ಶನಿವಾರ, ಜನವರಿ 23, 2021
26 °C

ಟ್ಯಾಂಕ್‌ನಲ್ಲಿ ಕಾಗೆ ಕಳೇಬರ: ಗ್ರಾಮಸ್ಥರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ತುಂಬಸೋಗೆ ಪಂಚಾಯಿತಿ ವ್ಯಾಪ್ತಿಯ ಜಕ್ಕಹಳ್ಳಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ  ಕಾಗೆಯ ಕಳೇಬರ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಕುಡಿಯುವ ನೀರು ದುರ್ವಾಸನೆ ಬಂದು, ಅನೇಕ ದಿನಗಳ ಬಳಿಕ ನೀರು ಬಾರದಿದ್ದರಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಪಂಚಾಯಿತಿ ಸಿಬ್ಬಂದಿ ಟ್ಯಾಂಕ್ ಪರೀಕ್ಷಿಸಿದಾಗ ಪೈಪ್‍ನೊಳಗೆ ಕಾಗೆಯ ಕಳೇಬರ ಸಿಕ್ಕಿಹಾಕಿಕೊಂಡಿರುವುದು ಬಯಲಾಗಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ದಿನಗಳಿಂದ ಎದುರಾಗಿದ್ದು, ಗ್ರಾಮ ಪಂಚಾಯಿತಿ ಸಮಸ್ಯೆಗೆ ಪರಿಹಾರ ಸೂಚಿಸುವಲ್ಲಿ ವಿಫಲವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿಯೂ ಸರಿಯಾದ ನೀರು ಬರುವುದಿಲ್ಲ. ಟ್ಯಾಂಕ್‍ ಅನ್ನು ಶುಚಿಯಾಗಿ ಇಟ್ಟುಕೊಂಡಿಲ್ಲ’ ಎಂದು ಗ್ರಾಮದ ಮುರಳಿ ಆರೋಪಿಸುತ್ತಾರೆ.

‘ಈ ಹಿಂದೆ ಕಲುಷಿತ ನೀರು ಸೇವಿಸಿ 60ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೀಡಾಗಿದ್ದರು. ಅದೇ ಪರಿಸ್ಥಿತಿ ಮರುಕಳಿಸುವುದು ಬೇಡ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಚಲುವರಾಜು, ಮಹದೇವು ಒತ್ತಾಯಿಸಿದರು.

‘ನೀರಿನ ಟ್ಯಾಂಕ್‍ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಕುಡಿಯುವ ನೀರು ವಾಸನೆ ಬರುತ್ತಿದ್ದು, ಪರಿಶೀಲಿಸಿದಾಗ ಕಾಗೆ ಸತ್ತಿರುವುದು ಪತ್ತೆಯಾಗಿದೆ. ಕೂಡಲೇ ಟೆಂಡರ್ ಪಡೆದವರನ್ನು ಕರೆದು ಟ್ಯಾಂಕ್ ಸ್ವಚ್ಛತೆಗೆ ಸೂಚಿಸಲಾಗಿದೆ’ ಎಂದು ತುಂಬಸೋಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುರಾ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು