ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ ರದ್ದಿ ಕಾಗದ, ಅದಕ್ಕೆ ಬೆಲೆ ಇಲ್ಲ‌: ಕೆ.ಎಸ್‌.ಈಶ್ವರಪ್ಪ

Last Updated 1 ಡಿಸೆಂಬರ್ 2021, 18:13 IST
ಅಕ್ಷರ ಗಾತ್ರ

ಮೈಸೂರು: ‘ಜಾತಿ ಜನಗಣತಿ ವರದಿ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಜೊತೆ ಮಾತನಾಡಿದ್ದೇನೆ. ಸಂಬಂಧಪಟ್ಟ ಸದಸ್ಯ ಕಾರ್ಯದರ್ಶಿಯೇ ಆ ವರದಿಗೆ ಸಹಿ ಮಾಡಿಲ್ಲ. ಅದೊಂದು ರದ್ದಿ ಕಾಗದ. ಅದಕ್ಕೆ ಯಾವುದೇ ಬೆಲೆ ಇಲ್ಲ‌’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಆಯೋಗಕ್ಕೆ ಸಮಯ ನಿಗದಿಪಡಿಸಲು ನಮಗೆ ಅಧಿಕಾರ ಇಲ್ಲ. ಅದು ಸ್ವಾಯತ್ತೆ ಸಂಸ್ಥೆ. ಜಾತಿಗಣತಿ ವರದಿಗೆ ಒಂದು ರೂಪ ಕೊಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ವರದಿ ಸರಿ ಇದ್ದರೆ ಹೊರಗೆ ತರಲಿ, ಇಲ್ಲವೇ ಮರುಸಮೀಕ್ಷೆ ಮಾಡಿ ಹೊಸದಾಗಿ ವರದಿ ರಚಿಸಲಿ. ವರದಿ ಸಲ್ಲಿಸಿದ ತಕ್ಷಣ ಅದನ್ನು ಜಾರಿ ಮಾಡುವ ಹೊಣೆ ಸರ್ಕಾರದ್ದು. ಸಿದ್ದರಾಮಯ್ಯ ರೀತಿ ಯಾರೂ ಮೋಸ ಮಾಡಬಾರದು ಅಷ್ಟೆ’ ಎಂದರು.

‘ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ಅವರಿಗೆ ಅಧಿಕಾರವೂ ಬೇಕು, ಹಿಂದುಳಿದ ವರ್ಗ ಹಾಗೂ ದಲಿತರ ಹೆಸರೂ ಬೇಕು. ಹೀಗಾಗಿ, ಈ ಸಮುದಾಯದವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆದರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು’ ಎಂದು ತಿಳಿಸಿದರು.

‘ವಿರೋಧ ಪಕ್ಷದ ನಾಯಕ ಅಥವಾ ಮುಂದೆ ಮುಖ್ಯಮಂತ್ರಿ ಸ್ಥಾನ ಕೊಡಲ್ಲವೆಂದರೆ ಸಿದ್ದರಾಮಯ್ಯ ಒಂದು ದಿನವೂ ಕಾಂಗ್ರೆಸ್‌ನಲ್ಲಿ ಇರಲ್ಲ. ಅಧಿಕಾರದ ಲಾಲಸೆಗಿರುವ ವ್ಯಕ್ತಿ ಹಾಗೂ ಸ್ವಾರ್ಥಿ. ದೊಡ್ಡ ಸುಳ್ಳುಗಾರ. ಅವರು ತಮ್ಮ ಇಡೀ ಜೀವನದಲ್ಲಿ ಜನರನ್ನು ದಾರಿ ತಪ್ಪಿಸಿದರು. ಎಚ್‌.ಡಿ.ದೇವೇಗೌಡರಿಗೆ ಮೋಸ ಮಾಡಿ ಹೊರಬಂದರು. ಜನ ಜಾಗೃತರಾಗಿದ್ದು, ಇಂಥ ವ್ಯಕ್ತಿಗಳ ರಾಜಕೀಯ ಬಹಳ ದಿನ ಉಳಿಯುವುದಿಲ್ಲ’ ಎಂದು ಟೀಕಿಸಿದರು.

ಜಿ.ಟಿ.ದೇವೇಗೌಡ ಜೊತೆ ಮತ್ತೆ ಸಿದ್ದರಾಮಯ್ಯ ಸ್ನೇಹ ಸಾಧಿಸುತ್ತಿರುವುದು ಬಿಜೆಪಿ ಮೇಲೆ ಪರಿಣಾಮ ಬೀರಲಿದೆಯೇ ಎಂಬುದಕ್ಕೆ, ‘ಸಿದ್ದರಾಮಯ್ಯ ಅವರಿಗೆ ಈಗ ಗತಿ ಇಲ್ಲ. ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸಿದರೆ ಜನ ಸೋಲಿಸುತ್ತಾರೆ. ಹೀಗಾಗಿ, ಹೇಗಾದರೂ ಮಾಡಿ ತಮ್ಮನ್ನು ರಕ್ಷಿಸಿ ಎಂದು ಜಿ.ಟಿ.ದೇವೇಗೌಡರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸ್ನೇಹ ಬೆಳೆಸಿದ್ದಾರೆ. ಜಿ.ಟಿ.ದೇವೇಗೌಡರು ಅವಕಾಶವಾದಿ ರಾಜಕಾರಣಿ ಆಗಬಾರದು’ ಎಂದರು.

ಪ್ರಧಾನಿ ಮೋದಿ ಹಾಗೂ ಎಚ್‌.ಡಿ.ದೇವೇಗೌಡರ ಭೇಟಿ ಕುರಿತು, ‘ಇದೊಂದು ಸಂತೋಷದ ವಿಚಾರ. ಒಂದು ಪಕ್ಷದ ರಾಜಕಾರಣಿ ಮತ್ತೊಂದು ಪಕ್ಷದ ರಾಜಕಾರಣಿಗೆ ಗೌರವ ಕೊಡಬೇಕು ಎಂಬುದನ್ನು ಈ ಭೇಟಿ ತೋರಿಸಿದೆ. ಇದನ್ನು ಸಿದ್ದರಾಮಯ್ಯ ಕೂಡ ಗಮನಿಸಿದ್ದಾರೆ ಎಂಬುದಾಗಿ ಭಾವಿಸುತ್ತೇನೆ. ಇದನ್ನು ಅವರು ಗಮನಿಸಿದ್ದಲ್ಲಿ ಮೋದಿ ಅವರನ್ನು ಏಕವಚನದಲ್ಲಿ ಕರೆಯುವುದು, ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಉಗ್ರಗಾಮಿ ಎಂದು ಕರೆಯುವುದು, ವಾಪಸ್‌ ಬೈಯಿಸಿಕೊಳ್ಳುವುದು ತಪ್ಪುತ್ತದೆ’ ಎಂದು ಪ್ರತಿಕ್ರಿಯಿಸಿದರು.

‌‘ಬಿಜೆಪಿ–ಜೆಡಿಎಸ್‌ ಅಕ್ರಮ ಸಂಬಂಧವಲ್ಲ’

ಮೈಸೂರು: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಂಬಲಿಸುವಂತೆ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ ಅವರಲ್ಲಿ ಕೋರಿಕೊಂಡಿದ್ದಾರೆ. ಅದು ಅಕ್ರಮ ಸಂಬಂಧವೂ ಅಲ್ಲ, ಒಳಒಪ್ಪಂದವೂ ಅಲ್ಲ. ಎಲ್ಲಿ ಜೆಡಿಎಸ್‌ ಸ್ಪರ್ಧಿಸಿಲ್ಲವೋ ಅಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಬಹಿರಂಗವಾಗಿಯೇ ಸಹಕಾರ ಕೋರಿದ್ದಾರೆ’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಬ್ರಾಹ್ಮಣರ ಪಕ್ಷವೆಂದು ಕರೆಯಲಾಗುತ್ತಿದ್ದ ಬಿಜೆಪಿಯ ಜೊತೆಗೆ ದಲಿತರು, ಹಿಂದುಳಿದ ವರ್ಗದವರು ಗುರುತಿಸಿಕೊಂಡು ಕಾಂಗ್ರೆಸ್‌ ಪಕ್ಷವನ್ನು ದೂರವಿಡುತ್ತಿರುವುದರಿಂದಲೇ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಗೆಲ್ಲುತ್ತಿದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT