘ಶಾಲೆಯು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು ಸರ್ಕಾರಿ ಮತ್ತು ಗ್ರಾಮ ಠಾಣಾ ಜಾಗದಲ್ಲಿ ಕಟ್ಟಡ ನಿರ್ಮಿಸಿ ಶಾಲೆ ನಡೆಸುತ್ತಿದೆ. ಇವರು ಸರ್ಕಾರದ ಯಾವುದೇ ಆದೇಶ ವನ್ನು ಪಾಲಿಸುವುದಿಲ್ಲ ಎನ್ನುವುದಾದರೆ ಶಾಲೆಯ ಆಡಳಿತ ಮಂಡಳಿಯನ್ನು ರದ್ದುಗೊಳಿಸುವುದು ಸೂಕ್ತ’ ಎಂದರು.

ತಾ.ಪಂ. ಅಧ್ಯಕ್ಷೆ ಕೆ.ಆರ್. ನಿರೂಪಾ ಮಾತನಾಡಿ, ‘ವಿದ್ಯಾರ್ಥಿ ಪೋಷಕರ ಮತ್ತು ಆಡಳಿತ ಮಂಡಳಿಯ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ವಿದ್ಯಾರ್ಥಿ ಮೇಲೆ ಹೇರಲು ಯತ್ನಿಸಬಾ ರದು ಕೂಡಲೇ ಮಗುವನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ಕ್ರಮ ಕೈಗೊಳ್ಳಿ’ ಎಂದು ಬಿಇಒಗೆ ಸೂಚಿಸಿದರು. ‌

ಸೆಸ್ಕ್ ಇಲಾಖೆಯ ಎಇಇಗಳಾದ ಅನಿಲ್ ಮತ್ತು ಕುಮಾರ್ ಸಭೆಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ ಮಾತನಾಡಿ, ‘ಕಳೆದ ಐದು ವರ್ಷಗಳಿಂದ ಸರಿಯಾಗಿ ಕೆಲಸ ಮಾಡಿದ್ದೇವೆ ಎಂದು ಆತ್ಮವಿಶ್ವಾಸದಿಂದ ನೀವು ಈ ಸಭೆಗಳಲ್ಲಿ ಇದುವರೆಗೂ ತಿಳಿಸಿಲ್ಲ ಕೇವಲ ಒಂದು ವಿದ್ಯುತ್ ತಂತಿ ತೂಗು ಬಿದ್ದಿರುವುದನ್ನು ಸರಿಪಡಿಸಲು ನಿಮಗೆ ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾ.ಪಂ ಸದಸ್ಯ ಎಸ್ ರಾಮು ಮಾತನಾಡಿ, ‘ಇದೇ ರೀತಿಯ ಸಮಸ್ಯೆ ಮಂಚದದೇವನಹಳ್ಳಿಯಲ್ಲಿ ಆಗಿದ್ದು 3 ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದೇನೆ ಇದನ್ನು ಸರಿಪಡಿಸಲು ಇದುವರೆಗೂ ಸಾಧ್ಯವಾಗಿಲ್ಲವೇಕೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅನಿಲ್‌ ಅವರು, ‘ನಮ್ಮ ಇಲಾಖೆಯಲ್ಲಿ ರೈತರು ಕೃಷಿ ಜಮೀನುಗಳಿಗೆ ಎಳೆದುಕೊಂಡಿರುವ ವಿದ್ಯುತ್ ತಂತಿಗಳನ್ನು ಇಲಾಖೆಯ ಹಣದಿಂದ ಸರಿಪಡಿಸಲು ಅವಕಾಶವಿಲ್ಲ ಆದ ಕಾರಣ ತಡವಾಗುತ್ತಿದೆ’ ಎಂದರು.

ಅನಾಹುತವಾಗುವ ಮೊದಲು ನೀವು ಸರಿಪಡಿಸಲು ಮುಂದಾಗಿ ಎಂದು ತಾ.ಪಂ. ಸದಸ್ಯ ಶ್ರೀನಿವಾಸ್ ತಿಳಿಸಿದರು.

‘ತಾಲ್ಲೂಕಿನ ವಿವಿಧ ಹಾಡಿಗಳಲ್ಲಿನ 73 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯಲ್ಲಿ ಕಳಪೆ ಉಪಕರಣಗಳನ್ನು ಬಳಸಿದ್ದು ಈ ಬಗ್ಗೆ ಪರಿಶೀಲಿಸಿದ ನಂತರ ಗುತ್ತಿಗೆದಾರರಿಗೆ ಹಣ ನೀಡುವಂತೆ’ ತಾ.ಪಂ. ಸದಸ್ಯ ಮುತ್ತಾ ಒತ್ತಾಯಿಸಿದರು.

ಕಗ್ಗುಂಡಿ, ಚನ್ನಕಲ್ ಕಾವಲ್, ಗೋಣಿಕೊಪ್ಪ ಮತ್ತಿತರ ಕಡೆ ಕೂಡಲೇ ಬೆಳಿಗ್ಗೆ  ಬಸ್ ಸಂಚಾರ ಆರಂಭಿಸುವಂತೆ ಸದಸ್ಯೆ ಜಯಂತಿ ಪ್ರಸ್ತಾಪಿಸಿದರು.

‘ಕೆಲವು ಮಾರ್ಗಗಳಲ್ಲಿ ಮತ್ತೆ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ನಮ್ಮಲ್ಲಿ ಈಗಾಗಲೇ ಮೂರು ಬಸ್‌ಗಳು ಸ್ಕ್ರಾಪ್ ಆಗಿವೆ, ಬಸ್‌ಗಳ ಕೊರತೆ ಇದೆ. ಆದರೂ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ದರ್ಶನ್ ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ತಾ.ಪಂ. ಇಓ ಡಿ.ಸಿ. ಶ್ರುತಿ ಸದಸ್ಯರಾದ ಕುಂಜಪ್ಪ ಕಾರ್ನಾಡ್, ಸುಮಿತ್ರಾ, ಪ್ರೇಮಾ, ಟಿ.ಈರಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು