ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಮಾನ ನಿಲ್ದಾಣದಲ್ಲಿ 'ಅವಸರ್'

ಸ್ವಸಹಾಯ ಸಂಘಗಳಿಗೆ ಮಳಿಗೆ ಒದಗಿಸುವ ಉಪಕ್ರಮ
Last Updated 30 ಜುಲೈ 2022, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಮೈಸೂರಿನ ವಿಶಿಷ್ಟ ವಸ್ತುಗಳ ಪ್ರಚಾರಕ್ಕೆ ಮಳಿಗೆ ಒದಗಿಸಲು ಯೋಜಿಸಲಾಗಿದೆ.

‘ಅವಸರ್’ (ಏರ್‌ಪೋರ್ಟ್‌ ಆ್ಯಸ್ ವೆನ್ಯೂ ಫಾರ್ ಸ್ಕಿಲ್ಡ್‌ ಆರ್ಟಿಸನ್ಸ್‌ ಆಫ್‌ ದಿ ರೀಜನ್‌–ಈ ಭಾಗದ ಕುಶಲಕರ್ಮಿಗಳಿಗೆ ವಿಮಾನನಿಲ್ದಾಣ ವೇದಿಕೆ) ಉಪಕ್ರಮಕ್ಕೆ ಮಂಡಕಳ್ಳಿ ವಿಮಾನನಿಲ್ದಾಣವನ್ನೂ ಒಳಗೊಳಿಸಲು ಪ್ರಯತ್ನ ನಡೆಯುತ್ತಿದೆ. ‘ಭೌಗೋಳಿಕ ಮಾನ್ಯತೆ’ (ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಟ್ಯಾಗ್) ಪಡೆದ ವಸ್ತುಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.

ಹೊರ ಜಿಲ್ಲೆ, ರಾಜ್ಯ ಮತ್ತು ದೇಶದ ಪ್ರವಾಸಿಗರಿಗೆ ಮೈಸೂರಿನ ಉತ್ಪನ್ನಗಳನ್ನುಸ್ವ ಸಹಾಯ ಗುಂಪುಗಳ ಮೂಲಕ ‍ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಅಲ್ಲಿ ಸ್ಥಾಪಿಸಲಾಗುವ ಮಳಿಗೆಯಲ್ಲಿ ಸ್ವಸಹಾಯ ಗುಂಪಿನವರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು ಹಾಗೂ ಮಾರಾಟ ಮಾಡಬಹುದು.

ಕೋವಿಡ್‌ ಪರಿಸ್ಥಿತಿ ನಂತರ ಇಲ್ಲಿಂದ ಹಲವು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಸದ್ಯ ಅಲಯನ್ಸ್‌ ಕಂಪನಿಯು ಹೈದರಾಬಾದ್, ಗೋವಾ, ಬೆಂಗಳೂರು ಹಾಗೂ ಕೊಚ್ಚಿ ಮತ್ತು ಇಂಡಿಗೋ ಕಂಪನಿಯು ಹೈದರಾಬಾದ್, ಚೆನ್ನೈ ಮತ್ತು ಹುಬ್ಬಳ್ಳಿ ನಡುವೆ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ಇದಕ್ಕೆ ಪೂರಕವಾಗಿ, ಪ್ರಯಾಣಿಕರು ಹಾಗೂ ಅವರನ್ನು ಬರಮಾಡಿಕೊಳ್ಳಲು ಬರುವವರ ಗಮನಸೆಳೆಯಲು ‘ಅವಸರ್’ ರೂಪಿಸಲಾಗುತ್ತಿದೆ.

ಯಾರು ಬೇಕಾದರೂ:

ಟರ್ಮಿನಲ್‌ ಬಿಲ್ಡಿಂಗ್‌ನ ಆವರಣದಲ್ಲಿ ಔಟ್‌ಲೆಟ್‌ ಸಿದ್ಧಪಡಿಸಲಾಗುತ್ತದೆ. ಯಾರು ಬೇಕಾದರೂ ಅಲ್ಲಿಗೆ ಭೇಟಿ ನೀಡಿ ವಸ್ತುಗಳನ್ನು ವೀಕ್ಷಿಸಬಹುದು ಹಾಗೂ ಖರೀದಿಸಬಹುದು.

ಜಿಲ್ಲೆಯಲ್ಲಿ ಸಾವಿರಾರು ಸ್ವಸಹಾಯ ಗುಂಪುಗಳಿವೆ. ವೈವಿಧ್ಯಮಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿವೆ. ಅವುಗಳಿಗೆ ವಿಮಾನನಿಲ್ದಾಣದಂತಹ ಜಾಗದಲ್ಲಿ ಮಳಿಗೆ ಕಲ್ಪಿಸಿ ಮಾರುಕಟ್ಟೆ ಜಾಲ ವೃದ್ಧಿಸಿಕೊಳ್ಳಲು ಅವಕಾಶ ಕೊಡಲಾಗುತ್ತದೆ. ಸರದಿ ಮೇಲೆ ಮಳಿಗೆ ಕೊಡಲಾಗುತ್ತದೆ. ಮೈಸೂರು ಪಾಕ್‌, ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಶ್ರೀಗಂಧದ ಸಾಬೂನು, ಮೈಸೂರು ಶ್ರೀಗಂಧದ ಎಣ್ಣೆ, ಮೈಸೂರಿನ ಚಿತ್ರಕಲೆ, ಮೈಸೂರು ಅಗರಬತ್ತಿ, ಮೈಸೂರು ರೋಸ್ ವುಡ್ ಚಿತ್ರ ಮೊದಲಾದವುಗಳನ್ನು ಪ್ರದರ್ಶಿಸುವುದಕ್ಕೆ ಯೋಜಿಸಲಾಗಿದೆ.

‘ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಉಪಕ್ರಮ ಇದಾಗಿದೆ. ದೇಶದಾದ್ಯಂತ ಆಯ್ದ ನಗರಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ. ರಾಜ್ಯದಲ್ಲಿ ಬೆಳಗಾವಿ ವಿಮಾನನಿಲ್ದಾಣ ಆಯ್ಕೆಯಾಗಿದೆ. ಮೈಸೂರು ವಿಮಾನನಿಲ್ದಾಣವನ್ನೂ ಸೇರ್ಪಡೆಗೊಳಿಸುವಂತೆ ಕೋರಲಾಗುತ್ತಿದೆ. ಸ್ವಸಹಾಯ ಸಂಘಗಳಿಗೆ ಸರದಿ ಮೇಲೆ 15 ದಿನಗಳವರೆಗೆ ಮಳಿಗೆ ನೀಡಲಾಗುತ್ತದೆ. ಅದರಲ್ಲಿ ಅವರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಬಹುದು. ಮೈಸೂರಿನ ವಿಶೇಷತೆ ಬಿಂಬಿಸುವ ಉತ್ಪನ್ನಗಳನ್ನು ತಯಾರಿಸುವ ಸಂಘಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ’ ಎಂದು ವಿಮಾನನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಂಗಳಿಗೆ 2ರಂತೆ ವರ್ಷಕ್ಕೆ 24 ಸ್ವಸಹಾಯ ಸಂಘಗಳಿಗೆ ಮಳಿಗೆ ದೊರೆಯಲಿದೆ. ಕಡಿಮೆ ಬಾಡಿಗೆ ವಿಧಿಸಲಾಗುತ್ತದೆ. ವಿದ್ಯುತ್‌ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಪ್ರಾಧಿಕಾರದ ಜಾಲತಾಣದ ಮೂಲಕ ಸ್ವಸಹಾಯ ಸಂಘಗಳು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಗುಂಪುಗಳನ್ನು ಗುರುತಿಸಲು ನೋಡಲ್ ಏಜೆನ್ಸಿ ನಿಗದಿಪಡಿಸಲಾಗುವುದು. ಮೈಸೂರಿನ ವಿಶಿಷ್ಟ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು, ಇದರೊಂದಿಗೆ ಮೈಸೂರು ಬ್ರ್ಯಾಂಡ್‌ ಪ್ರಚುರಪಡಿಸುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT