ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ಪದಾರ್ಥವಾಗಿ ಬೌದ್ಧಿಕ ಸಾಮರ್ಥ್ಯ ಬಳಕೆ: ಎ.ಎಸ್.ಕಿರಣ್‌ಕುಮಾರ್‌

Last Updated 8 ಸೆಪ್ಟೆಂಬರ್ 2022, 11:04 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿರುವ ಬೌದ್ಧಿಕ ಸಾಮರ್ಥ್ಯವನ್ನು ಕಚ್ಚಾ ಪ್ರದಾರ್ಥವಾಗಿ ಬಳಸಿಕೊಂಡು ವಸಾಹತುಶಾಹಿ ಪ್ರದೇಶವನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಇಸ್ರೋ ನಿವೃತ್ತ ಅಧ್ಯಕ್ಷ, ಖ್ಯಾತ ವಿಜ್ಞಾನಿ ಎ.ಎಸ್.ಕಿರಣ್‌ಕುಮಾರ್‌ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿ.ಪಂ., ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೆ.10ರವರೆಗೆ ಹಮ್ಮಿಕೊಂಡಿರುವ ‘14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ’ದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

‘ಹಿಂದೆ ಬ್ರಿಟಿಷರು ನಮ್ಮಲ್ಲಿದ್ದ ಸಂಪತ್ತಿಗಾಗಿ ಇಲ್ಲಿಗೆ ಬಂದಿದ್ದರು. ಈಗ, ಬೌದ್ಧಿಕ ಸಾಮರ್ಥ್ಯವನ್ನು ದುರುಪಯೋಗದ ಮೂಲಕ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳುವ ದೊಡ್ಡದಾದ ಜಾಲವೊಂದು ಸಕ್ರಿಯವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಖಾಸಗಿ ಕಂಪನಿಗಳೂ:‘ಮಾನವನು ವಿಜ್ಞಾನದ ಹಾಗೂ ತಂತ್ರಜ್ಞಾನದ ಮೂಲಕ‌‌ ಜೀವನ‌ ಸುಧಾರಿಸಿಕೊಂಡು, ಸುಗಮವಾಗಿ ನಡೆಯುತ್ತಿದ್ದಾನೆ. ಬಾಹ್ಯಾಕಾಶದಲ್ಲಿ, ಚಂದ್ರನ ಮೇಲೂ ಕಾಟಿಟ್ಟು ಸಾಧನೆ ಮಾಡುತ್ತಿದ್ದಾನೆ. ಬಾಹ್ಯಾಕಾಶದಲ್ಲೂ ಮೇಲುಗೈ ಸಾಧಿಸಲು ಯತ್ನಿಸುತ್ತಿದ್ದಾನೆ. ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಸರ್ಕಾರಗಳೊಂದಿಗೆ ಖಾಸಗಿ ಕಂಪನಿಗಳವರು ಮತ್ತು ಉದ್ಯಮಿಗಳು ಕೂಡ ಪಾಲ್ಗೊಳ್ಳಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

‘ಕ್ಷಿಪ್ರವಾಗಿ ಬದಲಾವಣೆ ಕಾಣುತ್ತಿರುವ ಈ ಸಂದರ್ಭದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾನವ ನಿರಂತವಾಗಿ ಪ್ರಯತ್ನಿಸುತ್ತಿದ್ದಾನೆ. ಹಿಂದೆ ಜೀವನ ನಡೆಸಲು ದೈಹಿಕ ಸಾಮರ್ಥ್ಯ ಬೇಕಾಗುತ್ತಿತ್ತು. ಆದರೀಗ, ತಂತ್ರಜ್ಞಾನಗಳ ಬಳಕೆ ಮೂಲಕ ಸುಲಭ/ ಸುಗಮಗೊಳಿಸಿಕೊಳ್ಳುತ್ತಿದ್ದಾನೆ’ ಎಂದು ಹೇಳಿದರು.‌

ಹವಾಮಾನ ವೈಪರೀತ್ಯ:‘‍ಇತ್ತೀಚಿನ ದಿನಗಳಲ್ಲಿ ಹವಾಮಾನ ಮುನ್ಸೂಚನೆಯನ್ನು ನಿಖರವಾಗಿ ಹೇಳಲಾಗುತ್ತಿಲ್ಲ. ಇಡೀ ಪ್ರಪಂಚದಲ್ಲಿ ಹವಾಮಾನ ವೈಪರೀತ್ಯ ಬಹಳ ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಬಹಳ ತೊಂದರೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳೆಯುತ್ತಿದೆ. ಮನುಷ್ಯ ತಮ್ಮ ಸಾಮರ್ಥ್ಯದ ಮೂಲಕ ದಬ್ಬಾಳಿಕೆ ಮಾಡಲು ಯುದ್ಧದಲ್ಲಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾನೆ‌. ತಂತ್ರಜ್ಞಾನದ ದುರ್ಬಳಕೆಯಿಂದಾಗುವ ಅನಾಹುತಗಳ ಬಗ್ಗೆಯೂ ಯೋಚಿಸಬೇಕಾಗಿದೆ’ ಎಂದರು.

ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ‘ವಿ.ವಿಯಿಂದ ಔಟ್‌ರೀಚ್ ಚಟುವಟಿಕೆಗಳಡಿ ಕನ್ನಡದಲ್ಲಿ ವಿಜ್ಞಾನ ಕಾರ್ಯಕ್ರಮದಲ್ಲಿ ಶಾಲೆಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಕೆಆರ್‌ವಿಪಿ ಅಧ್ಯಕ್ಷ ಗಿರೀಶ ವಿ.ಕಡ್ಲೆವಾಡ, ಉಪಾಧ್ಯಕ್ಷ ಎಚ್‌.ಜಿ.ಹುದ್ದಾರ್, ಖಜಾಂಚಿ ಈ.ಬಸವರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಹರಿಪ್ರಸಾದ್, ಮೀನಾಕ್ಷಿ ಕುಡುಸೋಮಣ್ಣವರ, ಡಾ.ರಾಮಚಂದ್ರ, ಶಂಕರ ಟಿ.ನಾಯಕ, ದಾನಿ ಬಾಬುರಾವ್, ಅಣದೊರೆ ಮಹಾರುದ್ರಪ್ಪ, ಬಸವಲಿಂಗಪ್ಪ ಮಲ್ಹಾರ ಇದ್ದರು.

ಕೆಆರ್‌ವಿಪಿ ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ ಸ್ವಾಗತಿಸಿದರು. ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಗೋಷ್ಠಿಗಳು ನಡೆದವು.

ಲಾಭ ಮಾಡಿಕೊಳ್ಳಲು...
‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಅಂತರರಾಷ್ಟ್ರೀಯ ಕಂಪನಿಗಳು ಮನುಷ್ಯನ ವ್ಯಕ್ತಿತ್ವ ಬದಲಾಯಿಸಿ, ಕೇವಲ ಗ್ರಾಹಕರನ್ನಾಗಿ ಮಾಡಿಕೊಂಡು ಲಾಭ‌ ಪಡೆಯಲು ಯತ್ನಿಸುತ್ತಿವೆ. ನಮ್ಮ ಎಲ್ಲ ಕೆಲಸಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಕಿರಣ್‌ಕುಮಾರ್‌ ತಿಳಿಸಿದರು.

‘ವಿಜ್ಞಾನವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪರರ ಒಳಿತಿಗೆ ವಿಜ್ಞಾನವನ್ನು ಬಳಸಿಕೊಳ್ಳಬೇಕು. ಉಪಯೋಗದ ಜೊತೆ ದುರುಪಯೋಗದ ಬಗ್ಗೆಯೂ‌ ನಿರಂತರವಾಗಿ ತಿಳಿಸಿಕೊಡಬೇಕು. ಪ್ರಕೃತಿಯನ್ನು ಸಕಲ ಜೀವರಾಶಿಗಳಿಗೂ ಉಳಿಸಿಕೊಳ್ಳಬೇಕು ಎನ್ನುವ ಪ್ರಜ್ಞೆಯನ್ನು ಬೆಳೆಸಬೇಕು’ ಎಂದು ಹೇಳಿದರು.

‘ಮನುಷ್ಯನಲ್ಲಿ ಅಗಾಧವಾದ ‌ಶಕ್ತಿ ಇದೆ. ಮೊಬೈಲ್ ಫೋನ್‌ಗಳು ಪರಸ್ಪರ ಸಂಪರ್ಕ ಕಲ್ಪಿಸುವಂತೆ ಎರಡು‌‌ ಜೀವಗಳು ಕೂಡ ತರಂಗಾಂತರಗಳ ಮೂಲಕ ಸಂಪರ್ಕಿಸಬಹುದು ಎನ್ನುವುದನ್ನು ತಳ್ಳಿ ಹಾಕಲಾಗದು. ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸುಸ್ಥಿರ ಅಭಿವೃದ್ಧಿಗೆ ಬಳಸಿಕೊಳ್ಳಲು ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಅವರನ್ನು ಅವರನ್ನು ಸಾರೋಟಿನಲ್ಲಿ ಸ್ವಾಗತಿಸಲಾಯಿತು.

ಜಾತಿ ಹೋಗಲಾಡಿಸಲು...
ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ಸಾಮಾಜಿಕ ರೋಗಗಳಾದ ಅನಕ್ಷರತೆ, ಬಡತನ ನಿವಾರಣೆಗೆ ಸರ್ಕಾರಗಳು ಗಮನ ಕೊಡಬೇಕು. ಜಾತೀಯತೆ ಬಹಳ‌ ದೊಡ್ಡ ಕಾಯಿಲೆ. ವಿಜ್ಞಾನ ಹಾಗೂ ತಂತ್ರಜ್ಞಾನ ಅಪಾರ ಪ್ರಮಾಣದಲ್ಲಿ ಬೆಳೆದಿದ್ದರೂ ಜಾತಿಯನ್ನು ಹೋಗಲಾಡಿಸಲು ಆಗಿಲ್ಲ. ಜಾತಿ ಹೋಗಲಾಡಿಸಲು ವಿಜ್ಞಾನಿಗಳು ಯೋಚಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT