ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ನಗರಸಭೆ ಬಿಜೆಪಿ ತೆಕ್ಕೆಗೆ

2 ವರ್ಷದ ನಂತರ ಅಧಿಕಾರ ಭಾಗ್ಯ: ಬಿಜೆಪಿಗೆ ಮೂವರು ಪಕ್ಷೇತರರ, ಜೆಡಿಎಸ್‌ ಸದಸ್ಯನ ಬೆಂಬಲ
Last Updated 3 ನವೆಂಬರ್ 2020, 2:06 IST
ಅಕ್ಷರ ಗಾತ್ರ

ನಂಜನಗೂಡು: ನಂಜನಗೂಡು ನಗರಸಭೆಗೆ ಸೋಮವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ತನ್ನ 17 ಮತದೊಂದಿಗೆ ಮೂವರು ಪಕ್ಷೇತರರು ಹಾಗೂ ಒಬ್ಬರು ಜೆಡಿಎಸ್ ಸದಸ್ಯರ ಮತವನ್ನು ಪಡೆಯುವುದರೊಂದಿಗೆ ಅಧಿಕಾರದ ಗದ್ದುಗೆ ಏರಿ ಬೀಗಿತು.

ಉಪ ವಿಭಾಗಾಧಿಕಾರಿ ವೆಂಕಟರಾಜು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಎಚ್.ಎಸ್.ಮಹದೇವಸ್ವಾಮಿ ಹಾಗೂ ನಾಗವೇಣಿ ಶಂಕರಪ್ಪ 21 ಮತಗಳನ್ನು ಪಡೆದು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆರಾಗಿ ಆಯ್ಕೆಯಾದರು.

ಬಿಜೆಪಿಯ 15 ಸದಸ್ಯರ ಜೊತೆಗೆ ಸಂಸದ ಶ್ರೀನಿವಾಸ ಪ್ರಸಾದ್, ಶಾಸಕ ಬಿ.ಹರ್ಷವರ್ಧನ್ ಮತವು ಸೇರಿದಂತೆ ಒಟ್ಟು 17 ಮತಗಳೊಂದಿಗೆ ಜೆಡಿಎಸ್ ಸದಸ್ಯ ಗಿರೀಶ್ ಬಾಬು ಪಕ್ಷೇತರ ಸದಸ್ಯರಾದ 23 ವಾರ್ಡ್‌ನ ಎನ್.ಎಸ್.ಯೋಗೇಶ್, 5ನೇ ವಾರ್ಡ್‌ನ ಎನ್.ಯೋಗೇಶ್ ಹಾಗೂ 25 ನೇ ವಾರ್ಡ್‌ನ ಮಂಗಳಮ್ಮ ಸೇರಿದಂತೆ 21 ಮತಗಳನ್ನು ಪಡೆದರು.

ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ವೇತಲಕ್ಷ್ಮಿ ತಲಾ 10 ಮತಗಳನ್ನು ಪಡೆದು ಪರಾಭವಗೊಂಡರು.

ಜೆಡಿಎಸ್‌ನ ಸದಸ್ಯ ಖಾಲೀದ್ ಅಹಮ್ಮದ್ ತಟಸ್ಥವಾಗಿ ಉಳಿದರೆ, ಮತ್ತೊಬ್ಬ ಸದಸ್ಯೆ ರೆಹನಾಬಾನು ಗೈರು ಹಾಜರಾಗಿದ್ದರು.

ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್, ನಗರಸಭೆ ಆಯುಕ್ತ ಕರಿ ಬಸವಯ್ಯ ಉಪಸ್ಥಿತರಿದ್ದರು.

ಮೂಲ ಸೌಕರ್ಯಕ್ಕೆ ಆದ್ಯತೆ: ಅಧ್ಯಕ್ಷರಾಗಿ ಆಯ್ಕೆಯಾದ ಮಹದೇವಸ್ವಾಮಿ ಮಾತನಾಡಿ, ‘ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆ, ನೂತನ ನಗರಸಭೆ ಕಟ್ಟಡ ನಿರ್ಮಾಣ, ವಿದ್ಯುತ್ ಚಿತಾಗಾರ ಕಾಮಗಾರಿಗಳನ್ನು ನನ್ನ ಅಧಿಕಾರವಧಿಯಲ್ಲಿ ಸಂಸದ ಶ್ರೀನಿವಾಸ ಪ್ರಸಾದ್, ಶಾಸಕ ಬಿ.ಹರ್ಷವರ್ಧನ್ ಹಾಗೂ ಸದಸ್ಯರ ಸಹಕಾರ ಪಡೆದು ಪೂರ್ಣಗೊಳಿಸುತ್ತೇನೆ. ನಗರಸಭೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ಕ್ರಮವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ‘ನಗರಸಭೆಗೆ ಅಗತ್ಯವಿರುವ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚು ಬಹುಮತದಿಂದ ಆಯ್ಕೆಯಾಗಿದ್ದ ಹಿಂದುಳಿದ ಉಪ್ಪಾರ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಪಕ್ಷೇತರ ಸದಸ್ಯರು ಬೆಂಬಲ ನೀಡಿದ್ದಾರೆ. ನಗರಸಭೆಯ ಎಲ್ಲ ಸದಸ್ಯರ ಬೆಂಬಲದೊಂದಿಗೆ ಉತ್ತಮ ಆಡಳಿತ ನೀಡಲಾಗುವುದು’ ಎಂದು ಹೇಳಿದರು.

ಬಿ.ಜೆ.ಪಿ. ಅಭ್ಯರ್ಥಿಗಳ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ಬಿ.ಜೆ.ಪಿ. ಕಾರ್ಯಕರ್ತರು ಶಾಸಕ ಹರ್ಷವರ್ಧನ್ ರವರನ್ನು ಹೆಗಲ ಮೇಲೆ ಹೊತ್ತು ಜಯಕಾರ ಹಾಕಿದರು. ವಿಜೇತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ತಾ.ಪಂ. ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಸದಸ್ಯ ಸಿ.ಎಂ.ಮಹದೇವಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಹೊರಳವಾಡಿ ಮಹೇಶ್, ಮುಖಂಡರಾದ ಚಿಕ್ಕರಂಗನಾಯ್ಕ, ಶ್ರೀನಿವಾಸ ರೆಡ್ಡಿ, ಶ್ರೀಕಂಠ, ಬಾಲಚಂದ್ರ, ಕೃಷ್ಣಪ್ಪಗೌಡ, ಚಿಕ್ಕಯ್ಯನ ಛತ್ರದ ಸಿ.ಎನ್ ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT