ಮಂಗಳವಾರ, ನವೆಂಬರ್ 24, 2020
27 °C
ಮೈಸೂರು ವಿಶ್ವವಿದ್ಯಾಲಯಕ್ಕೊಂದು ಗರಿಮೆಯ ಗರಿ- ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ

ಮೈಸೂರು: ಸಿಇಎಸ್‌ಸಿಕೆ ‘ಮರಳಿ ಮನೆ’ಗೆ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು (ಸಿಇಎಸ್‌ಸಿಕೆ) ಭಾನುವಾರ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಎನ್‌ಸಿಎಚ್‌ಎಸ್‌ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಈ ವೇಳೆ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಕನ್ನಡ ಸೇರಿದಂತೆ ಇತರ ಎಲ್ಲ ಭಾಷೆಗಳು ಇಂಗ್ಲಿಷ್‌ನ ಪ್ರಭಾವಕ್ಕೆ ಒಳಪಟ್ಟಿವೆ. ಇಂಗ್ಲಿಷ್ ಭಾಷೆಯು‌ ಅನ್ನದ ಭಾಷೆ ಎಂಬ ಭ್ರಮೆಯನ್ನು ಮೆಕಾಲೆಯ ಶಿಕ್ಷಣ ನೀತಿ ಸೃಷ್ಟಿಸಿದೆ. ಇಂಗ್ಲಿಷ್‌ ಹೊರತಾದ ಸ್ವತಂತ್ರ ಅಸ್ಮಿತೆಯನ್ನು ಕಂಡುಕೊಳ್ಳಬೇಕಿದೆ’ ಎಂದರು.

ಭಾರತೀಯ ಭಾಷಾ ಸಂಸ್ಥಾನವು ಎಲ್ಲ ವಿಶ್ವವಿದ್ಯಾಲಯಗಳೊಂದಿಗೆ ನಿಕಟ ಸಂಬಂದ ಹೊಂದಬೇಕು. ಅಲ್ಲಿನ ಪ್ರಾಧ್ಯಾಪಕರನ್ನು ತಮ್ಮವರಂತೆ ಪರಿಭಾವಿಸಬೇಕು. ಅವರ ಪ್ರತಿಭೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪತ್ರಿಕೆಗಳು ಬಳಸುವಂಥ ಭಾಷೆ ಯನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಭಾಷಾ ಬೆಳವಣಿಗೆಗೆ ಗಂಭೀರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಭೌತಿಕವಾಗಿ ಸ್ಥಳಾಂತರಗೊಂಡಿದೆ. ಸ್ವಾಯತ್ತೆಯತ್ತ ಇನ್ನು ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನಿಂದ ಕನ್ನಡ ಕಟ್ಟುವ ನಿಟ್ಟಿನಲ್ಲಿ ದಾಪುಗಾಲಿಡಬೇಕಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ‘ಕೇಂದ್ರವು ಮರಳಿ ಮನೆಗೆ ಬಂದಂತಾ ಯಿತು’ ಎಂದು ಹರ್ಷ ವ್ಯಕ್ತಪಡಿಸಿದರು.

ನೂತನ ಕಟ್ಟಡಕ್ಕೆ 4 ಎಕರೆ 2 ಗುಂಟೆ ಜಾಗ ನೀಡಲಾಗಿದೆ. ಬೇಕಿದ್ದರೆ ಕನ್ನಡಕ್ಕಾಗಿ ಇನ್ನಷ್ಟು ಜಾಗ ನೀಡಲು ಸಿದ್ಧ ಎನ್ನುವ ಮೂಲಕ ಎಲ್ಲರ ಕರತಾಡನಕ್ಕೆ ಕಾರಣವಾದರು.‌

ಇದೇ ವೇಳೆ ಅವರು ‘ಕುಳಿತಲ್ಲೇ ಕುಳಿತು ಬೇಡಿದರೆ ಪ್ರಯೋಜನವಿಲ್ಲ. ಎದ್ದು ಹೋಗಿ ಬಾಗಿಲು ತಟ್ಟಬೇಕು’ ಎನ್ನುವ ಬೈಬಲ್‌ನ ವಾಕ್ಯವನ್ನು ಪ್ರಸ್ತಾಪಿಸಿ, ಇನ್ನು ಕೇಂದ್ರವು ಸಮಯ ವ್ಯರ್ಥ ಮಾಡದೆ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನೂತನ ಕಟ್ಟಡದ ಆವರಣದಲ್ಲಿ ಕನ್ನಡ ಧ್ವಜಾರೋಹಣ ಮಾಡಲಾಯಿತು. ಕೇಂದ್ರದ ಯೋಜನಾ ಪರಿವೀಕ್ಷಣಾ ಸದಸ್ಯರಾದ ಪ್ರೊ.ಎನ್.ಎಂ.ತಳವಾರ್, ಎನ್.ಎಸ್.ತಾರಾನಾಥ್ ಇದ್ದರು.

ಚರ್ಚೆ ಹುಟ್ಟು ಹಾಕಿದ್ದೇ ‘ಪ‍್ರಜಾವಾಣಿ’

ವಿದ್ವಾಂಸ ಪ್ರೊ.ಆರ್‌ವಿಎಸ್‌ ಸುಂದರಂ ಮಾತನಾಡಿ, ‘ತಮಿಳು ಭಾಷೆಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆತ ತಕ್ಷಣವೇ ‘ಪ್ರಜಾವಾಣಿ’ ದಿನಪತ್ರಿಕೆಯು ‘ಕನ್ನಡ ಪ್ರಾಚೀನ ಭಾಷೆ ಅಲ್ಲವೇ?‌’ ಎಂಬ ಲೇಖನವನ್ನು ಪ್ರಕಟಿಸುವ ಮೂಲಕ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಚರ್ಚೆಯನ್ನು ಹುಟ್ಟು ಹಾಕಿತು’ ಎಂದು ನೆನಪು ಮಾಡಿಕೊಂಡರು.

‘ಅಕ್ಕ’ ಜತೆ ಮೈಸೂರು ವಿಶ್ವವಿದ್ಯಾನಿಲಯ ಒಪ್ಪಂದ

ಅಮೆರಿಕದಲ್ಲಿರುವ ಕನ್ನಡ ಬಳಗ ‘ಅಕ್ಕ’ ಸಂಘಟನೆ ಜತೆ ಮೈಸೂರು ವಿಶ್ವವಿದ್ಯಾನಿಲಯವು ಸರ್ಟಿಫಿಕೆಟ್ ಕೋರ್ಸ್‌ ನೀಡುವ ಒಪ್ಪಂದ ಮಾಡಿಕೊಂಡಿದೆ ಎಂದು ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಪ್ರಕಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು