ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಭಾಷೆಗಳಿಂದಲೇ ಕನ್ನಡಕ್ಕೆ ಸೊಬಗು: ಸಿ. ಕಾರ್ಯಪ್ಪ

ಕನ್ನಡ, ತುಳು, ಕೊಂಕಣಿ ಭಾಷೆಯ ತ್ರಿಭಾಷಾ ರಂಗನಾಟಕಗಳು ಕೃತಿ ಬಿಡುಗಡೆ
Last Updated 14 ಫೆಬ್ರುವರಿ 2021, 4:03 IST
ಅಕ್ಷರ ಗಾತ್ರ

ಮೈಸೂರು: ಉಪಭಾಷೆಗಳಿಂದಲೇ ಕನ್ನಡಕ್ಕೆ ಒಂದು ಬಗೆಯ ಸೊಬಗು ಇದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

ನಟನ ರಂಗಶಾಲೆಯಲ್ಲಿ ಶನಿವಾರ ನಡೆದ ಕಾಸರಗೋಡು ಚಿನ್ನಾ ಅವರ ‘ತ್ರಿಭಾಷಾ ರಂಗನಾಟಕಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ತುಳು, ಕೊಂಕಣಿ, ಕೊಡವ ಹೀಗೆ ಉಪಭಾಷೆಗಳು ಇರಬೇಕು. ಇಂತಹ ವೈವಿಧ್ಯತೆ ಇದ್ದಾಗಲೇ ಪ್ರಧಾನ ಭಾಷೆಗೆ ಮೆರುಗು ಇರುತ್ತದೆ. ಉಪಭಾಷೆಗಳನ್ನು ಅವಹೇಳನ ಮಾಡುವ ಪ್ರವೃತ್ತಿ ಸರಿಯಲ್ಲ ಎಂದು ಅವರು ಹೇಳಿದರು.

ಕಾಸರಗೋಡಿನಂತಹ ಪ್ರದೇಶ ದಲ್ಲಿದ್ದುಕೊಂಡು ಕನ್ನಡದ ಕೆಲಸ ಮಾಡುತ್ತಿರುವ ಕಾಸರಗೋಡು ಚಿನ್ನ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಕೇರಳದ ಗಡಿ ಭಾಗದಲ್ಲಿ ಕೊಂಕಣಿ ಮತ್ತು ಕನ್ನಡ ಭಾಷೆ ಬೆಳೆಸುವುದು ಬಹಳ ಕಷ್ಟಕರವಾದ ಕೆಲಸ. ಪಾತ್ರೆಗಳನ್ನು ಮಾರಾಟ ಮಾಡುವಂತಹ ಇವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದು ಸೋಜಿಗ. ಲಾರಿಯ ಮೇಲೆ ನಾಟಕ ಪ್ರದರ್ಶನ ಮಾಡುವಂತಹ ಅನೇಕ ಹೊಸ ಬಗೆಯ ಪ್ರಯೋಗಗಳನ್ನು ಇವರು ಮಾಡಿದ್ದಾರೆ ಎಂದರು.

ಲೇಖಕ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ, ‘ತ್ರಿಭಾಷಾ ರಂಗನಾಟಕಗಳು’ ಕನ್ನಡ, ತುಳು, ಕೊಂಕಣಿ ಭಾಷೆಗಳ ಸಂಗಮದ ಅಪರೂಪದ ಪುಸ್ತಕ ಇದಾಗಿದೆ. ಇದೊಂದು ಒಳ್ಳೆಯ ಪ್ರಯೋಗ’ ಎಂದು ಶ್ಲಾಘಿಸಿದರು.

ಲೇಖಕ ಕಾಸರಗೋಡು ಚಿನ್ನಾ ಮಾತನಾಡಿ, ‘ನಾನು ಕೊಂಕಣಿ ಅಕಾಡೆಮಿ ಅಧ್ಯಕ್ಷನಾದಾಗ ಬಹಳಷ್ಟು ಮಂದಿ ಸಾಹಿತ್ಯ ಗೊತ್ತಿಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿದರು ಎಂದು ಹೇಳಿದರು. ಹಾಗಾಗಿ, ನಾನು ಸಾಹಿತ್ಯ ಕೃಷಿ ಮಾಡಿದೆ’ ಎಂದು ಹೇಳುತ್ತ ಅವರು ಅನೇಕ ಹಾಸ್ಯಪ್ರಸಂಗಗಳನ್ನು ಉಲ್ಲೇಖಿಸಿ ಪ್ರೇಕ್ಷಕರಲ್ಲಿ ನಗೆಯ ಬುಗ್ಗೆ ಚಿಮ್ಮಿಸಿದರು.

ನಟನ ರಂಗಶಾಲೆಯ ಅಧ್ಯಕ್ಷ ಕೆ.ಎಸ್.ಆನಂದಕುಮಾರ್, ನಟ ಮಂಡ್ಯ ರಮೇಶ್, ಕಲಾವಿದೆ ಶ್ವೇತಾ ಮಾಡಪ್ಪಾಡಿ, ಲೇಖಕ ರವೀಂದ್ರ ಜೋಷಿ ಇದ್ದರು.

ನಾಟಕಕ್ಕೆ ಉಚಿತ ಪ್ರವೇಶ ಇರಬಾರದು– ಅಡ್ಡಂಡ ಕಾರ್ಯಪ್ಪ ಪುನರುಚ್ಚಾರ ನಾಟಕಕ್ಕೆ ಉಚಿತ ಪ್ರವೇಶ ಇರಬಾರದು ಎಂಬ ತಮ್ಮ ಹೇಳಿಕೆಯನ್ನು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಪುನರುಚ್ಚರಿಸಿದರು.

‘ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಟಕಕ್ಕೆ ಉಚಿತ ಪ್ರವೇಶ ಇರಬಾರದು ಎಂದು ಹೇಳಿದ್ದೆ. ಈಗಲೂ ಈ ಹೇಳಿಕೆಗೆ ಬದ್ಧವಾಗಿದ್ದೇನೆ. ಸಿದ್ದರಾಮಯ್ಯ ಒಳ್ಳೆಯ ಉದ್ದೇಶದಿಂದಲೇ ಅಕ್ಕಿ ಕೊಟ್ಟಿದ್ದರು. ಆದರೆ, ಬಹಳಷ್ಟು ಮಂದಿ ಅದನ್ನು ಪಡೆದವರು ಮಾರಾಟ ಮಾಡಿದರು ಎಂದಷ್ಟೆ ಹೇಳಿದ್ದೇ. ಈಗಲೂ ನಿಷ್ಠುರದ ನುಡಿಗಳನ್ನಾಡುತ್ತೇನೆ. ನಿಷ್ಠುರವಾಗಿ ಮಾತನಾಡುವ ಪ್ರೊ.ಕೆ.ಎಸ್.ಭಗವಾನ್ ಅವರಂತಹವರೂ ನಮಗೆ ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT