ಮೈಸೂರು: ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬೇರೆಯವರಿಗೆ ಸೇರಿದ ಭೂಮಿಯನ್ನು ಮಾರಾಟ ಮಾಡಿ, ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಪಡೆದು ವಂಚಿಸಿದ 6 ಮಂದಿಯನ್ನು ಅಶೋಕಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯೋಗೇಶ್, ಮಂಜು, ಮಹಾಲಿಂಗ, ರಾಜೇಶ್ವರಿ, ಭಾಗ್ಯಮ್ಮ, ಮತ್ತು ಕಾಶಿರೆಡ್ಡಿ ವೇದಾವತಿ ಬಂಧಿತರು.
ಏನಿದು ಪ್ರಕರಣ?: ಇಲ್ಲಿನ ಶ್ರೀರಾಂಪುರದ ನಿವಾಸಿಗಳಾದ ಶ್ಯಾಮಲಾ ಮತ್ತು ಇಂದ್ರಮ್ಮ ಎಂಬುವವರಿಗೆ ಸೇರಿದ ಶ್ರೀರಾಂಪುರದ 4.36 ಎಕರೆ ಜಮೀನು ಮಹೇಶ್ ಎಂಬವವರಿಗೆ ‘ಜಿಪಿಎ’ ಆಗಿರುತ್ತದೆ. ಇವರಲ್ಲಿ 2018ರಲ್ಲಿ ಇಂದ್ರಮ್ಮ ಅವರು ನಿಧನರಾಗುತ್ತಾರೆ. ಈ ಮಾಹಿತಿ ತಿಳಿದ ಮಹಾಲಿಂಗ ಎಂಬ ಆರೋಪಿಯು ಯೋಗೇಶ್ ಮತ್ತು ಮಂಜು ಅವರಿಗೆ ಈ ಕುರಿತ ದಾಖಲಾತಿಗಳನ್ನು ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಸಂಚು ನಡೆಸುತ್ತಾನೆ.
ರಾಜೇಶ್ವರಿ ಹಾಗೂ ಭಾಗ್ಯಮ್ಮ ಎಂಬ ಮಹಿಳೆಯರನ್ನು ಅಸಲಿ ಮಾಲೀಕರಾದ ಶ್ಯಾಮಲಾ ಹಾಗೂ ಇಂದ್ರಮ್ಮ ಅವರೆಂದು ಬಿಂಬಿಸಿ, ಅವರ ಹೆಸರಿನಲ್ಲಿ ಪಾನ್‌ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರೆ ದಾಖಲಾತಿಗಳನ್ನು ಸೃಷ್ಟಿಸುತ್ತಾರೆ. ನಂತರ, ಈ ಜಮೀನನನ್ನು ಹಲವು ಮಂದಿಗೆ ಮಾರಾಟ ಮಾಡುತ್ತಾರೆ. ಜತೆಗೆ, ಆಂಧ್ರಪ್ರದೇಶದ ಕಡೂರಿನ ವಸುಮತಮ್ಮ ಮತ್ತು ಕಾಶಿರೆಡ್ಡಿ, ವೇದಾವತಿ ಎಂಬುವವರೊಂದಿಗೆ ಎಸ್‌ಬಿಐ ನೆಲ್ಲೂರು ಶಾಖೆಯಲ್ಲಿ ಒಟ್ಟು ₹ 4 ಕೋಟಿ ಸಾಲ ಪಡೆದುಕೊಂಡಿರುತ್ತಾರೆ.
ಸಾಲ ಪಾವತಿಸದೇ ಇದ್ದಾಗ ಮೂಲ ‘ಜಿಪಿಎ’ ಹೊಂದಿದ ಮಹೇಶ್ ಅವರಿಗೆ ಬ್ಯಾಂಕಿನಿಂದ ನೋಟಿಸ್ ಬರುತ್ತದೆ. ಆಗ ಬೆಚ್ಚಿಬಿದ್ದ ಇವರು ಅಶೋಕಪುರಂ ಠಾಣೆಗೆ ದೂರು ನೀಡುತ್ತಾರೆ.
ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರು ಪ್ರಕರಣದ ತನಿಖೆಯ ಹೊಣೆಯನ್ನು ಇನ್‌ಸ್ಪೆಕ್ಟರ್ ಬಿ.ಎಸ್.ಪ್ರಕಾಶ್ ಅವರಿಗೆ ವಹಿಸುತ್ತಾರೆ. ತನಿಖೆ ಕೈಗೊಂಡ ಪೊಲೀಸರು ಆಂಧ್ರಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಮಹದೇವಯ್ಯ, ಆನಂದ್, ರಾಘವೇಂದ್ರ, ಶಿವಪ್ರಕಾಶ್, ಮಹೇಶ್, ಸಂದೀಪ್, ನಿತೀಶ್, ಶೈಲಾಜು, ವಸಂತ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.