ಶನಿವಾರ, ಸೆಪ್ಟೆಂಬರ್ 18, 2021
26 °C
ಮಹಾರಾಷ್ಟ್ರದಿಂದ ಬಂದವರಿಂದಲೇ ಕುಕೃತ್ಯ

ಸರಗಳ್ಳತನಗಳ ಹಿಂದೆ ಇರಾನಿ ತಂಡ

– ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಗುರುವಾರ ನಡೆದ ಸರಗಳ್ಳತನಗಳ ಹಿಂದೆ ಇರಾನಿ ತಂಡದ ಕೈವಾಡ ಇರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೊರರಾಜ್ಯದಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಇದಕ್ಕಾಗಿಯೇ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ಕಳ್ಳರ ಪತ್ತೆಗಾಗಿ ಹೊರರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಈ ತಂಡದ ಸದಸ್ಯರು ಮಹಾರಾಷ್ಟ್ರದ ಮೂಲದವರು. ಇವರು ಪಲ್ಸರ್‌ ಬೈಕ್‌ನಲ್ಲಿಯೇ ರಾಜ್ಯದಿಂದ ರಾಜ್ಯಕ್ಕೆ ಬರುತ್ತಾರೆ. ಸ್ಥಳೀಯವಾಗಿ ಅಗ್ಗದ ವಸತಿಗೃಹಗಳಲ್ಲಿ ತಂಗುತ್ತಾರೆ. ಮರುದಿನ ಮತ್ತೆ ನೂರಾರು ಕಿಲೋಮೀಟರ್‌ ದೂರಕ್ಕೆ ತೆರಳುತ್ತಾರೆ.

ಇವರು ನೋಡಲು ಸ್ಥುರದ್ರೂಪಿಗಳೂ ಹಾಗೂ ಸಜ್ಜನರಂತೆ ಕಾಣುತ್ತಾರೆ. ನಯವಾಗಿ ಹಿಂದಿಯಲ್ಲಿ ಮಾತನ್ನಾಡುತ್ತಾರೆ. ವಿಳಾಸ ಕೇಳುವ ನೆವದಲ್ಲಿ ಮಹಿಳೆಯರಿಂದ ಸರಗಳನ್ನು ಕಸಿದು ಪರಾರಿಯಾಗುತ್ತಾರೆ.

ಒಮ್ಮೆ ಒಂದು ನಗರದಲ್ಲಿ ಐದಾರು ಕಡೆ ಸರಣಿ ಕಳ್ಳತನ ನಡೆಸಿ ಹೊರ ಹೋಗುವ ಇವರು ಮತ್ತೆ ಅದೇ ನಗರಕ್ಕೆ ಬರುವುದಿಲ್ಲ. ಒಂದಷ್ಟು ದಿನ ಸುಮ್ಮನಿದ್ದು, ಮತ್ತೊಂದು ನಗರದಲ್ಲಿ ಮತ್ತೆ ತಮ್ಮ ಕೈ ಚಳಕ ಮೆರೆಯುತ್ತಾರೆ.

ಮುಂಬೈ ಹಾಗೂ ಕೊಲ್ಲಾಪುರದಲ್ಲಿ ಹೆಚ್ಚಾಗಿ ಇವರು ವಾಸಿಸುತ್ತಾರೆ. ಇವರ ಪೂರ್ವಜರು ಸೈನಿಕರಾಗಿದ್ದರು. ಸಹಾಯಕ ಸೈನ್ಯ ಪದ್ದತಿ ಜಾರಿಗೆ ಬಂದಾಗ ದೇಶಿಯ ಸಂಸ್ಥಾನಗಳ ಅರಸರು ತಮ್ಮದೇ ಸೈನ್ಯವನ್ನು ವಿಸರ್ಜಿಸಬೇಕಾಗಿ ಬಂದಿತು. ಆಗ ಇವರು ಕೆಲಸ ಕಳೆದುಕೊಂಡರು. ಜತೆಗೆ, ಅಲೆಮಾರಿಗಳಾಗಿ ಪರಿವರ್ತಿತರಾದರು. ಇಂದಿಗೂ ಇವರ ವಂಶದವರು ಅಲೆಮಾರಿಗಳಾಗಿಯೇ ಇದ್ದಾರೆ. ಇವರಲ್ಲಿ ಹಲವರು ತಮ್ಮದೇ ಆದ ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ಸರಗಳ್ಳತನ, ಮನೆಗಳ್ಳತನಗಳನ್ನು ನಡೆಸುತ್ತಿದ್ದಾರೆ.

ಹೆಚ್ಚಿನವರು ಮುಂಬೈ, ಕೊಲ್ಲಾಪುರ ಸೇರಿದಂತೆ ಉತ್ತರ ಕರ್ನಾಟಕ ಕೆಲವು ಭಾಗಗಳಲ್ಲಿ ವಾಸವಿದ್ದಾರೆ. ಇವರ ಪತ್ತೆಗಾಗಿ ಮಹಾರಾಷ್ಟ್ರಕ್ಕೆ ನಗರದ ಪೊಲೀಸರು ಮೂರು ಪ್ರತ್ಯೇಕ ತಂಡಗಳಲ್ಲಿ ತೆರಳಿವೆಯಾದರೂ ಇವರಿಗೆ ಯಶಸ್ಸು ಸಿಗುವುದು ಅನುಮಾನ ಎನಿಸಿದೆ. ಏಕೆಂದರೆ, ಇರಾನಿ ತಂಡದ ಸದಸ್ಯರು ಕಳ್ಳತನ ಮಾಡಿದ ತಕ್ಷಣ ತಮ್ಮ ಊರಿಗೆ ವಾಪಸ್ಸಾಗುವುದಿಲ್ಲ. ರಾಜ್ಯವನ್ನೇ ತೊರೆಯುವ ಇವರು ಬೇರೊಂದು ರಾಜ್ಯದಲ್ಲಿ ಕೆಲವು ಕಾಲ ಇರುತ್ತಾರೆ. ನಂತರವಷ್ಟೇ ಇವರು ವಾಪಸ್ಸಾಗುತ್ತಾರೆ.

ಇಲ್ಲಿಯವರೆಗೆ ನಗರದಲ್ಲಿ ನಡೆದ ಸರಗಳ್ಳತನಗಳನ್ನು ಸ್ಥಳೀಯ ಕಳ್ಳರು ನಡೆಸಿದ್ದರು. ಆದರೆ, ಈ ಬಾರಿ ನಡೆದಿರುವ ಸರಣಿ ಸರಗಳವಿನಲ್ಲಿ ಇವರ ಪಾತ್ರ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಚುನಾವಣಾ ದೃಷ್ಟಿಯಿಂದ ನಗರದಲ್ಲಿರುವ ಬಹುತೇಕ ಠಾಣೆಯ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಶೇ 90ರಷ್ಟು ಇನ್‌ಸ್ಪೆಕ್ಟರ್‌ಗಳು ಹಾಗೂ ಎಸಿಪಿಗಳೂ ಹೊಸಬರೇ ಆಗಿದ್ದರೆ. ಇವರಿಗೆ ಸ್ಥಳೀಯ ಪ್ರದೇಶಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಜತೆಗೆ, ಚುನಾವಣಾ ನೀತಿಸಂಹಿತೆ ಮುಗಿದ ಬಳಿಕ ವಾಪಸ್ ತಮ್ಮ ಸ್ವಸ್ಥಾನಕ್ಕೆ ತೆರಳುತ್ತಾರೆ. ಹೀಗಾಗಿ, ಅಪರಾಧ ಪ್ರಕರಣಗಳನ್ನು ಬೇಧಿಸುವುದು ಇವರಿಗೆ ಕಷ್ಟಕರವಾಗಿ ಪರಿಣಮಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.