ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ನಾದರೂ ಎಚ್ಚೆತ್ತುಕೊಳ್ಳಿ: ಮನೆಯಲ್ಲೇ ಸುರಕ್ಷಿತರಾಗಿರಿ’

Last Updated 10 ಮೇ 2021, 3:43 IST
ಅಕ್ಷರ ಗಾತ್ರ

ಮೈಸೂರು: ಎರಡನೇ ಸುತ್ತಿನ ಲಾಕ್‌ಡೌನ್‌ ಶುರುವಾಗಿದೆ. ಆದರೂ, ಕೋವಿಡ್‌ನ ಎರಡನೇ ಅಲೆ ಮಾತ್ರ ನಿಯಂತ್ರಣಕ್ಕೆ ಬಾರದಾಗಿದೆ.

ದಿನದಿಂದ ದಿನಕ್ಕೆ ವೈರಸ್‌ ಶರವೇಗದಲ್ಲಿ ಸಮುದಾಯಕ್ಕೆ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಅಹೋರಾತ್ರಿ ಶ್ರಮಿಸಿದರೂ ಫಲ ಸಿಗದಾಗಿದೆ. ಈ ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವ ಕೀಲಿ ಕೈ ಇದೀಗ ಜನರ ಬಳಿಯೇ ಉಳಿದಿದೆ.

ಸಾಮಾನ್ಯ ಜನರ ಪ್ರಜ್ಞಾಪೂರ್ವಕ ನಡೆಯಿಂದ ಮಾತ್ರ ಕೋವಿಡ್‌–19 ವಿರುದ್ಧ ಗೆಲ್ಲಬಹುದಾಗಿದೆ. ಮೊದಲ ಅಲೆ ಹೊಸತಾದರೂ ಇಷ್ಟೊಂದು ಭಯ ಹುಟ್ಟಿಸಿರಲಿಲ್ಲ. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವ ಸಮೂಹ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನಿತ್ಯವೂ ನನ್ನ ಕಣ್ಣುಗಳಿಂದಲೇ ನೋಡುತ್ತಿರುವುದಕ್ಕೆ ಈ ಮಾತುಗಳನ್ನು ಹೇಳುತ್ತಿರುವೆ. ಮೃತರ ಕುಟುಂಬದವರ ಆಕ್ರಂದನ ಕೇಳಲಾಗುತ್ತಿಲ್ಲ.

ದಿನಕ್ಕೊಂದು ಹೊಸ ಆಸ್ಪತ್ರೆ ಉದ್ಘಾಟನೆಯಾದರೂ ಚಿಕಿತ್ಸೆಗಾಗಿ ಹಾಸಿಗೆ ಸಿಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಬಸವಳಿದಿದ್ದಾರೆ. ಇದೀಗ ಯಾರೊಬ್ಬರ ಕೈನಲ್ಲೂ ಪರಿಸ್ಥಿತಿಯಿಲ್ಲ. ಮಿತಿ ಮೀರಿದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಲೇಬೇಕಿದೆ.

ಲಾಕ್‌ಡೌನ್‌ ಇರುವುದರಿಂದ ಅನಗತ್ಯವಾಗಿ ಮನೆಯಿಂದ ಹೊರ ಬರಲೇಬೇಡಿ. ಮೂರನೇ ಅಲೆಯ ಅಪಾಯವೂ ಈಗಾಗಲೇ ಕರೆ ಗಂಟೆಯಾಗಿ ಎಚ್ಚರಿಸುತ್ತಿದೆ. ತಾಲ್ಲೂಕು ಕೇಂದ್ರಗಳಲ್ಲೂ ಹಾಸಿಗೆ ಸಿಗದಾಗಿವೆ. ಇನ್ನಾದರೂ ನಿಮ್ಮ ಜೀವದ ಎಚ್ಚರಿಕೆ ನಿಮ್ಮದೇ ಆಗಿರಲಿ. ಕೋವಿಡ್‌–19ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ.

ಲಾಕ್‌ಡೌನ್‌ ಇದ್ದರೂ ಅಗತ್ಯ ಸೇವೆಗಳಿಗೆ ಅಡ್ಡಿಯಿಲ್ಲ. ಆದ್ದರಿಂದ ಒಂದೇ ಬಾರಿಗೆ ಬೀದಿಗಿಳಿಯಬೇಡಿ. ನಿಧಾನವಾಗಿಯೇ ಅಂಗಡಿಗಳಿಗೆ ತೆರಳಿ, ಬೇಕಾದ ವಸ್ತು ಖರೀದಿಸಿಕೊಂಡು ಮನೆಗೆ ಬನ್ನಿ. ಜನದಟ್ಟಣೆಗೆ ನೀವೇ ಕಾರಣರಾಗಬೇಡಿ. ಬೇಸಿಗೆಯ ಉರಿ ಬಿಸಿಲಿನಲ್ಲೂ ನಿಮಗಾಗಿ ಪಿಪಿಇ ಕಿಟ್‌ ಧರಿಸಿ ಅಹೋರಾತ್ರಿ ಶ್ರಮಿಸುತ್ತಿರುವ ನಮ್ಮ ಪರಿಶ್ರಮಕ್ಕೆ ಕಿಂಚಿತ್‌ ಗೌರವ ಕೊಡಿ ಸಾಕು.

(ಪ್ರಮೀಳಾ ಅವರು ಪಿಕೆಟಿಬಿ ಆಸ್ಪತ್ರೆಯ ಹಿರಿಯ ಶುಶ್ರೂಷಕ ಅಧಿಕಾರಿ)

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT