ಶನಿವಾರ, ಮಾರ್ಚ್ 25, 2023
28 °C

ತ್ರಿಮತಸ್ಥ ಅನಾಥಾಲಯಕ್ಕೆ 125ರ ಸಂಭ್ರಮ

ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

Prajavani

ಅಲ್ಲಿ ಕಲಿತ ಅನಾಥರು, ಬಡವಿದ್ಯಾರ್ಥಿಗಳ ಬದುಕು ಬದಲಾಗಿದೆ. ಅಲ್ಲಿ ಕಲಿತು ಒಳ್ಳೊಳ್ಳೆಯ ಹುದ್ದೆಗಳಿಗೇರಿದ್ದಾರೆ. ಹೀಗಾಗಿ ಅದರ ಒಳಗೆ ಹೋಗುವುದೇ ಪುಣ್ಯವೆಂದು, ಕೈ ಮುಗಿದು ಒಳಹೋಗುತ್ತಾರೆ ಹಳೆಯ ವಿದ್ಯಾರ್ಥಿಗಳು...

ಇದು ಅನಾಥಾಲಯದ ಮಹತ್ವ ಸಾರುವ ಪುಟ್ಟ ಉದಾಹರಣೆ. ಸುಬ್ಬರಾಯನಕೆರೆಯ ನಾರಾಯಣ ಶಾಸ್ತ್ರಿ ರಸ್ತೆಯ ಬದಿಯ ಅಂದರೆ ಶಾಂತಲಾ ಟಾಕೀಸ್‌ ಬಳಿಯಿರುವ ತ್ರಿಮತಸ್ಥ ಅನಾಥಾಲಯಕ್ಕೆ ಈಗ 125ರ ಸಂಭ್ರಮ. 1996ರಲ್ಲಿ ಶತಮಾನೋತ್ಸವವನ್ನು ಆಚರಿಸಿದೆ.

ಅಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಊಟಕ್ಕೆ ಕೂಡುವ ಮುನ್ನ ಪಂಚೆ, ಶಲ್ಯ ಧರಿಸಿ ಪ್ರಾರ್ಥನೆ ಹೇಳಬೇಕು. ಹಾಗೆ ಪಂಚೆ, ಶಲ್ಯ ಧರಿಸದೆ ಹೋಗುವ ವಿದ್ಯಾರ್ಥಿಗಳಿಗೆ ಊಟವಿಲ್ಲ. ಇದು ನಿಯಮ. ಜತೆಗೆ, ಅನಾಥಾಲಯದ ಅಧಿದೇವತೆ ಗಾಯತ್ರಿ ಅನ್ನಪೂರ್ಣೇಶ್ವರಿ ದೇವಿಗೆ ಆಗಾಗ ಸಾಮೂಹಿಕವಾಗಿ ಸಭಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಇಂಥ ಅನಾಥಾಲಯಕ್ಕೆ ಸ್ಮಾರ್ತ, ಮಾಧ್ವ ಇಲ್ಲವೆ ವೈಷ್ಣವ ಬ್ರಾಹ್ಮಣರಾಗಿದ್ದು, ಬಡವರಾಗಿರಬೇಕು. ಇದಕ್ಕಾಗಿ ಆರ್ಥಿಕವಾಗಿ ಹಿಂದುಳಿದಿರುವ ಕುರಿತು ಪ್ರಮಾಣಪತ್ರ ಸಲ್ಲಿಸಿ ಪ್ರವೇಶ ಪಡೆಯಬಹುದು. ಪಿಯುನಿಂದ ಸ್ನಾತಕೋತ್ತರ ಪದವಿಯವರೆಗೆ ಜತೆಗೆ, ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೂ ಓದಲು ಅವಕಾಶವಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆ ಉಚಿತವಿದೆ. ಸದ್ಯ 57 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇದರೊಂದಿಗೆ 2002ರಲ್ಲಿ ಮಧುವನ ಬಡಾವಣೆಯಲ್ಲಿರುವ ಅನಾಥಾಲಯದಲ್ಲಿ 28 ವಿದ್ಯಾರ್ಥಿನಿಯರು ಇದ್ದಾರೆ.

ಬಿಸಿನೀರಿನ ವ್ಯವಸ್ಥೆಯಿದ್ದು, ಆಧುನೀಕರಣಗೊಂಡ ಅಡುಗೆಕೋಣೆ, ಪ್ರಾರ್ಥನಾ ಮಂದಿರವಿದೆ. ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಅರ್ಜಿ ಆಹ್ವಾನಿಸಿ, ಜುಲೈ ತಿಂಗಳಲ್ಲಿ ಪ್ರವೇಶ ನೀಡಲಾಗುವುದು. ಇದಕ್ಕೆ ಸೈಕಲ್‌ ಪ್ಯೂರ್ ಅಗರಬತ್ತಿಯ ಮಾಲೀಕ ಆರ್‌.ಗುರು ಅಧ್ಯಕ್ಷರಾಗಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಸಿ.ವಿ.ಗೋಪಿನಾಥ್ ಉಪಾಧ್ಯಕ್ಷರಾಗಿದ್ದಾರೆ. ಕಾರ್ಯದರ್ಶಿಯಾಗಿ ಸತ್ಯನಾರಾಯಣ, ಜಂಟಿ ಕಾರ್ಯದರ್ಶಿಯಾಗಿ ವಿ.ನಾಗರಾಜ್ ಹಾಗೂ ವ್ಯವಸ್ಥಾಪಕರಾಗಿ ಸುಬ್ರಹ್ಮಣ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದು ಈಗಿನ ಅನಾಥಾಲಯದ ಚಿತ್ರಣ. ಇದನ್ನು ಸ್ಥಾಪಿಸಿ, ಬೆಳೆಸಿದವರು ತಾತಯ್ಯ ಎಂದೇ ಖ್ಯಾತರಾದ ಎಂ.ವೆಂಕಟಕೃಷ್ಣಯ್ಯ. ಆಗ ಮೈಸೂರಿನಲ್ಲಿ ಮಾತ್ರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದ ಕಾಲ. ಊಟ, ವಸತಿಗೆ ಅನುಕೂಲ ಇಲ್ಲದಿದ್ದರೂ ಕಲಿಯುವ ಹಂಬಲವಿದ್ದ ವಿದ್ಯಾರ್ಥಿಗಳು ಅಸಂಖ್ಯ. ವಾರಾನ್ನದ ಊಟ ಮಾಡಿಕೊಂಡು ಕಲಿಯಬಹುದಿತ್ತು. ಆದರೆ, ವಸತಿ ಸೌಕರ್ಯ ಇರಲಿಲ್ಲ. ಇದನ್ನು ಮನಗಂಡ ತಾತಯ್ಯ ಬಡ, ಹೆತ್ತವರಿಲ್ಲದ, ಹೆತ್ತವರಿದ್ದೂ ಕಲಿಯಲಾಗದವರಿಗೆ ನೆರವಾಗಲು ಮುಂದಾದರು. ಇದಕ್ಕಾಗಿ ಅನಾಥಾಲಯ ಶುರು ಮಾಡಿದರು.

ಹೀಗೆ ಶುರುವಾಗಿದ್ದು ವಿಶಿಷ್ಟ ಸಂದರ್ಭದಲ್ಲಿ. ಮರಿಮಲ್ಲಪ್ಪ ಶಾಲೆ ಹಿಂಭಾಗದಲ್ಲಿ ನಂಜುಂಡಪ್ಪ ಎಂಬವರ ನಿರಂಜನ ಮಠವಿತ್ತು. ಅವರು ತಮ್ಮ ಅವಸಾನದ ಕಾಲದಲ್ಲಿ ಯತಿಗಳಾದ ವಿಶ್ವೇಶ್ವರಾನಂದ ಸರಸ್ವತಿ ಅವರಿಗೆ ವಹಿಸಿಕೊಟ್ಟರು. ಅವರು ಕೆಲ ಅನಾಥ ಮಕ್ಕಳಿಗೆ ಮಠದಲ್ಲಿ ಊಟ, ವಸತಿ ವ್ಯವಸ್ಥೆ ಮಾಡಿದರು. ಮುಂದೆ 1896ರಲ್ಲಿ ಯತಿಗಳು ತಾತಯ್ಯ, ಕೆ.ಚಂದ್ರಶೇಖರಯ್ಯ, ಎಚ್‌.ಕೃಷ್ಣರಾಯರು, ಡಾ.ಆರ್ಮುಗಂ ಮೊದಲಿಯಾರ್ ಅವರಿದ್ದ ಸಮಿತಿಗೆ ವಹಿಸಿಕೊಟ್ಟರು. ಆದರೆ, ಕೆಲ ತಿಂಗಳು ನಡೆದ ಅನಾಥಾಲಯಕ್ಕೆ ಆರ್ಥಿಕಭಾರದಿಂದ ಕಷ್ಟಪಡಬೇಕಾಯಿತು. ಇದನ್ನು ನಿವಾರಿಸಲು, ಶಾಶ್ವತನಿಧಿ ಸ್ಥಾಪನೆಗಾಗಿ ಉತ್ತರ ಭಾರತದ ಪ್ರವಾಸವನ್ನು ಯತಿಗಳು ಕೈಗೊಂಡರು. ಆದರೆ, ಪ್ರವಾಸದಲ್ಲಿದ್ದಾಗ ನಿಧನರಾದರು. ಇದರಿಂದ ಅನಾಥಾಲಯವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ತಾತಯ್ಯ ಅವರ ಹೆಗಲೇರಿಗೇರಿತು. ಇದಕ್ಕಾಗಿ ಅವರ ತುಂಬ ಕಷ್ಟಪಟ್ಟರು.

ಊಟ, ವಸತಿಯೊಂದಿಗೆ ಪಠ್ಯಪುಸ್ತಕ, ಬಟ್ಟೆ, ಶುಲ್ಕ ಭರಿಸುವ ಹೊಣೆ ಹೊತ್ತ ಪರಿಣಾಮ ತಾತಯ್ಯ ಅವರು ವಿದ್ಯಾಭ್ಯಾಸದ ಜತೆಗೆ, ಮರಗೆಲಸ, ಹೊಲಿಗೆ, ನೇಯ್ಗೆ, ಚಾಪೆ ಹೆಣೆಯುವುದು ಮುಂತಾದ ಕಸುಬುಗಳನ್ನು ಕಲಿಸಲು ನೆರವಾದರು. ಸಂಸ್ಕೃತ ಕಲಿಯಲು ಅಧ್ಯಾಪಕರನ್ನು ನೇಮಿಸಿದರು. ಇದರೊಂದಿಗೆ ಅನಾಥಾಲಯದ ವಿದ್ಯಾರ್ಥಿ ಎಂದರೆ ಗೌರವಾದರ ಮೂಡಿಸುವ ಹಾಗೆ ಶ್ರದ್ಧೆ, ಶಿಸ್ತು ಕಲಿಸಿದರು. ಹೀಗಾಗಿ ಮಂಗಳ ಕಾರ್ಯಗಳಲ್ಲಿ ನಡೆಯುವಾಗ ಇಲ್ಲಿನ ವಿದ್ಯಾರ್ಥಿಗಳು ವೇದೋಪನಿಷತ್ತು ಹೇಳುತ್ತಿದ್ದರು. ಇದರಿಂದ ತಾಂಬೂಲದೊಂದಿಗೆ ದಕ್ಷಿಣೆ ಸಿಗುತ್ತಿತ್ತು. ಇದಕ್ಕೆ ಅರಮನೆಯಿಂದಲೂ ಆಗಾಗ ಆಹ್ವಾನ ಬರುತ್ತಿತ್ತು.
ಹೀಗೆ ನಡೆಯುತ್ತಿದ್ದ ಅನಾಥಾಲಯವನ್ನು 1914ರಲ್ಲಿ ಸರ್ಕಾರ, ಬಾಲಿಕಾ ಪಾಠಶಾಲೆಗಾಗಿ ವಶಕ್ಕೆ ತೆಗೆದುಕೊಂಡು, ಇದರ ಬದಲಾಗಿ ಈಗಿರುವ ಜಾಗವನ್ನು ಜತೆಗೆ, 4460 ರೂಪಾಯಿ ನೀಡಿತು. ಆದರೆ, ತಾತಯ್ಯ ಅವರ ಉತ್ಸಾಹಕ್ಕೆ ಇದು ಸಾಲಲಿಲ್ಲ. ಕಟ್ಟಡ ನಿರ್ಮಾಣಕ್ಕೆ ಅನೇಕ ದಾನಿಗಳು ಮುಂದೆ ಬಂದರು. ಜತೆಗೆ, ನಂಜನಗೂಡಿನ ಬಳಿ 131 ಎಕರೆ ಖರೀದಿಸಿ ಭತ್ತ ಬೆಳೆಯಲು ನೆರವಾದರು. ಮುಂದೆ ಉಳುವವನೇ ಭೂ ಒಡೆಯ ಕಾಯ್ದೆ ಬಂದ ಪರಿಣಾಮ ನಿಗದಿತವಾಗಿ ಬರುತ್ತಿದ್ದ ಭತ್ತ ನಿಂತುಹೋಯಿತು. ಆಗ ಮಿರ್ಲೆ ಕೃಷ್ಣಪ್ಪ ಅವರು ಭತ್ತ ಬೆಳೆಯುವ ಜಮೀನನ್ನು ದಾನವಾಗಿ ನೀಡಿದರು. ಜತೆಗೆ, ದಾನ ನೀಡಲು ಆಸಕ್ತಿ ಇರುವ ಮನೆಗಳಿಗೆ ವಿದ್ಯಾರ್ಥಿಗಳನ್ನು ಕಳಿಸಿದರು. ಹೀಗೆ ಒಂದು ಸೇರು, ಅಚ್ಚೇರು, ಪಾವು ಅಕ್ಕಿ ಸಂಗ್ರಹಿಸುವ ಜವಾಬ್ದಾರಿ ವಿದ್ಯಾರ್ಥಿಗಳದು. ಅಲ್ಲದೆ, ವಾರ್ಷಿಕ ಪರೀಕ್ಷೆಯ ಶುಲ್ಕ ಸಂಗ್ರಹಿಸಲು ತಾವೇ ಪತ್ರ ಬರೆದು, ವಿದ್ಯಾರ್ಥಿಗಳೊಂದಿಗೆ ಕಳುಹಿಸಿ ಹಣ ಸಂಗ್ರಹಿಸುತ್ತಿದ್ದರು.

ಶ್ರೇಯಸ್ಸಿನ ಪ್ರಾರ್ಥನೆ: ಅನಾಥಾಲಯದ ವಿದ್ಯಾರ್ಥಿಗಳಿಗೆ ಆಗಾಗ ಸಿಹಿ ಊಟವನ್ನು ತಾತಯ್ಯ ಏರ್ಪಡಿಸುತ್ತಿದ್ದರು. ಇದಕ್ಕಾಗಿ ತಮ್ಮ ಬಳಿ ಮದುವೆಗೆ ಕರೆಯಲು ಬಂದವರಿಗೆ ನಮ್ಮ ಅನಾಥಾಲಯ ಹುಡುಗಿರಗೆ ವಿಶೇಷ ಭೋಜನ ಮಾಡಿಸಿ. ಇಂತಿಷ್ಟು ದುಡ್ಡು ಕೊಟ್ಟರೆ ನಾವೇ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದಾಗ ಬಂದವರು ಇಲ್ಲ ಎನ್ನುತ್ತಿರಲಿಲ್ಲ.

ಹಾಗೆ ಭೋಜನ ವ್ಯವಸ್ಥೆಯಾದ ದಿನ, ಇದರ ಉದ್ದೇಶವನ್ನೂ ಇದಕ್ಕೆ ಸಂಬಂಧಪಟ್ಟವರ ಶ್ರೇಯಸ್ಸಿಗೆ ಪ್ರಾರ್ಥನೆ ಮಾಡಿ ಎಂದು ಹೇಳುತ್ತಿದ್ದರು. ಹೀಗೆ ಕಷ್ಟಪಟ್ಟು ಬೆಳೆಸಿದ ತಾತಯ್ಯ ಅವರು 1933ರಲ್ಲಿ ನಿಧನರಾದರು. ಬಳಿಕ ಸಿ.ನರಸಿಂಹಯ್ಯ, ಎಚ್‌.ರಾಮಯ್ಯ ದುಡಿದರು. ಆಮೇಲೆ ತಾತಯ್ಯ ಅವರ ಮೊಮ್ಮಕ್ಕಳಾದ ಎಂ.ಎಸ್‌.ಶ್ರೀನಿವಾಸರಾವ್ ಅವರು 3 ದಶಕಗಳಿಗೂ ಮಿಕ್ಕಿ ಕಾರ್ಯದರ್ಶಿಗಳಾಗಿ ಶ್ರಮಿಸಿದರು.

ಹೀಗೆ ಸಾಗಿದ ಅನಾಥಾಲಯವು ಆರ್ಥಿಕ ಸಂಕಷ್ಟದಿಂದ ಪಾರಾಗಲು, ಆಲಯ ಆವರಣದಲ್ಲಿಯೇ ಮಳಿಗೆಗಳನ್ನು ಕಟ್ಟಿಸಿ ಬಾಡಿಗೆ ಕೊಡಲಾಯಿತು. ಜತೆಗೆ, ಎದುರಿಗೆ ಇರುವ ಜಾಗವನ್ನು ಭೋಗ್ಯಕ್ಕೆ ಕೊಟ್ಟ ಪರಿಣಾಮ ಶಾಂತಲಾ ಟಾಕೀಸ್‌ ತಲೆ ಎತ್ತಿತ್ತು. ಭೋಗ್ಯದ ಅವಧಿ ಮುಗಿದು ಸದ್ಯ ಬಾಡಿಗೆ ಪಾವತಿಸುತ್ತಿದೆ. ಹೀಗೆ ಆರ್ಥಿಕ ಸಂಕಷ್ಟದಿಂದ ಪಾರಾಗುವುದರ ಜತೆಗೆ, ಇಲ್ಲಿನ ಹಳೆಯ ವಿದ್ಯಾರ್ಥಿಗಳು ದೇಣಿಗೆ ನೀಡುತ್ತಿದ್ದಾರೆ. ಇದರಿಂದ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿ ವರ್ಷ 1.50 ಲಕ್ಷ ನಗದನ್ನು ವಿದ್ಯಾರ್ಥಿವೇತನವಾಗಿ ನೀಡುತ್ತಿದೆ.

ಸಮಾಜ ಸೇವಕರಾಗಿ, ಪತ್ರಿಕೋದ್ಯಮಿಯಾಗಿದ್ದ ತಾತಯ್ಯ ಅವರ ಸ್ಮರಣಾರ್ಥ ಸಿಟಿ ಬಸ್‌ನಿಲ್ದಾಣ ಎದುರು ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಸೆಪ್ಟೆಂಬರ್ 5ರಂದು ತಾತಯ್ಯ ದಿನವೆಂದು ಆಚರಿಸಿ ಸಾಹಿತಿಗಳಿಗೆ, ವಿದ್ವಾಂಸರಿಗೆ ತಾತಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು