ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಭಾರತವೇ ಪ್ರಬುದ್ಧ ಭಾರತ: ಸಾಹಿತಿ ಬರಗೂರು ರಾಮಚಂದ್ರಪ್ಪ

ವಿಚಾರಸಂಕಿರಣದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದನೆ
Last Updated 12 ಆಗಸ್ಟ್ 2022, 11:45 IST
ಅಕ್ಷರ ಗಾತ್ರ

ಮೈಸೂರು: ‘ಜಾತೀಯತೆ ಮೀರಿದ ಬೌದ್ಧಿಕತೆ, ಮತೀಯತೆ ಮೀರಿದ ಮಾನಸಿಕತೆ ಹಾಗೂ ಮಾನವೀಯತೆ–ಅಂತಃಕರಣವೇ ಮುಖ್ಯವಾಗಿರುವ ಬುದ್ಧ ಭಾರತವೇ ‍ಪ್ರಬುದ್ಧ ಭಾರತ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಿಂದ ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಆಯೋಜಿಸಿರುವ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡಿಗೆ... ಪ್ರಬುದ್ಧ ಭಾರತದ ಕಡೆಗೆ’ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ಪ್ರೇರಕ ಬೇರುಗಳು ಬುದ್ಧ ಗುರುವಿನ ಆಶಯಗಳಲ್ಲಿ ಇವೆ. ಇದರ ಆಧಾರದ ಮೇಲೆ, ಮಾನವೀಯ ಮತ್ತು ಕಾರುಣ್ಯದ ಭಾರತ ನಿರ್ಮಾಣವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಸಾಕಾರವಾಗಿದೆಯೇ?:

‘ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆ ಇರುವುದು ಸಾಮಾಜಿಕ ಪ್ರಜಾಪ್ರಭುತ್ವ ಎಂದು ಅಂಬೇಡ್ಕರ್‌ ಹೇಳಿದ್ದರು. ಅವರ ಪರಿಕಲ್ಪನೆಯ ಸಾಮಾಜಿಕ ಸ್ವಾತಂತ್ರ್ಯದ ಸಾಕಾರವಾಗಿದೆಯೇ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು’ ಎಂದರು.

‘ಸ್ವಾತಂತ್ರ್ಯ ಹೋರಾಟ ಒಂದೇ ವಿಚಾರಧಾರೆಯಿಂದ ಬಂದಿದ್ದಲ್ಲ. ಒಂದೇ ರಾಷ್ಟ್ರೀಯಧಾರೆಯೂ ಇರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಸಮಸ್ಯೆಗಳನ್ನು ಮರೆಸಲು ಭಾವನಾತ್ಮಕ ವಿಚಾರ ಮುಂದೆ ತಂದಾಗ, ಜನರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಹೀಗಾಗಿ, ಮೂಲಭೂತವಾದ ದೊಡ್ಡ ಸಮಸ್ಯೆಯಾಗಿದೆ. ಮಾನವೀಯ ಆಶಯಗಳು ಹಾಗೂ ಅಂತಃಕರಣದ ಮೇಲೆ ಹಲ್ಲೆ ನಡೆಸುವ ಎಲ್ಲ ಧರ್ಮಗಳ ಮೂಲಭೂತವಾದವನ್ನೂ ವಿರೋಧಿಸಬೇಕು. ಹೀಗಾಗಿ, ಇದು ಆತ್ಮಾವಲೋಕನದ ಕಾಲವೂ ಹೌದು’ ಎಂದರು.

ಈಗ ಕುರ್ಚಿಯಲ್ಲಿ ಕುಳಿತಿರುವವರಲ್ಲ:

‘ಹುಟ್ಟಿನಿಂದ, ಧರ್ಮದಿಂದ ಅಥವಾ ವಿಚಾರದಿಂದ ನಾವೇನೇ ಇದ್ದರೂ ಒಟ್ಟು ದೇಶದ ಸ್ಥಿತಿ ಬಂದಾಗ ಸಮಾನತೆ–ಸಹಿಷ್ಣುತೆ–ಶಿಕ್ಷಣ ಮುಖ್ಯವೆಂದು ಬದ್ಧವಾಗಿರುವವರೇ ಪ್ರಬುದ್ಧ ಭಾರತದ ನಿಜವಾದ ನೇತಾರರು. ಈಗ ಕುರ್ಚಿ ಮೇಲೆ ಕುಳಿತಿರುವವರಲ್ಲ’ ಎಂದು ವಿಶ್ಲೇಷಿಸಿದರು.

‘ನಮಗೆ ಬೇಕಿರುವುದು ಮೂಲಭೂತವಾದವೋ, ಮಾನವತಾವಾದವೋ? ಮನುವಾದ ಬೇಕೋ, ಮನುಷ್ಯವಾದವೋ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಏಕೆಂದರೆ, ಮನುವಾದವನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳು ನಿರಂತವಾಗಿ ನಡೆಯುವೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಿಂದ ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್‌ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್‌ ಪ್ರಾಸ್ತಾವಿಕ ಮಾತನಾಡಿದರು.

ಬರಗೂರು ವಿಶ್ಲೇಷಣೆ

* ಸಾಮಾಜಿಕ, ಆರ್ಥಿಕ ಚಲನಶೀಲತೆ ಆಗಿರುವುದು ನಿಜ. ಆದರೆ, ಇದು ಯಾವ ದಿಕ್ಕಿನಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ. ದೇಶದ 74ರಷ್ಟು ಸಂಪತ್ತನ್ನು ಶೇ 1ರಷ್ಟು ಜನ ಅನುಭವಿಸುತ್ತಿದ್ದಾರೆ. ಈ ಅಂತರ ಜಾಗತೀಕರಣದ ನಂತರ ಸೃಷ್ಟಿಯಾಗಿದೆ. ಇದೇ ಅಭಿವೃದ್ಧಿಯಾ? ಈ ಕಂದಕವನ್ನು ಮುಚ್ಚುವವರಾರು?

* ಸರ್ಕಾರದ ಅಂಕಿ–ಅಂಶಗಳ ಪ್ರಕಾರ, ನಿರುದ್ಯೋಗ ಪ್ರಮಾಣ ಜಾಸ್ತಿಯಾಗಿದೆ. ಹಸಿವಿನ ಸೂಚ್ಯಂಕ 94ರಿಂದ 100ಕ್ಕೆ ಏರಿದೆ. ಅಭಿವೃದ್ಧಿಯ ಫಲಿತವು ಕಟ್ಟಕಡೆಯವರಿಗೆ ತಲುಪುತ್ತಿಲ್ಲ. ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ಈ ಕಂದಕಗಳು ಹೆಚ್ಚುತ್ತಿರುವುದು ಆತಂಕಕಾರಿ.

* ಮೇಲ್ನೋಟದ ಚಿತ್ರಕ್ಕೂ, ಜನರ ಆಂತರ್ಯದ ಸಂಕಟಗಳಿಗೂ ಇರುವ ಅಂತರದ ಬಗ್ಗೆ ಯೋಚಿಸಬೇಕು. ಸ್ವಾತಂತ್ರ್ಯ ಪೂರ್ವದ ರಾಷ್ಟ್ರೀಯಧಾರೆಗಳು ಸಾಕಾರಗೊಳ್ಳದೆ ಹೋದರೆ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಾಗದು.

* ಮೇಲ್ನೋಟಕ್ಕೆ ಥಳುಕಿನ ಭಾರತ ಕಾಣುತ್ತಿದೆ; ಬೆಳಕಿನ ಭಾರತವಲ್ಲ. ಬೆಳಕಿನ ಭಾರತವು ಪ್ರಜಾಪ್ರಭುತ್ವದ ಪಕ್ವತೆಯಿಂದ ಬರುತ್ತದೆ.

* ಕೇಂದ್ರ ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ ನರೇಗಾಕ್ಕೆ ಶೇ 25.5ರಷ್ಟು, ಗ್ರಾಮೀಣಾಭಿವೃದ್ಧಿಗೆ ಶೇ 10.09ರಷ್ಟು ಮತ್ತು ಆಹಾರ ಸಹಾಯಧನಕ್ಕೆ ಶೇ 28.05ರಷ್ಟು ಅನುದಾನ ಕಡಿಮೆ ಮಾಡಿದೆ. ಹೀಗಿರುವಾಗ, ಕೊರೊನಾ ಸಂದರ್ಭದಲ್ಲಿ ಕೆಲವರಿಗೆ ಶೇ 35ರಷ್ಟು ಸಂಪತ್ತು ಹೆಚ್ಚಾಯಿತಲ್ಲಾ ಆ ಪವಾಡವೇನು, ಇದು ನಿಜವಾದ ಪ್ರಬುದ್ಧ ಭಾರತವಾ?

***

ಇನ್ನೂ ಸವಾಲುಗಳಿವೆ

ಮಹಾನ್‌ ನಾಯಕರು ಅಖಂಡ ಭಾರತಕ್ಕೆ ದುಡಿದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಸಾಧನೆಯಾಗಿದ್ದರೂ ಇನ್ನೂ ಹಲವು ಸವಾಲುಗಳಿವೆ.

–ಪ್ರೊ.ಜಿ.ಹೇಮಂತ್‌ಕುಮಾರ್‌, ಕುಲಪತಿ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT