ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಭಿಕ್ಷುಕಿಯ ಮಗಳು ಪತ್ತೆ, ಆರೋಪಿ ಬಂಧನ

ಮೈಸೂರಿನ ಬಾಲಮಂದಿರಕ್ಕೆ ಹೆಣ್ಣು ಮಗುವಿನ ಪಾಲನೆಯ ಜವಾಬ್ದಾರಿ
Last Updated 5 ಅಕ್ಟೋಬರ್ 2020, 2:07 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಶ್ರೀಕಂಠೇಶ್ವರ ದೇವಾಲಯದ ಬಳಿ ಕಳೆದ ಶುಕ್ರವಾರ ಭಿಕ್ಷುಕಿಯ ಮೂರು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಗುವನ್ನು ರಕ್ಷಿಸಿದ್ದಾರೆ.

ಸಿಪಿಐ ಲಕ್ಷ್ಮಿಕಾಂತ್ ತಳವಾರ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ಮೂರು ತಂಡ ರಚಿಸಿ, ಮಗುವಿನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದರು.

ಖಚಿತ ಮಾಹಿತಿಯಂತೆ ಅಪಹರಣ ಮಾಡಿದ್ದ ಆರೋಪಿ ಎಚ್.ಡಿ.ಕೋಟೆ ತಾಲ್ಲೂಕಿನ ಹುಣಸೇಕುಪ್ಪೆ ಗ್ರಾಮದ ಗಂಗಾ (45) ಎಂಬಾತನನ್ನು ಭಾನುವಾರ ಬಂಧಿಸಿ, ವಿಚಾರಿಸಿದಾಗ ಹೆಣ್ಣು ಮಗುವನ್ನು ನೀಡಿದ್ದಾನೆ. ಮಗುವನ್ನು ಮೈಸೂರಿನ ಬಾಲಮಂದಿರಕ್ಕೆ ಸೇರಿಸಿದ ಪೊಲೀಸರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ: ದೇವಾಲಯದ ಬಳಿ ಮಗಳೊಂದಿಗೆ ಪಾರ್ವತಿ ಭಿಕ್ಷೆ ಬೇಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮಗುವಿನ ಕೈಗೆ ₹ 10 ನೀಡಿ, ಟೀ ಕುಡಿಸಿ ಮಗುವನ್ನು ಸಾಕಲು ನೀಡುವೆಯಾ ಎಂದು ಕೇಳಿದ್ದನು. ಇದರಿಂದ ಭಯಗೊಂಡ ಭಿಕ್ಷುಕಿ ಓಡಿ ಹೋಗಿ ರಥದ ಗಾಲಿ ಬಳಿ ಮಲಗಿದ್ದಳು. ಎಚ್ಚರವಾದಾಗ ಮಗು ಬಳಿ ಇರಲಿಲ್ಲ. ಆಗ ಅವಳು ನನ್ನ ಮಗಳನ್ನು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.

ಬಾಲಮಂದಿರ ಸೇರಿದಎರಡೂ ಮಕ್ಕಳು: 2016ರಲ್ಲಿ ಪಾರ್ವತಿಯ 2 ವರ್ಷದ ಗಂಡು ಮಗುವನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು. ಆಗ ತನಿಖೆ ನಡೆಸಿದ ಪೊಲೀಸರು ಮಕ್ಕಳ ಕಳ್ಳರ ಜಾಲವನ್ನು ಭೇದಿಸಿ, ಬಾಲಕನನ್ನು ರಕ್ಷಿಸಿ ಮೈಸೂರಿನ ಬಾಲ ಮಂದಿರದಲ್ಲಿ ಇರಿಸಿದ್ದರು. ಮಗಳನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಿದ್ದರಿಂದ ಎರಡೂ ಮಕ್ಕಳು ಬಾಲ ಮಂದಿರ ಸೇರಿದಂತಾಗಿದೆ.

ಕಾರ್ಯಾಚರಣೆಯಲ್ಲಿದ್ದ ನಗರ ಪೊಲೀಸ್ ಠಾಣೆಯ ಅಜಯ್, ಸುನೀಲ್ ಕುಮಾರ್, ಕೃಷ್ಣ, ಪ್ರಕಾಶ್, ನಳಿನಾಕ್ಷಿ, ಪವಿತ್ರಾ, ನವೀನ್ ಹಾಗೂ ನಾಗೇಂದ್ರ ಅವರ ಕಾರ್ಯವನ್ನು ಸಿ.ಪಿ.ಐ. ಲಕ್ಷ್ಮಿಕಾಂತ್ ತಳವಾರ್ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT