ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘು ಸೋಲಿಗೆ ಬಿಜೆಪಿಗರೇ ಕಾರಣ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

Last Updated 16 ಡಿಸೆಂಬರ್ 2021, 3:46 IST
ಅಕ್ಷರ ಗಾತ್ರ

ಮೈಸೂರು: ‘ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಸೋತಿರುವುದು ವೈಯಕ್ತಿಕವಾಗಿ ಬೇಸರ ತಂದಿದೆ. ಹಿಂದುಳಿದ ವರ್ಗಕ್ಕೆ ಸೇರಿರುವ ಅವರ ಸೋಲಿಗೆ ಬಿಜೆಪಿಯವರೇ ಪ್ರಮುಖ ಕಾರಣ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ‘ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ. ಬಿಜೆಪಿಯವರು ಮೇಲ್ವರ್ಗಕ್ಕೆ ಸೇರಿದ್ದ ಅಭ್ಯರ್ಥಿಯನ್ನು ನಿಲ್ಲಿಸಿದ್ದರೆ, ಈ ರೀತಿ ಚುನಾವಣೆ ಎದುರಿಸುತ್ತಿದ್ದರೇ ಎಂಬುದು ಕಾಂಗ್ರೆಸ್‌ನ ಪ್ರಶ್ನೆ’ ಎಂದರು.

‘ಸಾಮಾಜಿಕ ನ್ಯಾಯ, ಅವಕಾಶ ಇದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ. ಬಿಜೆಪಿಯಲ್ಲಿ ಇಲ್ಲ. ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ನಿಲ್ಲಿಸಿ, ಸೋಲಿಸುವ ಕೆಲಸ ಮಾಡಿದ್ದಾರೆ. ತಲೆ ಮೇಲೆ ಕಲ್ಲು ಹಾಕಿದ್ದಾರೆ’ ಎಂದು ದೂರಿದರು.

‘ನಾವು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ಅವರ ನಾಮಪತ್ರ ತಿರಸ್ಕರಿಸುವಂತೆ ಬಿಜೆಪಿಯವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ರಘು ಮೂಲಕ ಆ ಕೆಲಸವನ್ನು ಬಿಜೆಪಿಯವರೇ ಮಾಡಿಸಿದ್ದರು. ದಲಿತ ಅಭ್ಯರ್ಥಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿರುವುದು ಸ್ಪಷ್ಟವಾಗಿದೆ. ಅದರಿಂದ ದಲಿತರು ಬಿಜೆಪಿಗೆ ವಿರುದ್ಧವಾಗಿ ನಿಂತರು’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅದು ಒಕ್ಕಲಿಗೆ ಸಮುದಾಯದ ಅಸಮಾಧಾನಕ್ಕೆ ಕಾರಣವಾಯಿತು. ಮತದಾರರು ಎರಡನೇ ಪ್ರಾಶಸ್ತ್ಯದ ಮತವನ್ನೂ ಬಿಜೆಪಿಯವರಿಗೆ ಕೊಡಲಿಲ್ಲ’ ಎಂದು ವಿಶ್ಲೇಷಿಸಿದರು.

‘ಜೆಡಿಎಸ್‌ ನಿರ್ನಾಮವಾದರೆ ಅದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರೇ ಕಾರಣ. ಕೋಮುವಾದಿ ಬಿಜೆಪಿ ಜತೆ ಕೈಜೋಡಿಸಿದರೆ ಸಂಪೂರ್ಣ ನಾಶ ಆಗುವುದರಲ್ಲಿ ಅನುಮಾನವಿಲ್ಲ. 2015ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ನಾಲ್ಕು ಸ್ಥಾನಗಳು ಲಭಿಸಿದ್ದವು. ಈ ಬಾರಿ ಒಂದು ಸ್ಥಾನ ಮಾತ್ರ ಸಿಕ್ಕಿದೆ. ನಿಮ್ಮ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಡ್ಯದಲ್ಲೇ ಸೋತಿದ್ದೀರಿ. ಒಕ್ಕಲಿಗ ಸಮುದಾಯವು ಜೆಡಿಎಸ್‌ ಜತೆಗಿದ್ದಾರೆ ಎಂಬ ಭ್ರಮೆ ಬಿಟ್ಟುಬಿಡಿ’ ಎಂದರು.

ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಎಂ.ಶಿವಣ್ಣ, ಬಿ.ಎಂ.ರಾಮು, ಗಿರೀಶ್‌ ಪಾಲ್ಗೊಂಡರು.

‘ಫೆ.14ರ ಬಳಿಕ ಸಿ.ಎಂ ಬದಲು’: ‘ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾಗುವುದು ಖಚಿತ. ಬಸವರಾಜ ಬೊಮ್ಮಾಯಿ ಅವರನ್ನು ಫೆ.14ರ ಬಳಿಕ ಬದಲಾಯಿಸಲು ಬಿಜೆಪಿ ಹೈಕಮಾಂಡ್‌ ಈಗಾಗಲೇ ನಿರ್ಧರಿಸಿದೆ’ ಎಂದು ಲಕ್ಷ್ಮಣ ಹೇಳಿದರು.

‘ರಾಜ್ಯದಲ್ಲಿ ಮೂವರನ್ನು ಸಿ.ಎಂ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಬಿ.ಎಸ್‌.ಯಡಿಯೂರಪ್ಪ ಬಳಿಕ ಇದೀಗ ಬೊಮ್ಮಾಯಿ ಆಗಿದ್ದಾರೆ. ಅವರನ್ನೂ ಕೆಳಗಿಳಿಸಿ ಒಬ್ಬ ಡಮ್ಮಿ ವ್ಯಕ್ತಿಯನ್ನು ಕೂರಿಸಲಿದ್ದಾರೆ. ನಮಗೆ ದೆಹಲಿಯಿಂದಲೇ ಮಾಹಿತಿ ದೊರೆಯುತ್ತಿದೆ. ಬಿಜೆಪಿಯವರೇ ಆ ಮಾಹಿತಿ ಕೊಡುತ್ತಿದ್ದಾರೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT