ಶನಿವಾರ, ಜನವರಿ 18, 2020
26 °C
ಊಟಿಯ ಬಟಾನಿಕಲ್ ಗಾರ್ಡನ್ ಮಾದರಿಯಲ್ಲಿ ₹23.40 ಕೋಟಿ ವೆಚ್ಚದಲ್ಲಿ ಉದ್ಯಾನ

ಸಸ್ಯಕಾಶಿ ನಿರ್ಮಾಣಕ್ಕೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ₹23.40 ಕೋಟಿ ವೆಚ್ಚದಲ್ಲಿ ಊಟಿಯ ಬಟಾನಿಕಲ್ ಗಾರ್ಡನ್ ಮಾದರಿಯಲ್ಲಿ ಸಸ್ಯಕಾಶಿಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಬಿ.ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಶ್ರೀನಿವಾಸ ಪ್ರಸಾದ್ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದಾಗ ಪ್ರವಾಸಿ ಮಂದಿರದ ಬಳಿಯಲ್ಲಿ ಸಸ್ಯಕಾಶಿ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಮಗಾರಿಗೆ ನಿಗದಿಯಾಗಿದ್ದ ಅನುದಾನ ಬಿಡುಗಡೆಯಾಗಿರಲಿಲ್ಲ. ಅನುದಾನ ವಾಪಸ್ ಹೋಗಿತ್ತು. ಸರ್ಕಾರಕ್ಕೆ ಮನವರಿಕೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.

ಇಲ್ಲಿ ಗಾಜಿನ ಮನೆ, ಉದ್ಯಾನ, ಮಕ್ಕಳು ಆಟವಾಡಲು ಆಟಿಕೆಗಳನ್ನು ಅಳವಡಿಸಲಾಗುತ್ತದೆ. ಸಚಿವ ವಿ.ಸೋಮಣ್ಣ ಸಸ್ಯಕಾಶಿ ಅಭಿವೃದ್ಧಿಗೆ ₹10 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ನಗರದ ದೇವರಾಜ ಅರಸು ಸೇತುವೆ ಬಳಿಯಿಂದ ಕಪಿಲಾ ನದಿ ಸ್ನಾನ ಘಟ್ಟದವರೆಗೆ ನದಿಯ ಪ್ರವಾಹದ ನೀರು ನಗರ ಪ್ರದೇಶ ಪ್ರವೇಶಿಸದಂತೆ ತಡೆಗೋಡೆ ನಿರ್ಮಾಣಕ್ಕೆ ₹40 ಕೋಟಿಯಿಂದ ₹50 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಗೋವಿಂದ ರಾಜನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಮುಖಂಡರಾದ ಹೊರಳವಾಡಿ ಮಹೇಶ್, ಕುಂಬರಳ್ಳಿ ಸುಬ್ಬಣ್ಣ, ಬಾಲಚಂದ್ರ, ಚಿಕ್ಕರಂಗನಾಯ್ಕ, ಬಿ.ಎಸ್.ರಾಮು, ಕೆಂಡಗಣ್ಣಪ್ಪ ಅನಂತ, ನಗರಸಭೆ ಸದಸ್ಯರಾದ ಸಿದ್ದರಾಜು, ಮಹದೇವಪ್ರಸಾದ್, ಗಾಯತ್ರಿ, ಮಹದೇವಸ್ವಾಮಿ, ಮೀನಾಕ್ಷಿ ನಾಗರಾಜು, ವಿಜಯಲಕ್ಷ್ಮಿ, ಹಾಗೂ ಮಹದೇವಮ್ಮ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು