ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ನೋಂದಣಿಗೆ ಜನರ ಪಡಿಪಾಟಲು

ಜನಸಾಮಾನ್ಯರ ಗೋಳು ಕೇಳುವವರಿಲ್ಲ; ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ
Last Updated 9 ಮೇ 2019, 19:58 IST
ಅಕ್ಷರ ಗಾತ್ರ

ಮೈಸೂರು: ಬೆಳಿಗ್ಗೆಯೇ ಎದ್ದು ಬಂದು ಸರತಿ ಸಾಲಿನಲ್ಲಿ ನಿಲ್ಲುವುದು, ಟೋಕನ್ ಪಡೆಯಲು ಕಾಯುವುದು, ಟೋಕನ್‌ ನೀಡಿದ ದಿನ ಮತ್ತೆ ಬಂದು ಗಂಟೆಗಟ್ಟಲೆ ಕಾಯುವುದು, ಆಧಾರ್‌ ನೋಂದಣಿ ಮಾಡಿಸಲು ಎಲ್ಲ ಕೆಲಸಗಳನ್ನು ಬದಿಗೊತ್ತಿ ಇಡೀ ದಿನವನ್ನು ಮೀಸಲಿಡಬೇಕಾದ ಅನಿವಾರ್ಯತೆ...

ಸರ್ಕಾರದ ಯೋಜನೆಗಳಿಗೆ ಮತ್ತು ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಕಡ್ಡಾಯ ಮಾಡಲಾಗಿದೆ. ಇದರಿಂದ ಆಧಾರ್‌ ನೋಂದಣಿ ಮತ್ತು ತಿದ್ದುಪಡಿಗಾಗಿ ನೋಂದಣಿ ಕೇಂದ್ರಗಳಿಗೆ ಅಲೆಯುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಧಾರ್‌ ನೋಂದಣಿ ಕೇಂದ್ರದಲ್ಲಂತೂ ನಿತ್ಯವೂ ನೂಕುನುಗ್ಗಲು.

ಮೈಸೂರು ಮಾತ್ರವಲ್ಲ, ಜಿಲ್ಲೆಯ ಇತರ ಕಡೆಗಳಿಂದಲೂ ಜನರು ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಇದೇ ಕೇಂದ್ರವನ್ನು ಆಶ್ರಯಿಸಿದ್ದಾರೆ. ನಗರದಲ್ಲಿರುವ ಕೆಲವು ಬ್ಯಾಂಕ್‌ಗಳ ಶಾಖೆಗಳು, ಅಂಚೆ ಕಚೇರಿ ಮತ್ತು ಮೈಸೂರು ಒನ್‌ ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ಮಾಡಿಸಬಹುದು. ಆದರೆ, ಅಲ್ಲೆಲ್ಲಾ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ನೋಂದಣಿಗೆ ಅವಕಾಶ. ದಿನಕ್ಕೆ 20 ಮಂದಿಗೆ ಮಾತ್ರ ಸೇವೆ ಲಭ್ಯ.

ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿನ ನೋಂದಣಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸೇವೆ ಲಭ್ಯವಿದೆ. ಈ ಕಾರಣದಿಂದಾಗಿ ಇಲ್ಲಿಗೆ ಹೆಚ್ಚಿನ ಜನರು ಬರುತ್ತಾರೆ. ವಿವಿಧ ತಾಲ್ಲೂಕುಗಳಲ್ಲಿರುವ ನಾಡ ಕಚೇರಿ, ಅಂಚೆ ಕಚೇರಿಗಳಲ್ಲಿ ಅಧಾರ್‌ ನೋಂದಣಿ ನಡೆಯಬೇಕಾದರೂ ಹಲವೆಡೆ ಈ ಪ್ರಕ್ರಿಯೆ ಸರಿಯಾಗಿ ನಡೆ ಯುತ್ತಿಲ್ಲ. ಸಿಬ್ಬಂದಿ ಕೊರತೆ, ಸರ್ವರ್‌ ಡೌನ್‌, ತಾಂತ್ರಿಕ ಸಮಸ್ಯೆಯ ಕಾರಣ ನೀಡಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿಗೆ ಎಲ್ಲರನ್ನೂ ಮೈಸೂರಿಗೆ ಕಳುಹಿಸುತ್ತಾರೆ.

ಜಿಲ್ಲಾಧಿಕಾರಿ ಕಚೇರಿಯ ನೋಂದಣಿ ಕೇಂದ್ರದಲ್ಲಿ ಬೆಳಿಗ್ಗೆ ಬೇಗನೇ ಬಂದು ಕ್ಯೂನಲ್ಲಿ ನಿಂತವರಿಗೆ ಮಾತ್ರ ಟೋಕನ್‌ ಪಡೆಯಬಹುದು. ಮಧ್ಯಾಹ್ನದ ಬಳಿಕ ಬಂದರೆ ಟೋಕನ್‌ ಕೂಡ ದೊರೆಯುವುದಿಲ್ಲ. ‘ನಾಳೆ ಬೆಳಿಗ್ಗೆ ಬನ್ನಿ’ ಎಂಬ ಉತ್ತರ ದೊರೆಯುತ್ತದೆ.

‘ನಂಜನಗೂಡಿನಿಂದ ಬಂದಿದ್ದೇನೆ. ಅಲ್ಲಿ ನಾಡಕಚೇರಿಯಲ್ಲಿ ಆಧಾರ್‌ ನೋಂದಣಿ ಬಗ್ಗೆ ವಿಚಾರಿಸಿದಾಗ ಮೈಸೂರಿಗೆ ಹೋಗುವಂತೆ ಕಳುಹಿಸಿ ದರು. ಇಲ್ಲಿಗೆ ಬರುವಾಗ ಮಧ್ಯಾಹ್ನ ಆಗಿದೆ. ಆದರೆ ಬೆಳಿಗ್ಗೆ ಬಂದರೆ ಮಾತ್ರ ಟೋಕನ್‌ ದೊರೆಯುವುದು ಎಂದು ಸಿಬ್ಬಂದಿ ಹೇಳಿದರು. ಟೋಕನ್‌ಗಾಗಿ ನಾಳೆ ಮತ್ತೆ ಬರಬೇಕು’ ಎಂದು ರೈತ ವೆಂಕಟೇಶ್‌ ಹೇಳಿದರು.

ಇಲ್ಲಿ ಸರಿಯಾದ ಮಾಹಿತಿ ನೀಡು ವವರಿಲ್ಲ. ರೈತರು, ಅವಿದ್ಯಾವಂತರು ಏನು ಮಾಡಬೇಕು ಎಂದು ಅವರು ಅಳಲು ತೋಡಿಕೊಂಡರು.

‘ಹೆಚ್ಚಿನ ಮಂದಿ ಆಧಾರ್‌ ನೋಂದಣಿಗೆ ಈ ಕೇಂದ್ರವನ್ನು ಆಶ್ರಯಿಸಿರುವುದರಿಂದ ಪ್ರತಿದಿನವೂ ಉದ್ದನೆಯ ಕ್ಯೂ ಕಂಡುಬರುತ್ತದೆ. ಈ ಕೇಂದ್ರದಲ್ಲಿ ದಿನಕ್ಕೆ ಗರಿಷ್ಠ 40 ಮಂದಿಗೆ ಸೇವೆ ನೀಡಲು ಸಾಧ್ಯ. ಆದರೆ ನಾವು ಯಾವುದೇ ಮಿತಿ ಇಟ್ಟುಕೊಳ್ಳದೆ ಎಷ್ಟು ಸಾಧ್ಯವೋ ಅಷ್ಟು ನೋಂದಣಿ ಮಾಡಿಸುತ್ತಿದ್ದೇವೆ’ ಎಂದು ಆಧಾರ್‌ ನೋಂದಣಿ ಜಿಲ್ಲಾ ಸಂಯೋಜಕಿ ಎಚ್‌.ಎಸ್‌.ಲಕ್ಷ್ಮಿ ಹೇಳುತ್ತಾರೆ.

ಮಕ್ಕಳ ಶಾಲಾ ದಾಖಲಾತಿಗೆ ಆಧಾರ್‌ ಅಗತ್ಯವಾಗಿದ್ದು, ಶಾಲೆ ಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿರು ವುದರಿಂದ ಈಗ ಆಧಾರ್‌ ನೋಂದಣಿಗೆ ನೂಕುನುಗ್ಗಲು ಹೆಚ್ಚಿದೆ. ಹೆತ್ತವರುತಮ್ಮ ಮಕ್ಕಳೊಂದಿಗೆ ಬಂದು ಸರದಿಗಾಗಿ ಕಾಯುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯ.

ಟೋಕನ್‌ ಪಡೆದವರು ಮತ್ತೆ ಆಧಾರ್‌ ನೋಂದಣಿಗೆ ಬರಲು 15 ದಿನಗಳವರೆಗೂ ಕಾಯಬೇಕಿದೆ. ಮೇ9 ರಂದು ಟೋಕನ್‌ ಪಡೆದುಕೊಂಡವರು ನೋಂದಣಿ ಮಾಡಿಸಿಕೊಳ್ಳಲು ಮೇ 25ರ ವರೆಗೆ ಕಾಯಬೇಕು. ಈ ಕೇಂದ್ರದ ಮೇಲೆ ಹೆಚ್ಚಿನ ಒತ್ತಡವಿರುವುದು ತಿಳಿದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಲ್ಪವೂ ಬಿಡುವಿಲ್ಲದೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗೆ ಒದಗಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT