ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತೀವ್ರಗೊಂಡ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಪಟ್ಟು ಬಿಡದ ಕೆ.ಆರ್.ಆಸ್ಪತ್ರೆಯ ಟ್ರೈನಿ ಸ್ಟಾಫ್‌ ನರ್ಸ್‌ಗಳು, ಮತ್ತೆ ಪ್ರತಿಭಟನೆ
Last Updated 15 ಜುಲೈ 2020, 13:13 IST
ಅಕ್ಷರ ಗಾತ್ರ

ಮೈಸೂರು: ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬುಧವಾರ ಇನ್ನಷ್ಟು ತೀವ್ರಗೊಂಡಿದೆ.

ನೂರಾರು ಸಂಖ್ಯೆಯಲ್ಲಿ ನಗರಕ್ಕೆ ಬಂದ ಕಾರ್ಯಕರ್ತೆಯರು ಅಶೋಕ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿ ಎದುರು ಘೋಷಣೆಗಳನ್ನು ಕೂಗಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪರಸ್ಪರ ಅಂತರ ಕಾಯ್ದುಕೊಂಡೇ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಸಹ ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆದ ಈ ಪತ್ರ ಚಳವಳಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಕ್ಕೂ ಅಧಿಕ ಮಂದಿ ಕಾರ್ಯಕರ್ತೆಯರು ಭಾಗಿಯಾದರು.

ಮಾಸಿಕ ಗೌರವಧನವನ್ನು ₹ 12 ಸಾವಿರಕ್ಕೆ ಹೆಚ್ಚಿಸಬೇಕು, ಕೋವಿಡ್‌ ವಿರುದ್ಧ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಬೇಕು, ಕೊರೊನಾ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.

ಬಿಎಸ್‌ಪಿ ಕಾರ್ಯಕರ್ತರಿಂದ ಪ್ರತಿಭಟನೆ

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ನಡೆದ ದಾಳಿಯನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕೂಡಲೇ ದಾಳಿ ನಡೆಸಿದವರನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಅವರು, ಮತ್ತೆ ಇಂತಹ ದುಷ್ಕೃತ್ಯಗಳು ನಡೆಯದಂತೆ ತಡೆಯಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆಗಳನ್ನು ಏರಿಕೆ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಪೆಟ್ರೋಲ್ ಹಾಗೂ ಡಿಸೇಲ್‌ನ್ನು ಕನಿಷ್ಠ ₹ 50ಗೆ ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಶಿವಕುಮಾರ, ಶಿವಮಹದೇವ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ, ನಗರ ಘಟಕದ ಅಧ್ಯಕ್ಷ ಸಿ.ಶ್ರೀನಿವಾಸಪ್ರಸಾದ್, ಪ್ರಧಾನ ಕಾರ್ಯದರ್ಶಿ ಜೈಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT